ಮಹಾರಾಷ್ಟ್ರ: ಮುಂದುವರಿದ ಪ್ರಜಾಸತ್ತೆಯ ಅಣಕ

Update: 2022-06-25 03:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಹಾರಾಷ್ಟ್ರದಲ್ಲಿ ಭೀತಿ, ಆಮಿಷ ಹಾಗೂ ಭ್ರಷ್ಟಾಚಾರಗಳ ಕೆಸರಿನಲ್ಲಿ ಮತ್ತೊಮ್ಮೆ ಕಮಲ ಅರಳುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿವೆ. ಜೂನ್ 11ರಂದು ಮಹಾರಾಷ್ಟ್ರದ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ತನಗೆ ಕೇವಲ ೧೦೫ ಸ್ಥಾನಬಲವಿದ್ದರೂ, ಬಿಜೆಪಿ134 ವೋಟುಗಳನ್ನು ಪಡೆದು ಆರರಲ್ಲಿ ಮೂರು ಸ್ಥಾನಗಳನ್ನು ಗೆದ್ದಾಗಲೇ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟದ ಸರಕಾರಕ್ಕೆ ಗಂಡಾಂತರ ಒದಗಿರುವುದು ಸ್ಪಷ್ಟವಾಗಿತ್ತು.

2019ರಲ್ಲಿ ನಡೆದ ಶಾಸನ ಸಭಾ ಚುನಾವಣೆಯಲ್ಲಿ ಆಗ ಅಧಿಕಾರದಲ್ಲಿದ್ದ ಮೈತ್ರಿ ಪಕ್ಷಗಳಾಗಿದ್ದ ಬಿಜೆಪಿ ಮತ್ತು ಶಿವಸೇನೆಗಳೆರಡೂ 2014ರ ಚುನಾವಣೆಗಿಂತ ಕಡಿಮೆ ಸೀಟುಗಳನ್ನು ಪಡೆದುಕೊಂಡವು. 2014ರಲ್ಲಿ 122 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಬಲ 2019ರಲ್ಲಿ ಕೇವಲ 105 ಸ್ಥಾನಗಳಿಗೆ ಇಳಿದಿದ್ದು ಮಾತ್ರವಲ್ಲ, 2019ಕ್ಕಿಂತ ಶೇ.೩ರಷ್ಟು ಕಡಿಮೆ ಮತಗಳನ್ನು ಪಡೆದುಕೊಂಡಿತ್ತು. ಶಿವಸೇನೆಯ ಬಲವೂ 63ರಿಂದ 56ಕ್ಕೆ ಇಳಿದಿತ್ತು.

ಆದರೆ ಶರದ್ ಪವಾರ್‌ರ ಎನ್‌ಸಿಪಿ ಬಲ 41ರಿಂದ 54ಕ್ಕೆ ಏರಿದರೆ ಕಾಂಗ್ರೆಸ್‌ನ ಬಲವೂ 42 ರಿಂದ 44ಕ್ಕೇರಿತ್ತು. ಫಲಿತಾಂಶ ಪ್ರಕಟವಾದ ನಂತರ ದಶಕಗಳಿಂದಲೂ ಬಿಜೆಪಿಯ ಜೊತೆ ಹಿಂದುತ್ವ ಮೈತ್ರಿಕೂಟದಲ್ಲಿದ್ದ ಶಿವಸೇನೆ ಬಿಜೆಪಿಯೊಂದಿಗೆ ಅಧಿಕಾರ ರಚಿಸಲು ನಿರಾಕರಿಸಿತು. ಇದಕ್ಕೆ ಒಂದು ಪ್ರಮುಖ ಕಾರಣ ದೇಶದೆಲ್ಲೆಡೆ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಕಾಲಿಡುವ ಬಿಜೆಪಿ ನಿಧಾನವಾಗಿ ಪ್ರಾದೇಶಿಕ ಪಕ್ಷಗಳನ್ನು ನುಂಗಿ ಬೆಳೆಯುತ್ತಿರುವುದು. ಬಿಹಾರ, ತಮಿಳುನಾಡು, ಈಶಾನ್ಯ ಭಾರತ ರಾಜ್ಯಗಳು ತಕ್ಷಣದ ಉದಾಹರಣೆಗಳು.

ಈ ಕಾರಣದಿಂದಾಗಿಯೇ 288 ಸ್ಥಾನಬಲದ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಚುನಾವಣಾ ಫಲಿತಾಂಶಗಳು ಬಂದು ತಿಂಗಳು ಕಳೆದರೂ ಸರಕಾರ ರಚನೆಯಾಗಿರಲಿಲ್ಲ. ಆದರೆ ಬಿಜೆಪಿಯ ನಾಯಕ ಫಡ್ನವೀಸ್ ಅವರು ಎನ್‌ಸಿಪಿ ಬಣದಲ್ಲಿ ಬಿರುಕು ತಂದು ಅಜಿತ್ ಪವಾರ್ ಬಣದೊಂದಿಗೆ ರಾಜಿ ಮೈತ್ರಿಗಳನ್ನು ಮಾಡಿಕೊಂಡು ಸರಕಾರ ರಚಿಸಿದರೂ ಅದು ಒಂದು ವಾರವೂ ಬಾಳಲಿಲ್ಲ. ಅಜಿತ್ ಪವಾರ್ ಎನ್‌ಸಿಪಿಗೆ ಮರಳುವುದರೊಂದಿಗೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಕೂಟದ ವಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಕೂಟದ ಸರಕಾರ ಶಿವಸೇನೆಯ ಉದ್ಧವ್ ಠಾಕ್ರೆಯ ನೇತೃತ್ವದಲ್ಲಿ ರಚನೆಯಾಯಿತು.

ಹೀಗಾಗಿ ಫಡ್ನವೀಸ್‌ರ ಬಿಜೆಪಿ, ಮಹಾರಾಷ್ಟ್ರ ವಿಕಾಸ್‌ಅಘಾಡಿ ಸರಕಾರ ಜನಾದೇಶದ ವಿರುದ್ಧದ, ತತ್ವ ಸಿದ್ಧಾಂತದ ಜೊತೆ ರಾಜಿಮಾಡಿಕೊಂಡ ಅವಕಾಶವಾದಿ ಕೂಟ ಎಂದು ಕಳೆದ ಎರಡೂವರೆ ವರ್ಷಗಳಿಂದ ಆರೋಪಿಸುತ್ತಿದ್ದರೂ ಅದರಲ್ಲಿ ಹೆಚ್ಚು ಹುರುಳಿರಲಿಲ್ಲ. ಏಕೆಂದರೆ ಬಿಜೆಪಿಯೂ ಎನ್‌ಸಿಪಿಯೊಂದಿಗೆ ಅದೇರೀತಿ ರಾಜಿ ಸರಕಾರ ಮಾಡಿಕೊಂಡು ಘೋರವಾಗಿ ವಿಫವಾಗಿತ್ತು. ಹೀಗಾಗಿ ಮಹಾರಾಷ್ಟ್ರದ ಅಘಾಡಿ ಸರಕಾರ ಕಳೆದ ಎಂಟು ವರ್ಷಗಳ ಮೋದಿ-ಶಾ ಜೋಡಿಯ ಚುನಾವಣಾ ಚಾಣಕ್ಯತನಕ್ಕೆ ದೊಡ್ಡ ಸವಾಲಾಗಿ ಕಣ್ಣಕಿಸಿರಾಗಿತ್ತು.

ಆದ್ದರಿಂದಲೇ ತೆರೆಯ ಹಿಂದೆ ಮೋದಿ-ಶಾ ಸರಕಾರ ತನ್ನ ಅಧಿಕಾರ ಹಾಗೂ ಹಣಬಲವನ್ನು ಬಳಸಿಕೊಂಡು ಈ ಸರಕಾರವನ್ನು ಬುಡಮೇಲು ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇತ್ತು. ಅದರ ಭಾಗವಾಗಿಯೇ ಈ ವರ್ಷದ ಪ್ರಾರಂಭದಲ್ಲೇ ಶಿವಸೇನೆಯ ಶಾಸಕರಾದ ಯಾಮಿನಿ ಜಾಧವ್ ಮತ್ತು ಪ್ರತಾಪ್ ಸರ್‌ನಾಯ್ಕ್ ಮೇಲೆ ಅಕ್ರಮ ಸಂಪಾದನೆಯ ಆರೋಪವನ್ನು ಹೊರಿಸಿ ಕೇಂದ್ರದ ಜಾರಿ ನಿರ್ದೇಶನಾಲಯದ (ಈ.ಡಿ.) ದಾಳಿಗಳು ನಡೆದಿದ್ದವು. ಇನ್ನೂ ಹಲವು ಶಿವಸೇನಾ ಶಾಸಕರ ಮೇಲಿನ ದಾಳಿಗಳು ನಡೆಯುವ ಸೂಚನೆಗಳನ್ನು ಒದಗಿಸಲಾಗಿತ್ತು. ಇವೆಲ್ಲವೂ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತುಂಗವನ್ನು ಮುಟ್ಟಿತ್ತು.

ಹೀಗಾಗಿ ಭೀತಿ, ಆಮಿಷ ಹಾಗೂ ಭ್ರಷ್ಟಾಚಾರಕ್ಕೆ ರಕ್ಷಣೆಯನ್ನು ಖಾತರಿ ಮಾಡುವ ಮೂಲಕ ಬಿಜೆಪಿಯು ಶಿವಸೇನೆಯಲ್ಲಿ ಬಂಡಾಯವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು. ಇದರ ಜೊತೆಗೆ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳದಿರುವುದೂ ಒಂದು ಕಾರಣವಿರಬಹುದು. ಆದರೆ ಶಿವಸೇನೆಯ ಬಂಡಾಯ ಬಣಕ್ಕೆ ಬಿಜೆಪಿ ಹಾಗೂ ಬಿಜೆಪಿ ಸರಕಾರಗಳಿರುವ ಗುಜರಾತ್ ಹಾಗೂ ಅಸ್ಸಾಮ್ ನೀಡುತ್ತಿರುವ ಸಕಲ ಬೆಂಬಲ ಹಾಗೂ ಸಹಕಾರಗಳನ್ನು ಗಮನಿಸಿದರೆ ರಾಜಕೀಯ ಅನಕ್ಷರಸ್ಥರಿಗೂ ಬಂಡಾಯದ ಪ್ರಧಾನ ಕಾರಣ ಯಾವುದೆಂಬುದು ಅರ್ಥವಾಗಿದೆ. ಹೀಗಾಗಿಯೇ ಬಿಜೆಪಿಯ ಬೆಂಬಲದ ‘ಪ್ರಮಾಣ’ವು ಹೆಚ್ಚಾಗುತ್ತಿರುವಂತೆ ಅಸ್ಸಾಮ್‌ನಲ್ಲಿ ಶಿವಸೇನೆಯ ಬಂಡಾಯ ಬಣ ಸೇರಿಕೊಳ್ಳುತ್ತಿರುವ ಶಾಸಕರ ಸಂಖ್ಯೆಯೂ ಹೆಚ್ಚುತ್ತಿದೆ. ಶಿವಸೇನೆಯ ಶಾಸಕಾಂಗ ಪಕ್ಷದ ವಿಪ್ ಅನ್ನು ಮೀರಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆದುಕೊಳ್ಳುವ ಶಿವಸೇನೆ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಯನ್ನು ತಪ್ಪಿಸಿಕೊಳ್ಳಲು ಬೇಕಾಗುವ ೩೭ ಶಾಸಕರ ಬಲವನ್ನು ಈಗಾಗಲೇ ಬಂಡಾಯ ಬಣದ ನಾಯಕ ಏಕನಾಥ್ ಶಿಂದೆೆ ಘೋಷಿಸಿದ್ದಾರೆ. ಅವರು ರಾಜ್ಯಪಾಲರಿಗೆ ಪತ್ರವನ್ನೂ ಬರೆಯಲಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರಕಾರ ಕುಸಿದು ಬಿಜೆಪಿ ಹಾಗೂ ಬಂಡಾಯ ಶಿವಸೇನಾ ಮೈತ್ರಿಯ ‘ಅಸಲಿ ಹಿಂದುತ್ವವಾದಿ’ ಸರಕಾರ ಅಧಿಕಾರಕ್ಕೆ ಬರುವುದು ಹೆಚ್ಚೂ ಕಡಿಮೆ ಖಚಿತವಾಗಿದೆ.

ಈ ಬೆಳವಣಿಗೆ ನಿರೀಕ್ಷಿತವೇ ಆಗಿದ್ದರೂ ಈ ಪ್ರಜಾತಾಂತ್ರಿಕ ಅಧಃಪತನವನ್ನು ಮಾಧ್ಯಮಗಳು ಸಂಭ್ರಮದಿಂದ ಸ್ವಾಗತಿಸುವುದು, ಜನರ ಮಟ್ಟಿಗೆ ಇದೊಂದು ಮನರಂಜನೆಯಾಗಿಬಿಟ್ಟಿರುವುದು ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಇದರ ಜೊತೆಗೆ ಭ್ರಷ್ಟಾಚಾರಕ್ಕೆ ಸಂಪೂರ್ಣ ರಕ್ಷಣೆ ಕೊಡುವ ಭರವಸೆಯೊಂದಿಗೆ ವಿರೋಧ ಪಕ್ಷಗಳ ಪರಮ ಭ್ರಷ್ಟ ಶಾಸಕರನ್ನು ತನ್ನೆಡೆ ಸೆಳೆದುಕೊಂಡು ರಕ್ಷಿಸುತ್ತಿರುವ ಬಿಜೆಪಿ ಹಾಲಿ ಭಾರತದ ಅತಿ ದೊಡ್ಡ ಭ್ರಷ್ಟಾಚಾರಿ ಪಕ್ಷವಾಗುತ್ತಿದೆ.

ಅತ್ಯಂತ ಅಪ್ರಜಾತಾಂತ್ರಿಕ ಹಾದಿಯಲ್ಲಿ ಪಕ್ಷವೊಂದು ಕೇವಲ ತಾಂತ್ರಿಕವಾಗಿ ಪ್ರಜಾತಂತ್ರದ ಹೆಸರಿನಲ್ಲೇ ಅಧಿಕಾರಕ್ಕೆ ಬರುವ ದೇಶದಲ್ಲಿ ಪ್ರಜಾತಂತ್ರ ಆತ್ಮವನ್ನೇ ಕಳೆದುಕೊಂಡಿರುವ ಕಳೇಬರ ಮಾತ್ರವಾಗಿರುತ್ತದೆ. ಅಷ್ಟೇ ಮುಖ್ಯವಾದ ಪ್ರಶ್ನೆ ಈ ಪ್ರಜಾತಂತ್ರ ವಿರೋಧಿ ಆಪರೇಷನ್‌ಗಳಿಗೆ ಸಂಪನ್ಮೂಲ ಎಲ್ಲಿಯದು? ಇದನ್ನು ಚುನಾವಣಾ ಅಕ್ರಮವೆಂದು ಭಾವಿಸಲಾಗದ ಚುನಾವಣಾ ಸಂಸ್ಥೆಗಳು ತಟಸ್ಥ ಸಂಸ್ಥೆಗಳಾಗಲು ಹೇಗೆ ಸಾಧ್ಯ?

ಬಿಜೆಪಿಯೇತರ ಪಕ್ಷಗಳು ಮತ್ತು ಸರಕಾರಗಳು ಎಷ್ಟೇ ಪ್ರಜಾತಾಂತ್ರಿಕವಾಗಿ ಅಧಿಕಾರಕ್ಕೆ ಬಂದಿದ್ದರೂ ಅವುಗಳು ರಾಷ್ಟ್ರ ರಾಜಕಾರಣಕ್ಕೆ ಅಪವಾದ, ಅರಾಷ್ಟ್ರೀಯ ಎಂದು ಅಮಾನ್ಯಗೊಳಿಸುವುದು ಹಾಗೂ ಬಿಜೆಪಿ ಪಕ್ಷ ಮತ್ತು ಸರಕಾರ ಮಾತ್ರ ಮಾನ್ಯತೆಯುಳ್ಳ ಏಕಮಾತ್ರ ಪಕ್ಷ ಹಾಗೂ ಸರಕಾರ ಎಂಬಂತೆ ಸ್ಥಾಪಿತಗೊಳ್ಳುವುದು ಅತ್ಯಂತ ಆತಂಕಕಾರಿ ಹಾಗೂ ರಾಷ್ಟ್ರೀಯವಾದ ಮತ್ತು ಆತಂಕದಲ್ಲಿರುವ ದೇಶ ಎಂಬ ಸನ್ನಿಯನ್ನು ಹುಟ್ಟಿಸಿ ಜನರಲ್ಲೂ ಇದಕ್ಕೆ ಮಾನ್ಯತೆಯನ್ನುಗಳಿಸಿಕೊಳ್ಳುತ್ತಿರುವುದು ಪ್ರಜಾತಂತ್ರಕ್ಕೆ ಗಂಡಾಂತರಕಾರಿ.

ನಿಧಾನವಾಗಿ ಈ ನಡೆಗಳು ಚುನಾವಣಾ ಪ್ರಜಾತಂತ್ರದ ಪ್ರಸ್ತುತತೆಯನ್ನೇ ನಿರಾಕರಿಸಿ ಏಕಪಕ್ಷ ಸರ್ವಾಧಿಕಾರಿ ವ್ಯವಸ್ಥೆಯನ್ನು ಮಾನ್ಯಗೊಳಿಸುತ್ತವೆ. ಬಿಕ್ಕಟ್ಟಿನಲ್ಲಿದ್ದ ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೇರಿದ್ದು, ನರಮೇಧಗಳನ್ನು ಮಾಡುತ್ತಾ ಅಧಿಕಾರ ಉಳಿಸಿಕೊಂಡಿದ್ದು ಹೀಗೆಯೇ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News