ಪರಿಷ್ಕೃತ ಪಠ್ಯ ರದ್ದುಪಡಿಸಿ, ಹಿಂದಿನ ಪಠ್ಯವನ್ನೇ ಬೋಧನೆ ಮಾಡಿ: ಸಿಎಂಗೆ ಸಾಹಿತಿಗಳ ಮನವಿ

Update: 2022-06-22 14:55 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (File Photo)

ಬೆಂಗಳೂರು, ಜೂ. 22: ‘ಪಠ್ಯ ಪುಸ್ತಕಗಳ ಪರಿಷ್ಕರಣೆಯಿಂದ ಗೊಂದಲ, ವಿವಾದಗಳು ಮುಂದುವರೆದಿದ್ದು, ಇದು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಲು ದಾರಿ ಮಾಡಿಕೊಡುತ್ತದೆ. ಆದುದರಿಂದ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ರದ್ದುಪಡಿಸಿ, 2021-22ರ ಪಠ್ಯವನ್ನೇ ಬೋಧಿಸಬೇಕು. ಈ ಸಂಬಂಧ ಚರ್ಚೆಗೆ ಸಮಯ ನಿಗದಿಪಡಿಸಬೇಕು' ಎಂದು ಕೋರಿ ಸಾಹಿತಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಬುಧವಾರ ಹಿರಿಯ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ.ವಿಜಯಾ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಕೆ.ಎಸ್.ವಿಮಲಾ, ಡಾ.ಶ್ರೀಪಾದ ಭಟ್, ಡಾ.ವಸುಂಧರಾ ಭೂಪತಿ ಅವರುಗಳು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ‘ಪಠ್ಯ ಪರಿಷ್ಕರಣೆ ಸಮಿತಿ ಒಂದರಿಂದ 10ನೆ ತರಗತಿಯ ಭಾಷೆ ಮತ್ತು ಸಮಾಜ ವಿಜ್ಞಾನ ಪಠ್ಯಗಳಲ್ಲಿ ಮಾಡಿದ ಆಮೂಲಾಗ್ರ ಬದಲಾವಣೆಗಳ ಕಾರಣದಿಂದ ಉಂಟಾದ ವಿವಾದಗಳು ತಮ್ಮ ಗಮನಕ್ಕೆ ಬಂದಿರುತ್ತದೆ' ಎಂದು ತಿಳಿಸಲಾಗಿದೆ.

‘ಪಠ್ಯ ಮರು ಪರಿಷ್ಕರಣೆ ಸಮಿತಿಯ ಸದಸ್ಯರ ಸಲಹೆಗಳನ್ನು ಕಡೆಗಣಿಸಿ, ಸಮಿತಿ ಅಧ್ಯಕ್ಷರು, ಏಕಪಕ್ಷೀಯವಾಗಿ ಪರಿಷ್ಕರಣೆ ಮಾಡಿದ್ದಾರೆಂಬ ಮಾಹಿತಿಯಂತೂ ಆತಂಕಕಾರಿ ಸಂಗತಿ. ಈ ಏಕವ್ಯಕ್ತಿ ಪರಿಷ್ಕರಣೆಯೂ ಒಂದು ಅಕ್ರಮವಾಗಿದೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧ. ಪಠ್ಯಪುಸ್ತಕದಲ್ಲಿ ಮಾಡಿರುವ ಬದಲಾವಣೆಗಳು ಸಂವಿಧಾನ ನೀತಿ-ಸಂಹಿತೆಗೆ ಬದ್ಧವಾಗಿಲ್ಲ. ಈ ಸಮಿತಿಯಲ್ಲಿ ಒಂದೇ ಜಾತಿಯ ಜನ ಸದಸ್ಯರು ಇರುವುದು ಸಾಮಾಜಿಕ ನ್ಯಾಯ ವಿರುದ್ಧ. ಈ ಸಮಿತಿ ಎನ್‍ಸಿಎಫ್ 2005ರ ಮಾರ್ಗಸೂಚಿಗಳನ್ನು ಪಾಲಿಸಿಲ್ಲ, ಈ ಬದಲಾವಣೆಗಳಿಗೆ ಕಾರಣಗಳನ್ನು ಸ್ಪಷ್ಟಪಡಿಸಲಿಲ್ಲ.

ಮುಖ್ಯವಾಗಿ ವೈಚಾರಿಕತೆ, ಆಧುನಿಕ ಪ್ರಜ್ಞೆ, ವೈಜ್ಞಾನಿಕ ಮನೋಧರ್ಮ, ಜಾತ್ಯತೀತ ಮೌಲ್ಯಗಳಿಗೆ ಮನ್ನಣೆ ದೊರಕಿಲ್ಲ. ಈ ನಾಡಿನ ಸುಧಾರಕರಾದ ಬಸವಣ್ಣ, ನಾರಾಯಣ ಗುರು, ಸಾವಿತ್ರಿ ಬಾಯಿಫುಲೆ, ಅಂಬೇಡ್ಕರ್, ಕುವೆಂಪು ಹಾಗೂ ನಮ್ಮ ನೆಲದ ಪುರಂದರ ದಾಸರು, ಅಕ್ಕ ಮಹಾದೇವಿ, ಕನಕದಾಸರು, ಸೂಫಿ ಸಂತರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರ ಕುರಿತ ಪಠ್ಯಗಳನ್ನು ಕೈ ಬಿಟ್ಟಿರುವುದು ಅಪೇಕ್ಷಣೀಯವಲ್ಲ ಮತ್ತು ಇದು ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟು ಮಾಡಿದೆ' ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.

‘ಈ ಸಮಿತಿಯ ಕಾರ್ಯ ವೈಖರಿಯಲ್ಲಿ ಎಲ್ಲಿಯೂ ಪಾರದರ್ಶಕತೆ ಕಂಡು ಬರುತ್ತಿಲ್ಲ. ಶಿಕ್ಷಣ ತಜ್ಞರು, ವಿಷಯ ತಜ್ಞರು ಹಾಗೂ ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿದ ವಿವರಗಳೂ ಲಭ್ಯವಿಲ್ಲ. ಈ ಪರಿಷ್ಕರಣೆಯ ಲೋಪದೋಷಗಳ ವಿವರಗಳನ್ನು ತಮಗೆ ತಲುಪಿಸಲಾಗಿದೆ. ತಾವು ಈ ಟಿಪ್ಪಣಿಯನ್ನು ಕೂಲಂಕಷವಾಗಿ ಪರಿಶೀಲಿಸಿರುತ್ತೀರಿ ಎಂದು ಭಾವಿಸಿದ್ದೇವೆ.

ಎರಡು ವರ್ಷಗಳ ಕಲಿಕೆ ಅಂತರದಿಂದ ಉಂಟಾದ ಕಲಿಕಾ ನಷ್ಟವನ್ನು ತುಂಬಿಕೊಳ್ಳಲು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಬಗೆಯ ಪ್ರಯೋಗಗಳಿಗೆ ಮುಂದಾಗದೇ ಯಥಾಸ್ಥಿತಿ ಕಾಪಾಡಿಕೊಳ್ಳಬೇಕಾಗಿತ್ತು. ಆದರೆ ಪರಿಷ್ಕರಣೆ ವಿವಾದದಿಂದ ಅದು ಸಾಧ್ಯವಾಗದಿರುವುದು ಖೇದಕರ. ಶಾಲಾ ಶಿಕ್ಷಕರು, ಪೋಷಕರಿಗೆ ಈ ಮುಂಚೆ ಕಲಿಕಾ ಚೇತರಿಕೆ ಯೋಜನೆಯಡಿ ಪಾಠ ಮಾಡುವಂತೆ ಆದೇಶಿಸಲಾಗಿತ್ತು. ಆದರೆ, ಅದಕ್ಕೆ ಅಗತ್ಯವಾದ ಕಲಿಕಾ ಪುಸ್ತಕಗಳು ಸೂಕ್ತ ಸಮಯಕ್ಕೆ ಲಭ್ಯವಾಗಿಲ್ಲ ಎಂಬುದು ವಾಸ್ತವ ಸ್ಥಿತಿ. ಈಗ ವಿವಾದಿತ ಪಠ್ಯ ಪುಸ್ತಕಗಳನ್ನು ಬೋಧಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಪರಿಷ್ಕರಣೆ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಆದರೆ, ತಾವು ‘ಪಠ್ಯ ಬದಲಾವಣೆಗೆ ಮುಕ್ತ ಮನಸ್ಸು, ಸರಕಾರವು ಪ್ರತಿಷ್ಠೆಗೆ ಬಿದ್ದಿಲ್ಲ. ಏನೆಲ್ಲ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಮಾಡಲಾಗುವುದು' ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಪರಿಷ್ಕರಣೆಯ ಬದಲಾವಣೆಗಳನ್ನು ಹೇಗೆ ಪುನರ್ ಮುದ್ರಿಸಲಾಗುವುದು? ಹೇಗೆ ಹಂಚಲಾಗುವುದು? ಹೇಗೆ ಬೋಧಿಸಲಾಗುವುದು? ಎಂಬ ಕುರಿತು ಎಲ್ಲಿಯೂ ಸ್ಪಷ್ಟತೆಯಿಲ್ಲ. ಇವು ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ ಕೂಡಲೇ ಈ ಕುರಿತು ಚರ್ಚಿಸಲು ಸಮಯಾವಕಾಶ ನೀಡಬೇಕು. ಜೊತೆಗೆ 2021-22ನೆ ಸಾಲಿನ ಪಠ್ಯ ಪುಸ್ತಕಗಳನ್ನು ಬೋಧಿಸಬೇಕು' ಎಂದು ಪತ್ರದಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News