ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ

Update: 2022-06-21 16:35 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (File Photo: PTI)

ಬೆಂಗಳೂರು, ಜೂ. 21: ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಉಚಿತ ಚಿಕಿತ್ಸೆ ವ್ಯವಸ್ಥೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದರು.

ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ, ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದಾಗ, ಹಸುಗೂಸನ್ನು ಎತ್ತಿಕೊಂಡು ಕಾಯುತ್ತಿದ್ದ ಶಂಕ್ರಮ್ಮ ಅವರ  ಸಮಸ್ಯೆಯ ಕುರಿತು ವಿಚಾರಿಸಿದಾಗ, ಶಂಕ್ರಮ್ಮನ ಮಗು ಕೃಷ್ಣವೇಣಿ, ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದ್ದು, ನೆರವು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಶಂಕ್ರಮ್ಮನ ಮನವಿಗೆ ಕೂಡಲೇ ಸ್ಪಂದಿಸಿದ ಸಿಎಂ ಮಗು ಕೃಷ್ಣವೇಣಿಯ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದರು.

ಇದಾಗಿ ಎರಡು ತಾಸಿನೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಪತ್ರ ಬರೆದು, ಕೃಷ್ಣವೇಣಿಯ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಮಗುವಿಗೆ ಸಂಪೂರ್ಣ ಚಿಕಿತ್ಸೆ ನೀಡಿದ ನಂತರ ಸರಕಾರಕ್ಕೆ ಬಿಲ್‍ಗಳನ್ನು ಸಲ್ಲಿಸುವಂತೆ ಪತ್ರದಲ್ಲಿ ಎಸ್‍ಡಿಎಂ ಆಸ್ಪತ್ರೆಗೆ ಸೂಚಿಸಲಾಗಿದೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತು ಕೆಲವೇ ಗಂಟೆಗಳಲ್ಲಿ ಸಿಎಂಸ್ಪಂದನೆಗೆ ಮಗುವಿನ ತಾಯಿ ಶಂಕ್ರಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News