ರೈತರ ಕೊರಳು ಸುತ್ತಿಕೊಂಡಿರುವ ಉರುಳು

Update: 2022-06-24 03:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ದಿನಾ ಸಾಯುವವರಿಗೆ ಅಳುವವರು ಯಾರು?’ ಎನ್ನುವಂತೆ, ರೈತ ವಿರೋಧಿ ನೂತನ ಕಾನೂನುಗಳನ್ನು ಸರಕಾರ ಹಿಂದೆಗೆದ ಬೆನ್ನಿಗೇ ರೈತರ ಸ್ಥಿತಿಯ ಕುರಿತಂತೆ ಚರ್ಚೆಗಳು ನಿಂತೇ ಬಿಟ್ಟಿವೆ. ಸರಕಾರ ರೈತರನ್ನು ಬದಿಗಿಟ್ಟು, ಸೈನಿಕರ ಬೆನ್ನು ಹತ್ತಿದೆ. ರೈತ ವಿರೋಧಿ ಕಾನೂನುಗಳನ್ನು ಹಿಂದೆಗೆದುಕೊಂಡಿರುವುದೇ ರೈತರಿಗೆ ನೀಡಿದ ಮಹದುಪಕಾರವೆಂಬಂತೆ ವರ್ತಿಸುತ್ತಿರುವ ಸರಕಾರ, ರೈತರ ಮೂಲಭೂತ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸಿಲ್ಲ. ಕೋಮುಗಲಭೆಗಳಲ್ಲಿ, ಅತ್ಯಾಚಾರಗಳಲ್ಲಿ ಮೃತಪಟ್ಟವರ ಸುದ್ದಿಗಳು ಮಹತ್ವ ಪಡೆಯುವಷ್ಟು ರೈತರ ಆತ್ಮಹತ್ಯೆಗಳು ಮಾಧ್ಯಮಗಳಲ್ಲಿ ಮಹತ್ವವನ್ನು ಪಡೆಯುತ್ತಿಲ್ಲ. ‘ರೈತರ ಆತ್ಮಹತ್ಯೆ’ಗಳನ್ನು ಸಹಜ ಸಂಗತಿಯಾಗಿ ಅವುಗಳು ಪರಿಗಣಿಸಿದಂತಿದೆ. ಪಂಜಾಬ್ ರಾಜ್ಯದ ಆರು ಜಿಲ್ಲೆಗಳಲ್ಲಿ 2000-2018ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಶೇ.88ರಷ್ಟು ಮಂದಿಯ ಸಾವಿಗೆ ಸಾಲದ ಬಾಧೆ ಕಾರಣವೆಂದು ಇತ್ತೀಚಿನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ಭಾರತದಲ್ಲಿ ಸಮಗ್ರ ಹಸಿರು ಕ್ರಾಂತಿಗೆ ಸಾಕ್ಷಿಯಾದ ಪಂಜಾಬ್ ರಾಜ್ಯದಲ್ಲಿ 2000-2018ರ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಶೇ.77ಕ್ಕೂ ಅಧಿಕ ಮಂದಿ ಹೆಚ್ಚೆಂದರೆ ಎರಡು ಎಕರೆಯವರೆಗೆ ಜಮೀನು ಹೊಂದಿರುವಂತಹ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಾಗಿದ್ದಾರೆ. ಈ ಸಣ್ಣ ಹಿಡುವಳಿದಾರರು ಈ ರಾಜ್ಯದ ಒಟ್ಟು ಹಿಡುವಳಿದಾರರ ಶೇ.34ರಷ್ಟಿದ್ದಾರೆ.ಸಾವಿಗೆ ಶರಣಾದ ರೈತರಲ್ಲಿ ಶೇ.41 ಮಂದಿ 31-35ರ ವಯೋಮಾನದೊಳಗಿನವರು ಹಾಗೂ ಶೇ.33ರಷ್ಟು ಮಂದಿಯ ಕುಟುಂಬಗಳಲ್ಲಿ ಬೇರೊಬ್ಬ ದುಡಿಯುವ ಸದಸ್ಯನಿಲ್ಲ. ಶೇ.45ರಷ್ಟು ಮಂದಿ ಅನಕ್ಷರಸ್ಥರು ಮತ್ತು ಶೇ.96ರಷ್ಟು ಮಂದಿ ಸಾಮಾಜಿಕ-ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರಲಿಲ್ಲವೆಂದು ಅಧ್ಯಯನ ವರದಿ ತಿಳಿಸಿದೆ. ಸಾವಿಗೆ ಶರಣಾದ ರೈತರ ಹೆಚ್ಚಿನ ಕುಟುಂಬಗಳು ಅತ್ಯಂತ ದುಸ್ಥಿತಿಗೆ ದೂಡಲ್ಪಟ್ಟಿದ್ದು, ಅವರಿಗೆ ತುರ್ತು ನೆರವಿನ ಅಗತ್ಯವಿದೆ. ಆದುದರಿಂದ ಅವರಿಗೆ ಲಭಿಸಬೇಕಾಗಿರುವ ಯಾವುದೇ ನೆರವನ್ನು ವಿಳಂಬಿಸಬಾರದು ಎಂದು ಈ ಅಧ್ಯಯನ ವರದಿಯು ಒತ್ತಾಯಿಸಿದೆ. ಈ ಅಧ್ಯಯನದಲ್ಲಿ ಕಂಡುಕೊಂಡಂತಹ ಅಂಶಗಳನ್ನು ರಾಷ್ಟ್ರಾದ್ಯಂತ ಬಹುತೇಕ ಸಣ್ಣ ರೈತರು ಎದುರಿಸುತ್ತಿರುವ ದೇಶವ್ಯಾಪಿ ಬಿಕ್ಕಟ್ಟಿನ ಪರಿಸ್ಥಿತಿಯ ಜೊತೆಗೆ ಸಂಬಂಧಕಲ್ಪಿಸಬೇಕಾಗಿದೆ. ಸರಕಾರ ಹಾಗೂ ಕಾರ್ಪೊರೇಟ್ ಕೃಷಿ ಉದ್ಯಮ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಳಕೆಗೆ ಉತ್ತೇಜಿಸುತ್ತಿರುವ ತಂತ್ರಜ್ಞಾನವು ಅತ್ಯಂತ ದುಬಾರಿಯಾಗಿದೆ ಮತ್ತು ಅದು ಪರಿಸರದ ಮೇಲೂ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಹಾಗೂ ಅಂತಿಮವಾಗಿ ಅದು ಆದಾಯದಲ್ಲಿ ಇಳಿಕೆಗೆ ಕಾರಣವಾಗುತ್ತಿದೆ. ಏನೇ ಇದ್ದರೂ ಈ ತಂತ್ರಜ್ಞಾನಗಳ ಬಳಕೆಯಿಂದ ಅತ್ಯಧಿಕ ವೆಚ್ಚಗಳ ಹೊರೆಯುಂಟಾಗುತ್ತದೆಯಲ್ಲದೆ ಹವಾಮಾನದ ತೊಂದರೆ ಅಥವಾ ಕೀಟ ಬಾಧೆ ಮತ್ತಿತರ ಪ್ರತಿಕೂಲ ಸನ್ನಿವೇಶಗಳು ಕೂಡಾ ರೈತರನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ. ಎರಡನೆಯದಾಗಿ ಶಿಕ್ಷಣ ಹಾಗೂ ಆರೋಗ್ಯದಂತಹ ಮಹತ್ವದ ಕ್ಷೇತ್ರಗಳಿಗೆ ತಗಲುವ ವೆಚ್ಚಗಳನ್ನು ಭರಿಸಲು ರೈತ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಒಂದೇ ಒಂದು ತುರ್ತು ಸನ್ನಿವೇಶದ ವೈದ್ಯಕೀಯ ವೆಚ್ಚವು ಕೂಡಾ ರೈತನನ್ನು ದೊಡ್ಡ ಮೊತ್ತದ ಸಾಲದ ಬಲೆಗೆ ಬೀಳುವಂತೆ ಮಾಡುತ್ತವೆ.

  ರೈತರು ಎದುರಿಸುತ್ತಿರುವ ಬಹುತೇಕ ಗಂಭೀರ ಸಮಸ್ಯೆಗಳಿಗೆ, ಸರಕಾರಗಳು ಹಾಗೂ ಉದ್ಯಮ ಹಿತಾಸಕ್ತಿಗಳ ಅಪವಿತ್ರ ಮೈತ್ರಿಯೇ ಕಾರಣವಾಗಿದೆ. ಹೀಗಾಗಿ ಆ ಸಮಸ್ಯೆಗಳಿಗೆ ಸುಸ್ಥಿರ, ವಿಶ್ವಸನೀಯ ಹಾಗೂ ನೈಜವಾದ ಪರಿಹಾರವನ್ನು ಕಲ್ಪಿಸುವುದೇ ಕಷ್ಟಕರವಾಗಿದೆ. ಬದಲಿಗೆ ಕುಲಾಂತರಿ ಬೆಳೆಗಳು ಹಾಗೂ ಆಹಾರವನ್ನು ಉತ್ತೇಜಿಸುವಂತಹ ಬೃಹತ್ ಕೃಷಿ ಉದ್ಯಮ ಕಾರ್ಪೊರೇಟ್ ಸಂಸ್ಥೆಗಳ ಜೊತೆ ಸರಕಾರಗಳ ಒಡನಾಟ ಹೆಚ್ಚುತ್ತಿದೆ. ಅಂದರೆ ಸಣ್ಣ ರೈತರ ಸಮಸ್ಯೆಗೆ ಪರಿಹಾರವೆಂದರೆ, ಆ ರೈತರನ್ನು ಶಾಶ್ವತವಾಗಿ ಇಲ್ಲವಾಗಿಸುವುದು ಎಂದು ಸರಕಾರ ಭಾವಿಸಿದಂತಿದೆ.
 ಪರಿಸರಕ್ಕೆ ಪೂರಕವಾದ ಹಾಗೂ ನ್ಯಾಯಯುತವಾದ ಕೃಷಿ ಪದ್ಧತಿಗಳ ಕಡೆಗೆ ಹೊರಳುವ ಬಗ್ಗೆ ರೈತರು ಯೋಚಿಸಬೇಕು. ಇದು ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ ಹಾಗೂ ಯೋಗ್ಯ ಪ್ರಮಾಣದಲ್ಲಿ ಆರೋಗ್ಯಕರ ಆಹಾರ ಬೆಳೆಯ ಇಳುವರಿಯನ್ನು ತಂದುಕೊಡಲಿದೆ. ಒಂದು ವೇಳೆ ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿದ್ದೇ ಆದಲ್ಲಿ ಈ ಬೆಳೆಗಳಿಗೆ ಉತ್ತಮ ದರವೂ ದೊರೆಯಲಿದೆ. ಇದರ ಜೊತೆಗೆ ಭೂರಹಿತ ಕೃಷಿಕರಿಗೆ ಜಮೀನು ಒದಗಿಸುವ ಬಗ್ಗೆ ಸರಕಾರ ಯೋಚಿಸಬೇಕು. ಆದರೆ ಅದಕ್ಕಾಗಿ ಇನ್ನೊಂದು ರೈತ ಚಳವಳಿ ಈ ನೆಲದಲ್ಲಿ ಹೊಸದಾಗಿ ಹುಟ್ಟುವ ಅಗತ್ಯವಿದೆ. ಭೂರಹಿತ ಕಾರ್ಮಿಕರು ಮತ್ತು ಸಣ್ಣ ರೈತರ ಪರವಾಗಿ ಈಗ ಇರುವ ರೈತ ನಾಯಕರು, ಸರಕಾರದ ಜೊತೆಗೆ ಕದನಕ್ಕಿಳಿಯುವುದು ಕಷ್ಟ. ಇದಕ್ಕಾಗಿ ಮಹಿಳೆಯರ ನೇತೃತ್ವದಲ್ಲಿ ಹೋರಾಟವೊಂದರ ಅಗತ್ಯವಿದೆ. ಕಡಿಮೆ ವೆಚ್ಚದ, ಉತ್ತಮ ಗುಣಮಟ್ಟದ ಆರೋಗ್ಯಪಾಲನೆ ಹಾಗೂ ಶಿಕ್ಷಣಕ್ಕೆ ಈ ಹೋರಾಟ ಒತ್ತು ನೀಡಬೇಕಾಗಿದೆ. ಅಲ್ಲದೆ ವರದಕ್ಷಿಣೆ ಪದ್ಧತಿ, ಅದ್ದೂರಿ ಕಾರ್ಯಕ್ರಮಗಳು, ಕೊಳ್ಳುಬಾಕ ಸಂಸ್ಕೃತಿಯನ್ನು ಕಡಿಮೆಗೊಳಿಸಬೇಕಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ಮದ್ಯ ಮತ್ತಿತರ ಅಮಲುಪದಾರ್ಥಗಳಿಗೆ ಕಡಿವಾಣ ಬೀಳಬೇಕು. ಇದಕ್ಕೆ ಪೂರಕವಾದ ನೀತಿಗಳನ್ನು ರೂಪಿಸುವಂತೆ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೇರಬೇಕಾಗಿದೆ. ಸಾಲ ಮನ್ನಾವು ತಾತ್ಕಾಲಿಕ ಪರಿಹಾರವನ್ನು ಒದಗಿಸಬಲ್ಲದು. ಆದರೆ ರೈತರ ಸಾಲಬಾಧ್ಯತೆಯನ್ನು ಕಡಿಮೆಗೊಳಿಸಲು, ಇನ್ನೂ ಹೆಚ್ಚಿನ ಸಮಗ್ರ ಹಾಗೂ ಸುಸ್ಥಿರವಾದ ಪ್ರಯತ್ನಗಳನ್ನು ನಡೆಸಬೇಕಾದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News