ವಾಣಿಜ್ಯ ಚಟುವಟಿಕೆ ಪರಿಸರವನ್ನು ಕಾಯ್ದುಕೊಳ್ಳಬೇಕು: ಡಾ.ರಾಜೀವ್ ಶಾ

Update: 2024-04-27 16:06 GMT

ಮಣಿಪಾಲ, ಎ.27: ಯಾವುದೇ ವಾಣಿಜ್ಯ ಚಟುವಟಿಕೆ ತನ್ನ ಸುತ್ತಲಿನ ಪರಿಸರವನ್ನು ಹಾಳುಮಾಡದೆ ಕಾಯ್ದಿಟ್ಟುಕೊ ಳ್ಳಬೇಕು ಹಾಗೂ ಸುಸ್ಥಿರತೆ, ಸಾಮಾಜಿಕ ಜವಾಬ್ದಾರಿ ಮತ್ತು ನೀತಿ ಸಂಹಿತೆಯನ್ನು ಆಧರಿಸಿರಬೇಕು ಎಂದು ಮಣಿಪಾಲದ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್(ಟ್ಯಾಪ್ಮಿ)ನ ವಿದ್ವಾಂಸ ಡಾ.ರಾಜೀವ್ ಶಾ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್) ಆಶ್ರಯದಲ್ಲಿ ಪರಿಸರ ನಿರ್ವಹಣಾ ಶಾಸ್ತ್ರದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಡಾ. ರಾಜೀವ್ ಶಾ, ಹವಾಮಾನ ಬದಲಾವಣೆ ಮತ್ತು ಭೂ ತಾಪಮಾನದ ಏರಿಕೆಯ ಈ ದಿನಗಳಲ್ಲಿ ಎಲ್ಲಾ ವಾಣಿಜ್ಯ ಚಟುವಟಿಕೆಗಳು ತಮ್ಮ ಪರಿಸರವನ್ನು ಚೆನ್ನಾಗಿ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸುಸ್ಥಿರತೆ-ಜೀವವೈವಿಧ್ಯತೆಯ ರಕ್ಷಣೆಯನ್ನು, ಸಾಮಾಜಿಕ ಜವಾಬ್ದಾರಿ- ಕಾರ್ಮಿಕ ಮತ್ತು ಬಳಕೆದಾರರ ಹಕ್ಕುಗಳನ್ನು, ನೀತಿ ಸಂಹಿತೆ-ಮಾನವ ಹಕ್ಕುಗಳು ಮತ್ತು ಆರ್ಥಿಕ ಸಮಾನತೆಯ ವಿಷಯಗಳನ್ನು ಎತ್ತಿ ಹಿಡಿಯುವುದೇ ಪರಿಸರ ನಿರ್ವಹಣಾ ಶಾಸ್ತ್ರದ ಮೂಲ ತತ್ವಗಳಾಗಿವೆ ಎಂದು ವಿವರಿಸಿದರು.

ನಾವು ಮಾಡುವ ಪ್ರತೀ ಚಟುವಟಿಕೆಯನ್ನು ಪರಿಸರ ದೃಷ್ಟಿಕೋನದಿಂದ ನಿರ್ವಹಿಸಬಹುದು. ನಮ್ಮ ವಸ್ತು ಮತ್ತು ವಿಧಾನ ಗಳ ಆಯ್ಕೆಯಲ್ಲಿ ವೆಚ್ಚ ಮತ್ತು ಪ್ರಯೋಜನದ ವಿಶ್ಲೇಷಣೆಯೊಂದಿಗೆ ಹೆಚ್ಚು ಹೆಚ್ಚು ಪರಿಸರ ಸ್ನೇಹಿ ಆಯ್ಕೆಗಳನ್ನು ಮಾಡಬ ಹುದು. ಎಲ್ಲಾ ಚಟುವಟಿಕೆಗಳಲ್ಲಿ ಸಂಬಂಧ ಪಡುವ ಎಲ್ಲಾ ಜನರ ಹಿತವನ್ನು ಕಾಯ್ದುಕೊಳ್ಳುವದು ಮುಖ್ಯ ಎಂದರು.

ಕೇವಲ ಲಾಭಕ್ಕೋಸ್ಕರ ವಾಣಿಜ್ಯ ಎನ್ನುವ, ಅರ್ಥಶಾಸ್ತ್ರಜ್ಞ ಫ್ರೀಡ್ಮನ್‌ನ ವಾದವನ್ನು ಶಾ ತಳ್ಳಿಹಾಕಿದರು. ಹೆಚ್ಚು ಹೆಚ್ಚು ಪರಿಸರ ಸ್ನೇಹಿ ವಸ್ತು ಮತ್ತು ಸಾಮಾಜಿಕ ಕಳಕಳಿಯನ್ನು ಅಳವಡಿಸಿಕೊಳ್ಳುವುದರಲ್ಲಿಯೇ ಹೆಚ್ಚಿನ ಪ್ರಯೋಜನವೂ ಇದೆ ಎಂದು ಪ್ರತಿಪಾದಿಸಿದರು. ಜವಾಬ್ದಾರಿಯುತ ಮೈಕ್ರೋ ಫೈನಾನ್ಸಿಂಗ್ ಬಾಂಗ್ಲಾದೇಶದಲ್ಲಿ ಹೆಚ್ಚು ಉಪಯುಕ್ತ ವಾಗುತ್ತಿರು ವುದನ್ನು ಅವರು ಉದಾಹರಣೆಯಾಗಿ ನೀಡಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಈ ಸಂದರ್ಭದಲ್ಲಿ ಪರಿಸರ ತತ್ವಶಾಸ್ತ್ರವನ್ನು ವಾಸ್ತವಕ್ಕಿಳಿಸಲು ಪರಿಸರ ನಿರ್ವಹಣಾ ಶಾಸ್ತ್ರದ ಸ್ಪರ್ಶದ ಅಗತ್ಯವನ್ನು ಎತ್ತಿ ಹೇಳಿದರು. ಅಧ್ಯಾಪಕಿ ತನಿಷ್ಕಾ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News