ಬೇರೆಯವರು ಮಾಡಿದ ಕೆಲಸವನ್ನು ತೋರಿಸಿ ಪ್ರಧಾನಿ ಮೋದಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ: ಕುಮಾರಸ್ವಾಮಿ

Update: 2022-06-21 15:18 GMT
ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಜೂ. 21: ‘ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಮೋದಿ ಬೆಂಗಳೂರಿನಲ್ಲಿ ಚಾಲನೆ ಮಾಡಿದ ಯೋಜನೆಗಳು ಶುರುವಾಗಿದ್ದು ಬಿಜೆಪಿ ಸರಕಾರದಿಂದ ಅಲ್ಲ. ಆದರೆ, ನಾನೇ ಆರಂಭ ಮಾಡುತ್ತಿದ್ದೇನೆಂದು ಅವರು ಭಾಷಣ ಮಾಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯಕ್ಕೆ ಎರಡು ದಿನ ಪ್ರಧಾನಿ ಬಂದಿದ್ದರು. ಅವರ ಆಗಮನದ ಹಿನ್ನೆಲೆಯಲ್ಲಿ ಪ್ರೊಗ್ರೆಸ್ ರಿಪೋರ್ಟ್ ಅನ್ನು ಕೊಡಲಾಗಿದೆ. 33 ಸಾವಿರ ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಆದರೆ, ಮೋದಿ ತಾವೇ ರೂಪಿಸಿದ ಹೊಸ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು' ಎಂದು ಆಗ್ರಹಿಸಿದರು.

‘ಬೆಂಗಳೂರು ತಮ್ಮಿಂದಲೇ ಬೆಳಕು ಕಾಣುತ್ತಿದೆ ಇದೆ ಅನ್ನುವ ಹಾಗಿತ್ತು ಮೋದಿ ಭಾಷಣ. ಉಪನಗರ ರೈಲ್ವೆ ಯೋಜನೆ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. 2018ರಲ್ಲಿ ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ತಿನ್ನುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ ರೈಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.

"ಪ್ರಧಾನಮಂತ್ರಿ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾದಾಗ ಬರಲಿಲ್ಲ, ಯಾವುದೇ ಸಂಕಷ್ಟದ ಸಮಯದಲ್ಲೂ ಮೋದಿ ಬರಲಿಲ್ಲ. ಪ್ರತಿಯೊಂದು ವಿಷಯದಲ್ಲೂ ರಾಜ್ಯದ ಬಗ್ಗೆ ಮೋದಿ ಮಲತಾಯಿ ಧೋರಣೆ ಅನುಸರಿಸಿದರು. ಹೀಗಾಗಿ ಬಿಜೆಪಿ ನಾಯಕರಿಗೆ ಜನರ ಮುಂದೆ ಹೋಗಲು ಮುಖ ಇಲ್ಲ. ಹೀಗಾಗಿ ಮೋದಿಯವರನ್ನು ಮುಂದೆ ಇಟ್ಟುಕೊಂಡ ಹೋಗುತ್ತಿದ್ದಾರೆ" ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹುಟ್ಟುಹಾಕಿದ ‘ಆಪರೇಶನ್ ಕಮಲ' ಎಂಬ ಅನೈತಿಕ ಮತ್ತು ಅನಿಷ್ಟ ರಾಜಕಾರಣವನ್ನು ಎಂದು ಬಿಜೆಪಿ ರಾಷ್ಟ್ರೀಕರಣ ಮಾಡಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾಡುತ್ತಿದೆ. ಈಗಾಗಲೇ ಹಲವಾರು ರಾಜ್ಯಗಳಲ್ಲಿ ಆಪರೇಶನ್ ಕಮಲದ ಮೂಲಕ ಬಿಜೆಪಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ. ಮಧ್ಯಪ್ರದೇಶದಲ್ಲಿಯೂ ಇಂಥದ್ದೇ ಅಡ್ಡದಾರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜಸ್ತಾನದಲ್ಲಿಯೂ ಇದು ಆಗಬೇಕಿತ್ತು, ಆದರೆ ಆಗಲಿಲ್ಲ. ಮಹಾರಾಷ್ಟ್ರದಲ್ಲಿ ಈಗ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಪರೇಶನ್ ಕಮಲ ನಡೆಸಿದಾಗ ನಾನು ಸಹನೆಯಿಂದ ನಡೆದುಕೊಂಡೆ. ಯಾವುದೇ ಗಲಭೆ, ಗಲಾಟೆಗೆ ಅವಕಾಶ ನೀಡಲಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಸುಮ್ಮನಿರಲಾರದು. ಆ ಪಕ್ಷದ ಕಾರ್ಯಕರ್ತರು, ಆ ರಾಜ್ಯದ ಜನರು ತಾಳ್ಮೆಯಿಂದ ವರ್ತಿಸಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News