ಉಡುಪಿ: 19 ಪ್ರಕರಣಗಳ 3.27 ಲಕ್ಷ ರೂ. ಮೌಲ್ಯದ ಮಾದಕ ವಸ್ತು ನಾಶ

Update: 2022-06-26 16:02 GMT

ಉಡುಪಿ : ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೧೯ ಪ್ರಕರಣಗಳಲ್ಲಿ ವಶಪಡಿಸಿಕೊಂಡ ೩,೨೭,೧೩೫ರೂ. ಮೌಲ್ಯದ ಮಾದಕ ವಸ್ತುಗಳನ್ನು ರವಿವಾರ ಪಡುಬಿದ್ರಿ ನಂದಿಕೂರು ಕೈಗಾರಿಕ ವಲಯದ ಆಯುಷ್ ಎನ್‌ವಿರೊಟೆಕ್‌ನಲ್ಲಿ ನಾಶಪಡಿಸಲಾಯಿತು.

೨,೭೨,೧೩೫ರೂ. ಮೌಲ್ಯದ ೯ಕೆ.ಜಿ. ೬೮೬ ಗ್ರಾಂ ಗಾಂಜಾ ಹಾಗೂ ೫೫ಸಾವಿರ ರೂ. ಮೌಲ್ಯದ ೪೧೦ ಗ್ರಾಂ ತೂಕದ ಚರಸ್‌ನ್ನು ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿಗಳಾದ ಸುಧಾಕರ್ ನಾಯ್ಕ್, ಎಸ್.ವಿಜಯ ಪ್ರಸಾದ್ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.

ವಿಲೇವಾರಿಗೊಳಿಸಲಾದ ಪ್ರಕರಣಗಳಲ್ಲಿ ಮಣಿಪಾಲ ಹಾಗೂ ಸೆನ್ ಅಪರಾಧ ಠಾಣೆಯ ತಲಾ ನಾಲ್ಕು, ಕುಂದಾಪುರ, ಕಾಪು ಠಾಣೆಯ ತಲಾ ಮೂರು, ಕೋಟ ಹಾಗೂ ಗಂಗೊಳ್ಳಿ ಠಾಣೆಯ ತಲಾ ಎರಡು, ಮಲ್ಪೆ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು ೧೯ ಪ್ರಕರಣಗಳು ಒಳಗೊಂಡಿವೆ.

ಇದರಲ್ಲಿ ಅತ್ಯಂತ ಹಳೆಯ ಪ್ರಕರಣ ಮಣಿಪಾಲ ಠಾಣೆಯಲ್ಲಿ ೨೦೧೨ರಲ್ಲಿ ವರದಿಯಾದ ಒಂದು, ಜಿಲ್ಲೆಯ ಇತರ ಠಾಮೆಗಳಲ್ಲಿ ವರದಿಯಾದ ೨೦೧೩ರ ನಾಲ್ಕು, ೨೦೧೪, ೨೦೧೬, ೨೦೧೮ರ ತಲಾ ಒಂದು, ೨೦೧೯ರ ಮೂರು, ೨೦೨೦ರ ಒಂದು, ೨೦೨೧ರ ೬ ಹಾಗೂ ೨೦೨೨ರ ಒಂದು ಪ್ರಕರಣಗಳು ಒಳಗೊಂಡಿವೆ. ಇವುಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ನಾಲ್ಕು ಖುಲಾಸೆ ಗೊಂಡಿದೆ. ಒಂದು ಪ್ರಕರಣದಲ್ಲಿ ಆರೋಪಿ ಮೃತಪಟ್ಟಿದ್ದು, ಎಂಟು ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಉಳಿದ ಎರಡು ಪ್ರಕರಣ ಗಳು ತನಿಖೆಯಲ್ಲಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News