ಒಎನ್‌ಜಿಸಿ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ ಪತನ: ನಾಲ್ವರು ಸಾವು

Update: 2022-06-29 05:37 GMT

ಹೊಸದಿಲ್ಲಿ, ಜೂ. 28: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ಒಎನ್‌ಜಿಸಿ)ನ ಹೆಲಿಕಾಪ್ಟರ್ ಒಎನ್‌ಜಿಸಿ ಮುಂಬೈಯ ಹೈಯ ಸಾಗರ್ ಕಿರಣ್ ತೈಲ ಬಾವಿಯ ಸಮೀಪ ಇಳಿಯಲು ಪ್ರಯತ್ನಿಸಿದ ಸಂದರ್ಭ ಅರಬಿ ಸಮುದ್ರದಲ್ಲಿ ಪತನಗೊಂಡ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. 

ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು ಹಾಗೂ 7 ಮಂದಿ ಪ್ರಯಾಣಿಕರು ಸೇರಿದಂತೆ 9 ಮಂದಿ ಇದ್ದರು. ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪತನಗೊಂಡ ವಿಮಾನದಿಂದ  ಎಲ್ಲ 9 ಮಂದಿಯನ್ನು ಹೊರ ತೆಗೆಯಲಾಗಿದೆ. ಆದರೆ, ನಾಲ್ವರು ಮೃತಪಟ್ಟಿದ್ದಾರೆ. 
ಹೆಲಿಕಾಪ್ಟರ್‌ನಲ್ಲಿ ಒಎನ್‌ಜಿಸಿಯ 6 ಮಂದಿ ಸಿಬ್ಬಂದಿ ಹಾಗೂ ಕೆಲಸ ಗುತ್ತಿಗೆ ಪಡೆದುಕೊಂಡ ಕಂಪೆನಿಯ ಓರ್ವ ಇದ್ದ. ಮೃತಪಟ್ಟ ನಾಲ್ವರಲ್ಲಿ ಮೂವರು ಒಎನ್‌ಜಿಸಿ ಉದ್ಯೋಗಿಗಳು. 

ಮುಂಬೈ ಕರಾವಳಿಯ ಪಶ್ಚಿಮದಿಂದ 111 ಕಿ.ಮೀ. ದೂರದಲ್ಲಿ ಇರುವ ತೈಲ ಬಾವಿಯ ಸಮೀಪ ಹೆಲಿಕಾಪ್ಟರ್ ಅನ್ನು ಇಳಿಸಲು ಪ್ರಯತ್ನಿಸಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ತೈಲಬಾವಿಯ ಸಮೀಪದ ಇಳಿಯಬೇಕಾದ ಭೂ ಪ್ರದೇಶದಿಂದ ಸುಮಾರು 1.5 ಕಿ.ಮೀ. ದೂರದ ಸಮದ್ರದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆರಂಭದಲ್ಲಿ ಹೆಲಿಕಾಪ್ಟರ್ ಪತನಗೊಂಡ ಪ್ರದೇಶದ ಸಮೀಪದಲ್ಲಿರುವ ಸಾಗರ ಕಿರಣ್ ತೈಲ ಬಾವಿಯಿಂದ ರಕ್ಷಣಾ ದೋಣಿಯನ್ನು ತಂದು ಕನಿಷ್ಠ ಓರ್ವನನ್ನು ರಕ್ಷಿಸಲಾಯಿತು. ಅನಂತರ ಸಮುದ್ರದಲ್ಲಿದ್ದ ಪೂರೈಕೆ ನೌಕೆ ಮಾಲವಿಯ-16 ಹಾಗೂ ಮುಂಬೈಯ ಎಂಆರ್‌ಸಿಸಿ ಜಂಟಿ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ರಕ್ಷಿಸಿತು. 

ಸಮುದ್ರದಲ್ಲಿದ್ದ ತಟ ರಕ್ಷಣಾ ಪಡೆಯ ಹಡಗು ಕೂಡ ಘಟನಾ ಸ್ಥಳಕ್ಕೆ ಧಾವಿಸಿತು. ಮುಂಬೈಯಿಂದ ಹೊರಗೆ ಹೋಗುತ್ತಿದ್ದ ಇನ್ನೊಂದು ಹಡಗು ಕೂಡ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿತು. ತಟ ರಕ್ಷಣಾ ಪಡೆಯ ವಿಮಾನ ಸಿಬ್ಬಂದಿಯನ್ನು ರಕ್ಷಿಸಲು ತೆಪ್ಪಗಳನ್ನು ಕೆಳಗೆ ಹಾಕಿತು.
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಲು ಇದುವರೆಗೆ ಕಾರಣ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News