ಚರಿತ್ರೆಯಿಂದ ಪಾಠ ಕಲಿಯದಿದ್ದರೆ ಒಳ್ಳೆಯ ಭವಿಷ್ಯ ಕಟ್ಟಲು ಸಾಧ್ಯವಿಲ್ಲ: ಡಾ.ರಹಮತ್ ತರೀಕೆರೆ

Update: 2022-06-24 17:15 GMT

ಮೈಸೂರು,ಜೂ.24:  ವರ್ತಮಾನದ ನಾಗರಿಕ ಸಮಾಜ ಭೂತಕಾಲದ ಕೇಡುಗಳನ್ನು ಧ್ಯಾನಿಸುತ್ತಿದ್ದರೆ ಒಳ್ಳೇಯ ಭವಿಷ್ಯ ಕಟ್ಟಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.  

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಮಾಲೆ ಉದ್ಘಾಟಿಸಿ, ಕುವೆಂಪು ಚಿಂತನೆಗಳಲ್ಲಿ ನಾಗರಿಕ ಸಮಾಜದ ಪರಿಕಲ್ಪನೆ ವಿಚಾರ ಕುರಿತು ಮಾತನಾಡಿದರು. 

ಭೂತಕಾಲವನ್ನು ಹೇಗೆ ನೋಡಬೇಕು. ಭವಿಷ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ತಿಳಿದಿರಬೇಕು. ಹಾಗೇ ಭೂತಕಾಲದ ಒಳಿತು-ಕೇಡುಕಗಳಲ್ಲಿ ಒಳಿತನ್ನು ಸ್ವೀಕರಿಸಬೇಕು. ಚರಿತ್ರೆಯಿಂದ ಪಾಠ ಕಲಿಯದಿದ್ದರೆ ಒಳ್ಳೇಯ ಭವಿಷ್ಯ ಕಟ್ಟುವುದು ಸಾಧ್ಯವಿಲ್ಲ ಎಂಬ ಎಚ್ಚರವಿರಬೇಕು ಎಂದರು. 

ವಿಚಾರಕ್ರಾಂತಿಗೆ ಆಹ್ವಾನಕೊಟ್ಟ ಕುವೆಂಪು ನಾಡಿನಲ್ಲಿ ಇಂದು ವಿಚಾರ ಮಾಡೋದು ಅಪರಾಧ ಎನ್ನುವಂತಾಗಿದೆ. ವಿಚಾರವಂತರನ್ನು ಕೊಲ್ಲುವ, ಜೈಲಿನಲ್ಲಿರಿಸುವ ಸ್ಥಿತಿ ಇದೆ. ಮುಕ್ತತೆಗೆ ನಿರಂಕುಶ ಮತಿಗಳಾಗಲು ಅವಕಾಶ ಇದೆಯೇ? ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು. 
ಕುವೆಂಪು ಕವಿ, ಲೇಖಕ ಮಾತ್ರವಲ್ಲ. ಸಾಂಸ್ಕೃತಿಕ ನಾಯಕ. ಹಾಗಾಗಿಯೇ ನಮಗೆಲ್ಲ ನೋವಾದಂತೆ ಮತ್ತೆ ಮತ್ತೆ ನೆನಪಾಗುತ್ತಾರೆ. ಬಿಸಿಲಿನಲ್ಲಿ ನಿಂತವರಿಗೆ ಮರದಂತೆ ನೆರಳು ನೀಡುತ್ತಾರೆ. ಕೈಗನ್ನಡಿಯಾಗಿ ನಮ್ಮೆದುರು ನಿಲ್ಲುತ್ತಾರೆ. ಅವರೊಂದಿಗೆ ಎಲ್ಲರೂ ಅನುಸಂಧಾನ ಮಾಡಬೇಕಾಗಿದೆ ಎಂದು ವಿವರಿಸಿದರು. 

ಕುವೆಂಪು ಅವರ 70 ವರ್ಷಗಳ ಸಾಹಿತ್ಯದ ಬದುಕಿನಲ್ಲಿ ನಾಗರಿಕ ಸಮಾಜ ಹೇಗಿರಬೇಕು ಎಂಬುದಕ್ಕೆ ಉತ್ತರವಿದೆ. ಮತದಿಂದ ಹೊರ ಬರಬೇಕು. ರಾಜಕೀಯ ಪ್ರಜ್ಞೆ, ಪ್ರಭುತ್ವದ ಪ್ರಶ್ನೆ, ಪರಂಪರೆಯ ಪ್ರಜ್ಞೆ, ಭಾಷೆಯ ಪ್ರೇಮ, ವಿಶ್ವಮಾನವ ಪ್ರಜ್ಞೆಗಳು ಕುವೆಂಪು ಅವರ ಕನಸಿನ ನಾಗರಿಕ ಸಮಾಜದ ಪರಿಕಲ್ಪನೆ ಎಂದು ಬಣ್ಣಿಸಿದರು. 

ಎರಡು ಪರಂಪರೆಯ ಲೇಖಕರು ಇರುತ್ತಾರೆ. ಸೌಂದರ್ಯವನ್ನು ವರ್ಣಿಸುವವರು. ಮತ್ತೊಂದು ವರ್ಗ ವ್ಯವಸ್ಥೆಯನ್ನು ಪ್ರಶ್ನಿಸಿ ಸಾರ್ವಜನಿಕ ಅಪಾದನೆ, ಸಾರ್ವಜನಿಕ ಆಕ್ರೋಶ ಎದುರಿಸುತ್ತಾರೆ. ಎರಡನೇ ಸ್ಥಾನದಲ್ಲಿ ನಿಲ್ಲುವವರು ಕವಿ ಕುವೆಂಪು ಮತ್ತು ಬಸವಣ್ಣ ಎಂದರು. 
ಕೆಟ್ಟ ವ್ಯವಸ್ಥೆ ವಿರುದ್ಧ ಬಂಡೆದ್ದ ಲೇಖಕರೆಲ್ಲರೂ ಪರ್ಯಾಯ ಸಮಾಜದ ಪರಿಕಲ್ಪನೆ ಕೊಟ್ಟಿದ್ದಾರೆ. ಇರುವುದಕ್ಕಿಂತ ಜಗತನ್ನು ಸುಂದರವಾಗಿಸಲು ಪ್ರಯತ್ನಿಸಿದ್ದಾರೆ. ಬಸವಣ್ಣ, ಅಂಬೇಡ್ಕರ್, ಕುವೆಂಪು, ಟ್ಯಾಗೋರ್ ಪರ್ಯಾಯ ಸಮಾಜದ ಪರಿಕಲ್ಪನೆ ಕೊಟ್ಟ ಮಹನೀಯರಾಗಿದ್ದಾರೆ ಎಂದು ನುಡಿದರು. 

ಸಂವಿಧಾನದ ಪ್ರಸ್ತಾವನೆ ಬರುವ ಮುನ್ನವೇ ನಮ್ಮಲ್ಲಿ ಸಾಂಸ್ಕøತಿಕ ಪ್ರಾಸ್ತಾವನೆ ಇತ್ತು. ಅದನ್ನು ಪಂಪ, ಬಸವಣ್ಣ, ಕುವೆಂಪು ಕೊಟ್ಟಿದ್ದರು. 1924ರಲ್ಲಿ ಬರೆದ ನಾಡಗೀತೆಯಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಸಾಲನ್ನು ಈಗ ಹೆಚ್ಚು ನೆನಪಿಸಿಕೊಳ್ಳಲಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದ ಚರ್ಚೆ ಮುನ್ನೆಲೆಗೆ ಬಂದಿದೆ ಎಂದರು. 

ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಆರ್.ರಾಜಣ್ಣ, ಪ್ರಸಾರಾಂಗ ಸಂಯೋಜನಾಧಿಕಾರಿ ಡಾ.ಆರ್.ಸಂತೋಷ್ ನಾಯಕರ್ ಹಾಜರಿದ್ದರು.  

ಸಾವಿರ ವರ್ಷದ ನಮ್ಮ ಪರಂಪರೆಯಲ್ಲಿ ವಿಭೂತಿ ಪುರುಷರು ವಿಭೂತಿ ಮಹಿಳೆಯರು ಬಂದು ಹೋಗಿದ್ದಾರೆ. ಇವರ ಪೈಕಿ ಬಸವಣ್ಣ ಮತ್ತು ಕುವೆಂಪು ಮತ್ತೆ ಮತ್ತೆ ಕಾಡುತ್ತಾರೆ. ನೆನಪಿಸೋದು ಇವರಿಬ್ಬರನ್ನು. ಹಾಗಾಗಿಯೇ ಇವರಿಬ್ಬರು ಕರ್ನಾಟಕದ ವಿವೇಕದ ಎರಡು ಕಣ್ಣುಗಳು. 

-ಡಾ.ರಹಮತ್ ತರೀಕೆರೆ, ವಿದ್ವಾಂಸ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News