ಬಡತನ ಸಹಿಸಬಹುದು ಆದರೆ ಅಸ್ಪೃಶ್ಯತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ: ಸಂಸದ ವಿ.ಶ್ರೀನಿವಾಸ ಪ್ರಸಾದ್

Update: 2022-06-29 15:46 GMT

ಮೈಸೂರು,ಜೂ.29: ಇಂದು ನಮ್ಮ ದೇಶ ಎದುರಿಸುತ್ತಿರುವ ಹಲವು ಹಿನ್ನೆಡೆಗಳಿಗೆ ಸಾಮಾಜಿಕ ಸಾಮರಸ್ಯ ಕೊರತೆಯೇ ಮುಖ್ಯ ಕಾರಣ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟರು. 

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಮರಸ್ಯ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ದ ಕುದ್ಮಲ್ ರಂಗರಾವ್ ಅವರ 163ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. 

ನಮ್ಮ ದೇಶವು ಎಲ್ಲಾ ವಿಧದ ಸಂಪನ್ಮೂಲಗಳಿಂದ ಶ್ರೀಮಂತಗೊಂಡಿದ್ದರು. ಸಾಮರಸ್ಯ ಮತ್ತು ಸಹಬಾಳ್ವೆಯ ಕೊರೆತೆಯಿಂದಾಗಿ ಬಡತನ, ಹಸಿವು ಹಾಗೂ ಅಸಮಾನತೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾನವೀಯತೆ ದೃಷ್ಟಿಯಿಂದ ಬದುಕಬೇಕಾದ ಮನುಷ್ಯ ಜಾತಿಯೇ ಸರ್ವಸ್ವ ಎಂದು ತಿಳಿದು ಅದಕ್ಕಾಗಿ ಕೊಲೆ ಮಾಡಲು ಹಿಂಜರಿಯದ ಅನೇಕ ಸಂಗತಿಗಳನ್ನು ನಾವು ನೋಡುತ್ತಿದ್ದೇವೆ. ಬಡತನ ಸಹಿಸಬಹುದು ಆದರೆ ಅಸ್ಪಶ್ಯತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕುದ್ಮುಲ್ ರಂಗರಾವ್ ಅವರು ಮೇಲ್ಜಾತಿ ಸಮುದಾಯದವರಾದರೂ ತಮ್ಮ ಜೀವನದುದ್ದಕ್ಕೂ ತಳಸಮುದಾಯದ ಏಳಿಗೆಗಾಗಿ ಅವೀರತವಾಗಿ ದುಡಿದ ಬಹಳ ಅಪರೂಪದ ವ್ಯಕ್ತಿ ಎಂದು ಹೇಳಿದರು.

ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೂ ಪ್ರತಿದಿನ ಪ್ರತಿ ಕ್ಷಣ ಜಾತಿ ಕಾರಣಕ್ಕಾಗಿ ಅವಮಾನಗಳನ್ನು ಎದುರಿಸುತ್ತಿರುವ ಅನೇಕ ಘಟನೆಗಳನ್ನು ನೋಡುತ್ತಿದ್ದೇವೆ. ನಮ್ಮ ದೇಶದಲ್ಲಿ ಅಂರ್ತಜಾತಿ ವಿವಾಹವನ್ನು ದೊಡ್ಡ ಅಪರಾದದಂತೆ ನೋಡಲಾಗುತ್ತದೆ. ಅನ್ಯ ಜಾತಿಯ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಮದುವೆ ಆದ ಮರು ದಿನವೇ ಅವರನ್ನು ಹತ್ಯೆಮಾಡುವುದು ಇಂದು ಸಮಾನ್ಯವಾಗಿಬಿಟ್ಟಿರುವ ಈ ಕಾಲದಲ್ಲಿ ರಂಗರಾವ್ ಅವರು 19ನೇ ಶತಮಾದಲ್ಲೇ ತಮ್ಮ ಮಗಳಿಗೆ ಅನ್ಯ ಜಾತಿಯ ಹುಡುಗನೊಂದಿಗೆ ಮದುವೆ ಮಾಡಿ ಮಾದರಿಯಾದದ್ದು ಸಾಮಾನ್ಯ ಮಾತಲ್ಲ ಎಂದು ಸ್ಮರಿಸಿದರು.

ಇಂದು  ಪಠ್ಯ ಪರಿಸ್ಕರಣೆ ಹೆಸರಿನಲ್ಲಿ  ಅನಗತ್ಯ ವ್ಯಕ್ತಿಗಳ ವಿಚಾರವನ್ನು ಸೇರಿಸುವ ಬದಲು ಕುದ್ಮಲ್ ರಂಗರಾವ್‍ರಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ರಾಜ್ಯ ಸರ್ಕಾರ ಕೂಡಲೇ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ರಂಗರಾವ್ ಅವರ ಚಿಂತನೆಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡಬೇಂದು ವೇದಿಕೆಯಲ್ಲಿ ಆಗ್ರಹಿಸಿದರು.

ಪ್ರೊ.ಬಿ.ಗಂಗಾಧರ್ ಮಾತನಾಡಿ, ಕುದ್ಮಲ್ ರಂಗರಾವ್ ಅವರು ಶಿವಮೊಗ್ಗ ಜಿಲ್ಲೆಯ ಕುದ್ಮಲ್ ಎಂಬ ಪುಟ್ಟ ಗ್ರಾಮದಲ್ಲಿ  ಮೇಲ್ಜಾತಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿ. ಯಾವ ಸಮುದಾಯನ್ನು ಪ್ರಾಣಿ ಹಾಗೂ ಪಕ್ಷಿಗಳಿಗಿಂತ ಕೀಳಾಗಿ ಕಾಣುತ್ತಿದ್ದ ಸಮುದಾಯದ ಶ್ರೇಯೋಭಿವೃದ್ದಿಗಾಗಿ ತಮ್ಮ ಜೀವನದ ಕ್ಷಿಟ್ಟ ಕಡೆಯ ದಿನದವರೆಗೂ ಹೋರಾಟ ಮಾಡಿದರು. ಅವರ ತಂದೆ ಒಬ್ಬ ಶ್ರೀಮಂತ ಮುಸ್ಲಿಮ್ ಜಮೀನ್ದಾರರ ಮನೆಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಾ ರಂಗರಾವ್ ಅವರಿಗೆ ನಾಲ್ಕನೇ ತರಗತಿವರೆಗೆ ಶಿಕ್ಷಣ ನೀಡಿದರು.

ರಂಗರಾವ್ ಅವರು ನಾಲ್ಕನೇ ತರಗತಿ ಶಿಕ್ಷಣ ಪಡೆದು ಕೇವಲ ಎಂಟು ರೂಪಾಯಿ ವೇತನದೊಂದಿಗೆ ಶಿಕ್ಷಕ ವೃತ್ತಿ ಆರಂಭಿಸಿದರು. ನಂತರ ದಿನಗಳಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಹಣದಿಂದ ಶಾಲೆ ತೆರೆದು ಅಸ್ಪಶ್ಯ ಸಮುದಾಯದ ಜನರಿಗೆ ಶಿಕ್ಷಣ ನೀಡಲು ಮುಂದಾದರು. ಆಗ ಆ ಊರಿನ ಮೇಲ್ಜಾತಿಯ ಶಿಕ್ಷಣ ವೃತ್ತಿ ಮಾಡುತ್ತಿದ್ದ ಕೇಲವರು ಶಿಕ್ಷಕರಾಗಲೂ ನಿರಾಕರಿಸಿ ತೀವ್ರ ವಿರೋಧ ವ್ಯಕ್ತಪಡಿಸಿದಾಗ, ರಂಗರಾವ್ ಅವರು ಬ್ರೀಟಿಷ್ ಅಧಿಕಾರಿಯನ್ನು ಭೇಟಿ ಮಾಡಿ ಕ್ರಿಶ್ಚಿಯನ್ ಶಿಕ್ಷಕರಿಂದ ತಮ್ಮ ಶಿಕ್ಷಣ ಕಾರ್ಯ ಮುಂದುವರಿಸಿದರು ಎಂದು ಹೇಳಿದರು.

ತಮ್ಮ ಸ್ವಂತ ಹಣದದಿಂದ ರಂಗರಾವ್ ಅವರು ಭೂಹೀನ ಕೆಳಸ್ತರದ ಜಾತಿಯವರಿಗೆ ಉಚಿತವಾಗಿ ಭೂಮಿ ನೀಡಲು ಮುಂದಾದರು. ನಂತರ ಕಾನೂನು ಪದವಿ ಪಡೆದು ಅನ್ಯಾಯಕ್ಕೆ ಒಳಗಾದ ಬಡವರ ಪರ ವಕಾಲತ್ತು ವಹಿಸುತ್ತಿದ್ದರಿಂದ ಬಡವರ ವಕೀಲರೆಂದೇ ಪ್ರಖ್ಯಾತಿ ಪಡೆದಿದ್ದರು. ಹೀಗೆ ತಳಸಮುದಾಯದ ಹೋರಾಟ ಮಾಡುತ್ತಿದ್ದ ರಂಗರಾವ್ ಅವರಿಗೆ ಸಹಜವಾಗಿಯೇ ಕೆಲ ಮೇಲ್ಜಾತಿಯವರಿಂದ ಬೆದರಿಕೆಗಳು ಬರುತ್ತಿದ್ದವು. ಯಾವ ಬೆದರಿಕೆಗಳಿಗೂ ಹೆದರ ಅವರು, ಜಾತಿ ವಿವಾಶಕ್ಕಾಗಿ ಅಂತರ್ ಜಾತಿ ವಿವಾಹಕ್ಕೆ ಒತ್ತುನೀಡುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ. ಹೇಮಂತ ಕುಮಾರ್, ಹಿರಿಯ ವಕೀಲ ಶ್ಯಾಮ್ ಭಟ್,ಡಾ.ಆನಂದ ಕುಮಾರ್ ಹಾಗೂ ಸಿಂಡಿಕೇಟ್ ಸದಸ್ಯ ಈ.ಸಿ. ನಿಂಗರಾಜು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News