ಎಐಡಿವೈಒ 57 ನೇ ಸಂಸ್ಥಾಪನಾ ದಿನ; ನಿರುದ್ಯೋಗ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ

Update: 2022-06-26 15:56 GMT

ಮೈಸೂರು: ಎಐಡಿವೈಒ ನ 57ನೇ ಸಂಸ್ಥಾಪನಾ ದಿನದ ಅಂಗವಾಗಿನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ನಗರದ ಚಿಕ್ಕಗಡಿಯಾರದ ಬಳಿ ರವಿವಾರ ಎಐಡಿವೈಒ  ನ ಸಂಸ್ಥಾಪನೆಗೆ ಪ್ರೇರಣೆ ನೀಡಿದ ಕಾ. ಶಿವದಾಸ ಘೋಷ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಅನಂತರ ಜಿಲ್ಲಾ ಜಂಟಿ ಕಾರ್ಯದರ್ಶಿ ನೀತುಶ್ರೀ ರವರು  ಪ್ರಾಸ್ತಾವಿಕ ನುಡಿಯಲ್ಲಿ ಸಂಘಟನೆಯ ಉದ್ದೇಶವನ್ನು ಮತ್ತು ಅವಶ್ಯಕತೆಯನ್ನು ಹೇಳಿದರು.

ಸಂಘಟನೆಯ ಅಧ್ಯಕ್ಷರಾದ ಸುನಿಲ್.ಟಿ.ಆರ್ ರವರು ಮಾತನಾಡಿ "ಯುವಜನರ  ನಿರುದ್ಯೋಗ ಸಮಸ್ಯೆಯಿಂದ ಹತಾಶೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನೇಮಕಾತಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿಯಾಗುತ್ತಿಲ್ಲ. ಜನರು ಬಡತನದಿಂದ ಸಾಯುತ್ತಿದ್ದರೆ ಉದ್ಯಮಿಗಳ ಬಂಡವಾಳ ಬೆಳೆಯುತ್ತಲೇ ಇದೆ.  ಸರ್ಕಾರಗಳು ಯುವ ಜನರಿಗೆ ಉದ್ಯೋಗ ನೀಡದೆ ಅವರನ್ನು ಚುನಾವಣೆ ಸಂದರ್ಭದಲ್ಲಿ  ಜಾತಿ-ಧರ್ಮದ ಹೆಸರಲ್ಲಿ ತಮ್ಮ ಪಕ್ಷಕ್ಕೆ ವೋಟು ಹಾಕಿಸುವ ಗುಲಾಮರನ್ನಾಗಿ ಮಾಡಿಕೊಳ್ಳಲಾಗುತ್ತಿದೆ" ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಜಿಲ್ಲಾ ಕಾರ್ಯದರ್ಶಿ ಸುಮಾ ರವರು ಮಾತಾಡಿ  ದಿನೇದಿನೇ ಈ  ಸರ್ಕಾರಗಳು ಜನವಿರೋಧಿ ನೀತಿಗಳನ್ನೇ ತರುತ್ತಿವೆ. ಜನರು ಇದರ ವಿರುದ್ಧ ಮನೆಯಲ್ಲೇ ಕುಳಿತು ಶಾಪ ಹಾಕಿದರೆ ಪ್ರಯೋಜನವಿಲ್ಲ. ಹಾಗಾಗಿ ಸಂಘಟಿತ ಹೋರಾಟಕ್ಕೆ ಮುಂಬನ್ನಿ ಎಂದರು. ಮುಂದುವರಿದು  ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಮಾತನಾಡುತ್ತಾ ಬಣ್ಣಬಣ್ಣದ ಹೆಸರಿನಲ್ಲಿ ಹೊಸ-ಹೊಸ ಯೋಜನೆಗಳನ್ನು ಜಾರಿಗೆ ತರುವ ಮೊದಲು 2 ಕೋಟಿ ಉದ್ಯೋಗದ ಭರವಸೆ ಏನಾಯಿತು ಎನ್ನುವುದಕ್ಕೆ ಉತ್ತರಿಸಲಿ. ಪ್ರಧಾನಿಯವರು ದೇಶದ ಯುವಜನರಿಗೆ ಚಂದ್ರನನ್ನು ತೋರಿಸಿ ಹಳ್ಳಕ್ಕೆ ದೂಡುತ್ತಿದ್ದಾರೆ. ದೇಶ ಕಾಯುವ ಸೈನಿಕರಿಗೆ ಕನಿಷ್ಠ ಪೆನ್ಷನ್  ನೀಡಲಾಗದ ಸರ್ಕಾರವಾದರೂ ಯಾಕೆ ಬೇಕು? ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಕೊಡಲು ಸರ್ಕಾರ ಆರ್ಥಿಕ ಕಾರಣ ನೀಡುತ್ತದೆ.ಆದರೆ ಮಂತ್ರಿಗಳ ಸಂಬಳ ಹೆಚ್ಚಿಸಿಕೊಳ್ಳಲು ಹಣವಿದೆಯೇ?ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕಾವಾ ಕಾಲೇಜಿನ ಕಲಾ ವಿದ್ಯಾರ್ಥಿಗಳು ನಿರುದ್ಯೋಗದ ವಿರುದ್ಧ ತಾವು ಮೂಡಿಸಿದ ಚಿತ್ರಗಳನ್ನು ಪ್ರದರ್ಶಿಸಿದರು.

ಈ ಪ್ರತಿಭಟನೆಯ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ್ತಿ  ಗುಜರಾತಿನ ತೀಸ್ತಾ ಸೆಟಲ್ವಡ್  ಅವರನ್ನು  ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಕೂಡ ಆಗ್ರಹಿಸಿದರು.

 ಎಐಡಿವೈಒ  ಉಪಾಧ್ಯಕ್ಷರಾದ ನಿರಂಜನ್ ಹಿರೇಮಠ್ , ಸದಸ್ಯರಾದ ಅಭಿನಂದನ್, ಶಶಿಧರ್,ಸುಭಾನ್,ಸೂರ್ಯ, ಆಫ್ರಿನ್, ಫೈಜಾ ಕಲಾ ವಿದ್ಯಾರ್ಥಿಗಳಾದ ನಾಗರಾಜ್, ಸಿದ್ದೇಶ್, ಮೋಹಿತ್, ನರೇಶ್, ಮಂಜುನಾಥ್, ಧಮ್ಮಕಿಟ್ಟಿ ರೂಪ್ಪನ್, ಗಣೇಶ್, ಗುರುಲಿಂಗಯ್ಯ,ಅಂಕಿತ್ ಮತ್ತು ದೀಕ್ಷಿತ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News