ದ.ಕ.ಜಿಲ್ಲಾ ಮಟ್ಟದ ಲೋಕ ಅದಾಲತ್: 15,263 ಪ್ರಕರಣಗಳ ಇತ್ಯರ್ಥ

Update: 2022-06-26 15:00 GMT

ಮಂಗಳೂರು: ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಮೆಗಾ ಲೋಕ ಅದಾಲತ್‌ನಲ್ಲಿ ೧೫,೨೬೩ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಮೆಗಾ ಅದಾಲತ್‌ನಲ್ಲಿ ಬಾಕಿ ಪ್ರಕರಣಗಳ ಪ್ರಕರಣ ವಿಚಾರಣೆಗೆ ೩೦ ಪೀಠಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳ ವಿಚಾರಣೆಗೆ ೧೨ ಪೀಠಗಳನ್ನು ರಚಿಸಲಾಗಿತ್ತು. ಶನಿವಾರ ದಿನವಿಡೀ ವಿವಿಧ ಪೀಠಗಳಲ್ಲಿ ನಡೆದ ಲೊಕ ಅದಾಲತ್‌ನಲ್ಲಿ ೧೩.೮೩ ಕೋಟಿ ರೂ. ಮೊತ್ತದ ವ್ಯಾಜ್ಯ ಇತ್ಯರ್ಥಗೊಂಡಿವೆ.

೧೧,೯೯೮ ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ೧೦,೨೮೯ ಬಾಕಿ ಪ್ರಕರಣಗಳು ಸೇರಿದಂತೆ ೨೨,೨೮೭ ಪ್ರಕರಣಗಳು ವಿಚಾರಣೆಗೆ ಬಂದಿದ್ದವು. ಅದರಲ್ಲಿ ೪,೫೫೩ ಬಾಕಿ ಹಾಗೂ ೧೦,೭೩೦ ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ. ನಾಲ್ಕು ಪ್ರಕರಣಗಳನ್ನು ವರ್ಚುವಲ್ ಮೂಲಕ ವಿಚಾರಣೆ ನಡೆಸಲಾಗಿದ್ದರೆ, ಉಳಿದೆಲ್ಲಾ ಪ್ರಕರಣಗಳನ್ನು ನೇರವಾಗಿ ವಿಚಾರಣೆ ನಡೆಸಲಾಗಿದೆ.

ವಾಹನ ಅಪಘಾತದ ೧,೧೫೩ ಪ್ರಕರಣಗಳು ವಿಚಾರಣೆಗೆ ಬಂದಿತ್ತು. ಅದರಲ್ಲಿ ೧೯೯ ಪ್ರಕರಣಗಳು ಇತ್ಯರ್ಥಗೊಂಡು ೬,೫೦,೮೨,೯೧೯ ರೂ. ವಿಲೇವಾರಿಯಾಗಿದೆ. ೭೯೪ ಚೆಕ್‌ಬೌನ್ಸ್ ಪ್ರಕರಣಗಳು ವಿಚಾರಣೆಗೆ ಬಂದಿತ್ತು. ಅದರಲ್ಲಿ ೧೫೪ ಪ್ರಕರಣಗಳು ಇತ್ಯರ್ಥಗೊಂಡು  ೩,೩೦,೨೨,೬೯೮ ರೂ. ವಿಲೇವಾರಿಯಾಗಿದೆ. ಅಲ್ಲದೆ ೪,೦೭೯ ಸಾಮಾನ್ಯ ಪ್ರಕರಣಗಳು ವಿಚಾರಣೆಗೆ ಬಂದಿತ್ತು. ಅದರಲ್ಲಿ ೩,೭೫೮ ಪ್ರಕರಣಗಳು ಇತ್ಯರ್ಥಗೊಂಡಿದ್ದು, ೯,೨೫,೪೯೮ ರೂ. ವಿಲೇವಾರಿಯಾಗಿದೆ.

ಉಳಿದಂತೆ ನೀರಿನ ಮತ್ತು ವಿದ್ಯುತ್ ಬಿಲ್, ಕಾರ್ಮಿಕ ಪರಿಹಾರ, ಕಾರ್ಮಿಕ ವ್ಯಾಜ್ಯಗಳು, ವೈವಾಹಿಕ ಮತ್ತು ಸಿವಿಲ್ ವ್ಯಾಜ್ಯಗಳ ಸಹಿತ ವಿವಿಧ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಎಂ. ಜೋಶಿ ಹಾಗೂ ಸದಸ್ಯ ಕಾರ್ಯದರ್ಶಿ ಶೋಭಾ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News