ಒತ್ತಡದಲ್ಲಿ ಹಲವು ಶಾಸಕರು ; ಮಹಾರಾಷ್ಟ್ರ ಬಿಕ್ಕಟ್ಟಿಗೆ ಹೊಸ ತಿರುವು

Update: 2022-06-25 04:55 GMT
ಕೈಲಾಸ್ ಪಾಟೀಲ್ 

ಮುಂಬೈ: "ಏಕನಾಥ್ ಶಿಂಧೆ ಜತೆಗಿರುವ ಕೆಲವು  ಶಾಸಕರು ತೀವ್ರ ಒತ್ತಡದ ಕಾರಣದಿಂದ ಬಂಡಾಯ ಶಾಸಕರ ಜತೆಗಿದ್ದಾರೆ. ಮುಖ್ಯಮಂತ್ರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಮ್ಮ ಸಹಮತ ಇದೆ" ಎಂದು ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಜತೆಗೆ ಸೂರತ್‍ಗೆ ತೆರಳುವ ವೇಳೆ ತಪ್ಪಿಸಿಕೊಂಡು ಬಂದ ಶಾಸಕ ಕೈಲಾಸ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ಬಿಕ್ಕಟ್ಟು ಹೊಸ ತಿರುವು ಪಡೆದಿದೆ.

ಎಂವಿಎ ಮೈತ್ರಿ ಸರ್ಕಾರದ ಹಿರಿಯ ಸಚಿವ ಹಾಗೂ ಶಿವಸೇನೆ ಮುಖಂಡ ಏಕನಾಥ ಶಿಂಧೆ ಅವರು ಪಕ್ಷದಲ್ಲಿ ಬಂಡಾಯ ಬಾವುಟ ಹಾರಿಸಿ ಹಲವು ಶಾಸಕರೊಂದಿಗೆ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಕಾರಣದಿಂದ ಶಿವಸೇನೆ ನೇತೃತ್ವದ ಎಂವಿಎ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.

"ನಾನು ಜೂನ್ 20ರಂದು ಏಕನಾಥ್ ಶಿಂಧೆ ಕರೆದಿದ್ದ ಭೋಜನ ಕೂಟಕ್ಕೆ ಥಾಣೆಗೆ ಹೋಗಿದ್ದೆ. ರಾತ್ರಿ 8-9ರ ಸುಮಾರಿಗೆ ಕಾರು ಮಹಾರಾಷ್ಟ್ರದಿಂದ ಹೊರಗೆ ಹೋದಾಗ ಅನುಮಾನ ಆರಂಭವಾಯಿತು" ಎಂದು ಉಸ್ಮನಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೈಲಾಸ್ ಪಾಟೀಲ್ ಹೇಳಿದ್ದಾರೆ.

ಸೂರತ್‍ಗೆ ಶಾಸಕರನ್ನು ಕರೆದೊಯ್ಯುತ್ತಿದ್ದ ಕಾರಿನಿಂದ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದ ಕೈಲಾಸ್ ಪಾಟೀಲ್, ನಾನು ಹಲವು ಕಿಲೋಮೀಟರ್ ದೂರ ನಡೆದುಕೊಂಡು ಬಳಿಕ, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ, ಬಳಿಕ ಟ್ರಕ್‍ನಲ್ಲಿ ಬಂದೆ. ಅಂತಿಮವಾಗಿ ಮುಖ್ಯಮಂತ್ರಿಗಳ ನಿವಾಸದಿಂದ ವಾಹನ ವ್ಯವಸ್ಥೆ ಮಾಡಲಾಯಿತು ಎಂದು ಬಹಿರಂಗಪಡಿಸಿರುವುದಾಗಿ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News