ಚಿಕ್ಕಮಗಳೂರು: ದಲಿತ ಮುಖಂಡನ ಹತ್ಯೆ ಪ್ರಕರಣ; ಆರೋಪಿಗಳ ಬಂಧನಕ್ಕೆ ದಸಂಸ ಒತ್ತಾಯ

Update: 2022-06-21 15:00 GMT

ಚಿಕ್ಕಮಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಲಿತ ಮುಖಂಡ ನರಸಿಂಹಮೂರ್ತಿ ಅವರನ್ನು ಹಾಡುಹಗಲೇ ಕೊಲೆಗೈದಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ದಸಂಸ ಪದಾಧಿಕಾರಿಗಳು, ಆರೋಪಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಹಿಂದೆ ಬೆಂಗಳೂರಿನ ಓರ್ವ ದಲಿತ ಕಾಂಗ್ರೆಸ್ ಮುಖಂಡನನ್ನು ಹತ್ಯೆ ಮಾಡಲಾಗಿದ್ದು, ಇದು ಎಲ್ಲರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೋರ್ವ ಮುಖಂಡನ ಹತ್ಯೆಯಾಗಿರುವುದು ಗಮನಿಸಿದರೆ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲಂದಂತಾಗಿದೆ. ಬಿಜೆಪಿ ಸರಕಾರ ದಲಿತರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ದಲಿತ ಮುಖಂಡ ನರಸಿಂಹಮೂರ್ತಿಯನ್ನು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅವರ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರೂ. ಪರಿಹಾರ ಘೋಷಿಸಬೇಕು. ಜೊತೆಗೆ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಬಿಳೇಕಲ್ಲು ಬಾಲಕೃಷ್ಣ, ಸಂಘಟನಾ ಸಂಚಾಲಕ ಯಲಗುಡಿಗೆ ಬಸವರಾಜ್, ಕಾರ್ಮಿಕ ವಿಭಾಗದ ತುಡುಕೂರು ಯೋಗೇಶ್, ತಾಲೂಕು ಸಂಘಟನಾ ಸಂಚಾಲಕರಾದ ಪ್ರಸನ್ನಕುಮಾರ್, ಸತೀಶ್ ಕೂದುವಳ್ಳಿ, ಕೆ.ಯು.ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News