ಮಹಾರಾಷ್ಟ್ರ: ಗುರುವಾರ ವಿಶ್ವಾಸಮತ ಯಾಚನೆಗೆ ಉದ್ದವ್ ಠಾಕ್ರೆಗೆ ಸೂಚಿಸಿದ ರಾಜ್ಯಪಾಲ ಭಗತ್ ಸಿಂಗ್

Update: 2022-06-29 04:51 GMT
Photo:PTI

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ರಾಜ್ಯ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಬಂಡಾಯ ಎದ್ದಿರುವ  ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ನಾಳೆ (ಗುರುವಾರ) ಬೆಳಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಠಾಕ್ರೆಗೆ  ಸೂಚನೆ ನೀಡಿದ್ದಾರೆ ಎಂದು NDTV ವರದಿ ಮಾಡಿದೆ.

ರಾಜ್ಯಪಾಲರು ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಕಳುಹಿಸಿದ್ದು, ನಾಳೆ ವಿಶೇಷ ಅಧಿವೇಶನಕ್ಕೆ ಕರೆ ನೀಡಿದ್ದಾರೆ.

 ಬಿಜೆಪಿ ನಾಯಕ ಹಾಗೂ  ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ  ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸಮತ ಪರೀಕ್ಷೆಗೆ  ಸೂಚಿಸುವಂತೆ ಒತ್ತಾಯಿಸಿದ್ದರು.

“ಮಹಾರಾಷ್ಟ್ರ ರಾಜ್ಯದಲ್ಲಿ ತೆರೆದುಕೊಳ್ಳುತ್ತಿರುವ ಪ್ರಸ್ತುತ ರಾಜಕೀಯ ಸನ್ನಿವೇಶವು ಬಹಳ ಗೊಂದಲದ ಚಿತ್ರವನ್ನು ನೀಡುತ್ತಿದೆ. ಶಿವಸೇನಾ ಶಾಸಕಾಂಗ ಪಕ್ಷದ 39 ಶಾಸಕರು ಮಹಾ ವಿಕಾಸ್ ಅಘಾಡಿ ಸರಕಾರದಿಂದ ನಿರ್ಗಮಿಸುವ ಪ್ರಾಮಾಣಿಕ ಬಯಕೆ ಹಾಗೂ  ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿದ್ಯುನ್ಮಾನ ಹಾಗೂ  ಮುದ್ರಣ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರವಾಗಿದೆ ”ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ರಾಜಭವನಕ್ಕೆ ಏಳು ಮಂದಿ ಸ್ವತಂತ್ರ ಶಾಸಕರಿಂದ ಪತ್ರ ಬಂದಿದ್ದು, ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹುಮತದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News