ಶ್ರೀನಿವಾಸ್ ಬಜಾಲ್‌ರ 20ನೇ ವಾರ್ಷಿಕ ಹುತಾತ್ಮ ದಿನಾಚರಣೆ

Update: 2022-06-24 13:30 GMT

ಮಂಗಳೂರು: ಶ್ರೀನಿವಾಸ್ ಬಜಾಲ್‌ರ ೨೦ನೇ ವಾರ್ಷಿಕ ಹುತಾತ್ಮ ದಿನಾಚರಣೆಯು ಶುಕ್ರವಾರ ಬಜಾಲ್‌ನಲ್ಲಿ ನಡೆಯಿತು.

ಧ್ವಜಾರೋಹಣಗೈದು ಮಾತನಾಡಿದ ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಪ್ರಸಕ್ತ ಸನ್ನಿವೇಶದಲ್ಲಿ ಕೋಮುವಾದವೆಂಬ ವಿಷ ದೇಶದುದ್ದಗಲಕ್ಕೂ ಆವರಿಸಿ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿದೆ. ಕೇಂದ್ರದ ಬಿಜೆಪಿ ಸರಕಾರ ಫ್ಯಾಸಿಸ್ಟ್ ಮಾದರಿಯಲ್ಲಿ ದೇಶವನ್ನಾಳುತ್ತಿದೆ. ಸಮಾಜದಲ್ಲಾಗುವ ಅನ್ಯಾಯ ದಬ್ಬಾಳಿಕೆಗಳ ವಿರುದ್ದ, ಬಿಜೆಪಿ ಸರಕಾರದ ಕೋಮು ರಾಜಕಾರಣದ ಆಡಳಿತ ನೀತಿಯ ವಿರುದ್ದ ಧ್ವನಿ ಎತ್ತಿದರೆ ಅಂತಹ ಧ್ವನಿಯನ್ನು ಹಿಂಸೆಯ ಮೂಲಕ ಹತ್ತಿಕ್ಕುವ ಅಥವಾ ದೇಶದ್ರೋಹದ ಪ್ರಕರಣ ದಾಖಲಿಸಿ ಹೋರಾಟವನ್ನು ಕುಗ್ಗಿಸುವ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದರು.

ದೇಶದಾದ್ಯಂತ ಆರೆಸ್ಸೆಸ್ ನಡೆಸುವ ಕ್ರೌರ್ಯಕ್ಕೆ ಎದುರಾಗಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ನಡೆದ ಹೋರಾಟದಲ್ಲಿ ಡಿವೈಎಫ್‌ಐನ ಹಲವು ಯುವ ಹೋರಾಟಗಾರರು ಹುತಾತ್ಮರಾಗಿರುತ್ತಾರೆ. ಇಂತಹ ಹೋರಾಟದ ಪಥದಲ್ಲಿ ಮುನ್ನಡೆದಿದ್ದ  ಶ್ರೀನಿವಾಸ್ ಬಜಾಲ್ ಹುತಾತ್ಮರಾಗಿ ೨೦ ವರ್ಷ ಸಂದಿವೆ. ಅವರ ತ್ಯಾಗ, ಬಲಿದಾನ ಮತ್ತು ಆಶಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಡಿವೈಎಫ್‌ಐ ಮಂಗಳೂರು ನಗರ ಮುಖಂಡ ದೀಪಕ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ  ಸುರೇಶ್ ಬಜಾಲ್, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.

ಡಿವೈಎಫ್‌ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಜ್ ಬಜಾಲ್, ಜಗದೀಶ್ ಬಜಾಲ್, ಪ್ರಕಾಶ್ ಶೆಟ್ಟಿ, ವರಪ್ರಸಾದ್ ಕುಲಾಲ್, ಅಶೋಕ್ ಎನೆಲ್‌ಮಾರ್, ಆನಂದ ಎನೆಲ್‌ಮಾರ್, ಜಗದೀಶ್ ಕುಲಾಲ್, ಮಧುವಂತ್, ಪ್ರೀತೇಶ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News