ಚಿಕ್ಕಮಗಳೂರು; ಸಂತೆ ಮಾರ್ಕೆಟ್ ಆವರಣದಲ್ಲೇ ನಗರಸಭೆಯಿಂದ ತ್ಯಾಜ್ಯ ವಿಂಗಡಣೆ: ಸ್ಥಳೀಯರ ಆಕ್ರೋಶ

Update: 2022-06-28 17:57 GMT

ಚಿಕ್ಕಮಗಳೂರು, ಜೂ.28: ನಗರದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡಿ ನೂರಾರು ಮಂದಿ ಆಸ್ಪತ್ರೆ ಸೇರುತ್ತಿದ್ದರೂ ಎಚ್ಚೆತ್ತುಕೊಳ್ಳದ ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ಕೆಲಸಕ್ಕೆ ಮುಂದಾಗದೇ ನಗರದ ಜನವಸತಿ ಪ್ರದೇಶದಲ್ಲಿ ತ್ಯಾಜ್ಯದ ವಿಂಗಡಣೆ ಮಾಡುವ ಡಂಪಿಂಗ್ ಯಾರ್ಡ್ ಮಾಡುತ್ತಿದ್ದಾರೆಂದು ಆರೋಪಿಸಿ ನಿವಾಸಿಗಳು ಮಂಗಳವಾರ ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರನ್ನು ತರಾಟೆಗೆ ಪಡೆದ ಘಟನೆ ನಡೆಯಿತು.

ಚಿಕ್ಕಮಗಳೂರು ನಗರದಾದ್ಯಂತ ಪೌರಕಾರ್ಮಿಕರು ಸಂಗ್ರಹಿಸಿದ ತ್ಯಾಜ್ಯವನ್ನು ನಗರದ ಹೃದಯ ಭಾಗದಲ್ಲಿರುವ ಸಂತೆ ಮಾರುಕಟ್ಟೆ ಆವರಣಕ್ಕೆ ತಂದು ಬೇರೆ ವಾಹನಗಳಿಗೆ ಡಂಪ್ ಮಾಡುವುದು, ತ್ಯಾಜ್ಯ ವಿಂಗಡಣೆ ಮಾಡಲು ಮುಂದಾಗಿದ್ದರು. ಇದನ್ನು ಕಂಡ ಸ್ಥಳೀಯ ನಿವಾಸಿಗಳು ದಲಿತ ಸಂಘರ್ಷ ಸಮಿತಿ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂತೇ ಮಾರುಕಟ್ಟೆ ಪ್ರದೇಶದ ಜನವಸತಿ ಇರುವ ಪ್ರದೇಶವಾಗಿದ್ದು, ಪ್ರತೀ ಬುಧವಾರ ಇಲ್ಲಿ ಸಂತೆ ನಡೆಯುತ್ತದೆ. ಮೀನು ಮಾರುಕಟ್ಟೆಯೂ ಈ ಪ್ರದೇಶದಲ್ಲಿದ್ದು, ಈ ಆವರಣದಲ್ಲೇ ತ್ಯಾಜ್ಯ ಸುರಿದು ಡಂಪ್ ಮಾಡುವುದರಿಂದ ತ್ಯಾಜ್ಯದ ನೀರು ಎಲ್ಲೆಂದರಲ್ಲಿ ಹರಿಯುವುದರಿಂದ ಮತ್ತು ಗಬ್ಬು ವಾಸನೆಯಿಂದ  ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೂಡಲೇ ತ್ಯಾಜ್ಯ ಇಲ್ಲಿ ಡಂಪ್ ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು. ಅಲ್ಲದೇ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು.

ಬಳಿಕ ಸ್ಥಳಕ್ಕಾಮಿಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಪೌರಾಯುಕ್ತ ಬಸವರಾಜು ಅವರಿಗೆ ಸ್ಥಳೀಯರು ಸಂತೇಮೈದಾನದ ಆವರಣದಲ್ಲಿ ತ್ಯಾಜ್ಯ ಡಂಪ್ ಮಾಡುವುದಕ್ಕೆ ವಿರೊಧ ವ್ಯಕ್ತಪಡಿಸಿದರು.  ಆದರೆ ಇದಕ್ಕೆ ಒಪ್ಪದ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಸಂತೇಮೈದಾನದ ಜಾಗ ನಗರಸಭೆ ಸೇರಿದ್ದಾಗಿದ್ದು, ನಗರದಲ್ಲಿ ಸಂಗ್ರಹಿಸಿದ ತ್ಯಾಜ್ಯ ವಿಂಗಡಣೆ ಮಾಡಲು, ಡಂಪ್ ಮಾಡಲು ಬೇರೆ ಜಾಗ ಇಲ್ಲದ ಕಾರಣಕ್ಕೆ ಸಂತೇಮೈದಾನದಲ್ಲಿರುವ ಖಾಲಿ ಜಾಗದಲ್ಲಿ ವಿಂಗಡಣೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು. ಇದರಿಂದ ಕುಪಿತರಾದ ಸ್ಥಳೀಯರು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರೊಂದಿಗೆ ಮಾತಿನ ಚಕಮಕಿ, ವಾಗ್ವಾದ ನಡೆಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳಕ್ಕಾಮಿಸಿದ ಪೊಲೀಸರು ಸ್ಥಳೀಯರನ್ನು ನಿಯಂತ್ರಿಸಲು ಮುಂದಾದಾಗ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಸಂತೇಮೈದಾನಕ್ಕೆ ಹೊಂದಿಕೊಂಡಂತೆ ತಮಿಳು ಕಾಲನಿ ಇದ್ದು, ಈ ಬಡಾವಣೆಯಲ್ಲಿ ಸಾವಿರಾರು ಜನರು ವಾಸವಾಗಿದ್ದಾರೆ. ಈ ಬಡಾವಣೆಗೆ ನಗರಸಭೆಯಿಂದ ಇತ್ತೀಚೆಗೆ ಪೂರೈಕೆಯಾದ ಕಲುಷಿತ ನೀರು ಕುಡಿದು ಮಕ್ಕಳೂ ಸೇರಿದಂತೆ ನೂರಾರು ವಾಂತಿ ಬೇಧಿಯಿಂದ ಬಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡಾವಣೆ ಜನರು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಂದ ನಲುಗುತ್ತಿರುವ ಬಡಾವಣೆ ಸಮೀಪದಲ್ಲಿ ತ್ಯಾಜ್ಯ ಸುರಿದು ಡಂಪಿಂಗ್ ಯಾರ್ಡ್ ಮಾಡುವುದರಿಂದ ಮತ್ತಷ್ಟು ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಲಿದ್ದಾರೆ. ಬಡಜನರು, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಬಡಾವಣೆಯಲ್ಲಿ ತ್ಯಾಜ್ಯ ಹಾಕುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ತ್ಯಾಜ್ಯ ಡಂಪ್ ಮಾಡಲು ಬಿಡುವುದಿಲ್ಲ ಎಂದು ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಸೇರಿದಂತೆ ಸ್ಥಳದಲ್ಲಿದ್ದ ನಿವಾಸಿಗಳು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಈ ಹಿಂದೆ ತ್ಯಾಜ್ಯ ಡಂಪ್ ಮಾಡುತ್ತಿದ್ದ ಸ್ಥಳದಲ್ಲಿ ನಗರಸಭೆಯಿಂದ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ನಡೆಯುತ್ತಿರುವುದರಿಂದ ತ್ಯಾಜ್ಯ ವಿಂಗಡಣೆ, ಡಂಪ್ ಮಾಡಲು ಅಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂತೇ ಮಾರುಕಟ್ಟೆ ಆವರಣದಲ್ಲಿರುವ ಖಾಲಿ ಜಾಗದಲ್ಲಿ ತ್ಯಾಜ್ಯ ಡಂಪ್ ಮಾಡಲಾಗುತ್ತಿದೆ. ಇದು ತಾತ್ಕಾಲಿಕವಾಗಿದ್ದು, ಬೇರೆಡೆ ಸೂಕ್ತ ಜಾಗ ಗುರುತಿಸಿದ ಬಳಿಕ ಡಂಪಿಂಗ್ ಯಾರ್ಡ್ ಅನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. 

ಆದರೆ ಇದಕ್ಕೆ ಒಪ್ಪದ ಸ್ಥಳೀಯರು, ಸಂತೇ ಮಾರುಕಟ್ಟೆ ಪ್ರದೇಶ ಜನವಸತಿ ಇರುವ ಪ್ರದೇಶವಾಗಿದ್ದು, ಇಲ್ಲಿನ ಜನರು ಈಗಾಗಲೇ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಇಲ್ಲಿ ಯಾವುದೇ ಕಾರಣಕ್ಕೂ ಕಸ ವಿಂಗಡಣೆಗೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರೊಂದಿಗೆ ಮತ್ತೆ ವಾಗ್ವಾದ ನಡೆಸಿದರು. ಬಳಿಕ ಕಸ ವಿಗಂಡಣೆಗೆ ಬೇರೆ ಜಾಗ ಗುರುತಿಸಲಾಗುವುದು. ಇದಕ್ಕಾಗಿ ನಾಲ್ಕು ದಿನಗಳ ಕಾಲಾವಕಾಶ ನೀಡುವಂತೆ ಪೌರಾಯುಕ್ತ ಬಸವರಾಜ್ ಸ್ಥಳೀಯರಲ್ಲಿ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಸ್ಥಳೀಯರು ನಾಲ್ಕು ದಿನಗಳ ಒಳಗೆ ಕಸವಿಂಗಡಣೆ, ಡಂಪಿಂಗ್ ಯಾರ್ಡ್‍ಗೆ ಬೇರೆ ಜಾಗ ಗುರುತಿಸಬೇಕು. ತಪ್ಪಿದಲ್ಲಿ ನಗರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸ್ಥಳೀಯರಾದ ಮೌಸಿನ್, ಸಾದಿಕ್, ನಗರಸಭೆ ನಾಮನಿರ್ದೇಶಿತ ಸದಸ್ಯ ರವಿ, ಮುಬಾರಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ನಗರಸಭೆ ಆಡಳಿತ ನಗರದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡಲು ಮುಂದಾಗಿದೆ. ನಗರದ ಹೃದಯಭಾಗದಲ್ಲಿರುವ ಸಂತೇಮೈದಾನ ಜನವಸತಿ ಇರುವ ಪ್ರದೇಶವಾಗಿದ್ದು, ಇಲ್ಲಿನ ಬಡಾವಣೆ ಜನರು ಈಗಾಗಲೇ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಗರಸಭೆ ಆಡಳಿತ ನಗರದಲ್ಲಿ ಸಂಗ್ರಹಿಸಿದ ಎಲ್ಲ ತ್ಯಾಜ್ಯವನ್ನು ಸಂತೇಮೈದಾನಕ್ಕೆ ತಂದು ಇಲ್ಲಿ ಡಂಪ್ ಮಾಡುತ್ತಿದ್ದಾರೆ. ಇದರಿಂದ ಇಲ್ಲಿನ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ಜನರ ವಿರೋಧದ ಮಧ್ಯೆಯೂ ನಗರಸಭೆ ಅಧಿಕಾರಿಗಳು ಸಂತೇಮೈದಾನವನ್ನು ಡಂಪಿಂಗ್‍ಯಾರ್ಡ್ ಮಾಡುವ ಮೂಲಕ ಜನವಿರೋಧಿ ನಿಲುವು ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯರ ಮನವಿಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ವಿರೋಧದ ಮಧ್ಯೆಯೂ ತ್ಯಾಜ್ಯ ತಂದು ಡಂಪ್ ಮಾಡಲಾಗುತ್ತಿದೆ. ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಇದನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಲು 4 ದಿನಗಳ ಕಾಲಾವಕಾಶ ಕೇಳಿದ್ದಾರೆ. 4 ದಿನಗಳ ಒಳಗೆ ಬೇರೆಡೆ ತ್ಯಾಜ್ಯ ಡಂಪ್ ಮಾಡಲು ಕ್ರಮವಹಿಸದಿದ್ದಲ್ಲಿ ನಗರಸಭೆ ಕಚೇರಿ ಎದುರು ತ್ಯಾಜ್ಯ ಸುರಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

- ದಂಟರಮಕ್ಕಿ ಶ್ರೀನಿವಾಸ್, ದಸಂಸ ಸಂಚಾಲಕ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News