ಮಂಗಳೂರು ಸ್ಮಾರ್ಟ್‌ಸಿಟಿ ಕಾಮಗಾರಿಯಿಂದಾದ ರಸ್ತೆ ಗುಂಡಿ ಮುಚ್ಚಲು ಮನಪಾ ಕ್ರಮ

Update: 2022-06-23 18:03 GMT

ಮಂಗಳೂರು, ಜೂ.23: ನಗರದಲ್ಲಿ ಸ್ಮಾರ್ಟ್‌ಸಿಟಿ ಮತ್ತು ಗೇಲ್ ಇಂಡಿಯಾ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಈ ಸಂಬಂಧ ಕಳಪೆ ಸುರಕ್ಷತಾ ಕ್ರಮಗಳ ಕುರಿತು ‘ವಾರ್ತಾಭಾರತಿ’ಯಲ್ಲಿ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಗುಂಡಿಗಳನ್ನು ಸರಿಪಡಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

‘ಮಂಗಳೂರು: ಸ್ಮಾರ್ಟ್‌ಸಿಟಿ, ಗೇಲ ಇಂಡಿಯಾ ಕಾಮಗಾರಿಯಿಂದ ಅಲ್ಲಲ್ಲಿ ಗುಂಡಿ, ಜನರಿಗೆ ಪ್ರಾಣ ಸಂಕಟ’ ಎಂಬ ಶೀರ್ಷಿಕೆಯಲ್ಲಿ ಮಾರಣಾಂತಿಕ ರಸ್ತೆ ಗುಂಡಿಗಳ ಬಗ್ಗೆ ವಿಶೇಷ ವರದಿ ಗುರುವಾರದ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗಿತ್ತು.

ಇದರಲ್ಲಿ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಗೇಲ್ ಇಂಡಿಯಾ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದ ರಸ್ತೆಯಲ್ಲಿ ಆಗಿರುವ ಅಪಾಯಕಾರಿ ಗುಂಡಿಗಳು ಮತ್ತು ಅವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಈ ಸಮಸ್ಯೆಗಳ ಬಗ್ಗೆ ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಹಾಗೂ ಮಂಗಳೂರು ಸ್ಮಾರ್ಟ್‌ಸಿಟಿ ಕಾಮಗಾರಿಯ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ ಕೆ.ಎಸ್. ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯಲಾಗಿತ್ತು. ಈ ಇಬ್ಬರು ಅಧಿಕಾರಿಗಳೂ ಈ ವಿಚಾರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ‘ವಾರ್ತಾಭಾರತಿ’ಗೆ ಭರವಸೆ ನೀಡಿದ್ದರು.

ಅದರಂತೆ ಕಾರ್ಯಪ್ರವೃತ್ತರಾಗಿ ಗುರುವಾರ ನಗರದ ಬಲ್ಮಠದಲ್ಲಿ ಮನಪಾದ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಈ ಕಾಮಗಾರಿಯ ಚಿತ್ರಗಳನ್ನು ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಗುರುವಾರ ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಬಲ್ಮಠ ಜಂಕ್ಷನ್‌ನಲ್ಲಿನ ರಸ್ತೆ ಗುಂಡಿಗಳಿಗೆ ಕಾಂಕ್ರಿಟ್ ಮತ್ತು ಮಣ್ಣು ಹಾಕಿ ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ಅದೇರೀತಿ ಡಾ.ಬಿ.ಆರ್.ಅಂಬೇಡ್ಕರ್ (ಜ್ಯೋತಿ) ವೃತ್ತದಲ್ಲಿ ಅಪಾಯಕಾರಿ ಹೊಂಡವನ್ನು ಕಾಂಕ್ರಿಟ್‌ನಿಂದ ತುಂಬಿಸಿ ಸರಿಪಡಿಸಲಾಗಿದೆ. ಬೆಂದೂರ್‌ವೆಲ್‌ನಲ್ಲಿ ಅಗೆದಿದ್ದ ಸ್ಥಳವನ್ನು ಮಣ್ಣು ತುಂಬಿ ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ಈ ಎಲ್ಲಾ ಪ್ರದೇಶಗಳಲ್ಲಿ ಸ್ಮಾರ್ಟ್‌ಸಿಟಿ ಮತ್ತು ಗೇಲ್ ಇಂಡಿಯಾ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆ ಗುಂಡಿಗಳು ಸೃಷ್ಟಿಯಾಗಿರುವ ಬಗ್ಗೆ ವಾರ್ತಾಭಾರತಿಯ ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News