''ಹಿಂದಿನ ಪಠ್ಯವನ್ನು ಮುಂದುವರಿಸದಿದ್ದರೆ, ಅನಿರ್ದಿಷ್ಟಾವಧಿ ಧರಣಿ'': ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಕೆ

Update: 2022-06-30 15:23 GMT

ಬೆಂಗಳೂರು, ಜೂ.30: ಸರಕಾರವು ವಿವಾದಿತ ಪಠ್ಯಪರಿಷ್ಕರಣೆಯ ಪ್ರತಿಭಟನೆಗೆ ಮಣಿದಿದ್ದು, ತಿದ್ದೋಲೆಯನ್ನು ಬಿಡುಗಡೆ ಮಾಡಿದೆ. ಆದರೆ ತಿದ್ದೋಲೆಯಲ್ಲೂ ಅನ್ಯಾಯಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡದೆ, ಬರಗೂರು ಅಧ್ಯಕ್ಷತೆಯಲ್ಲಾದ ಹಿಂದಿನ ಪಠ್ಯವನ್ನು ಮುಂದುವರೆಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ದಲಿತ, ಹಿಂದುಳಿದ ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ಪಠ್ಯ ಮರುಪರಿಷ್ಕರಣೆಯಲ್ಲಾದ ಅನ್ಯಾಯವನ್ನು ಈ ತಿದ್ದೋಲೆಯು ಸರಿಪಡಿಸಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ತಿದ್ದೋಲೆ ಸುತ್ತೋಲೆಯನ್ನು ವಾಪಸ್ ಪಡೆದು ಕಳೆದ ವರ್ಷದ ಪಠ್ಯಗಳನ್ನೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಬೇಕು ಎಂದರು.

ಡಾ.ಅಂಬೇಡ್ಕರ್ ಅವರ ಬಗ್ಗೆ ‘ಸಂವಿಧಾನ ಶಿಲ್ಪಿ’ ಎಂಬ ವಿಶೇಷಣವನ್ನು ಮರುಸೇರ್ಪಡೆ ಮಾಡುವುದಾಗಿ ತಿದ್ದೋಲೆಯಲ್ಲಿ ತಿಳಿಸಲಾಗಿದೆ. ಆದರೆ ಡಾ.ಅಂಬೇಡ್ಕರ್ ಅವರ ಬಗ್ಗೆ ಬರಗೂರು ಸಮಿತಿ ಪಠ್ಯದಲ್ಲಿದ್ದ ಹೋರಾಟಗಳ ವಿವರವನ್ನು ಮರುಪರಿಷ್ಕರಣೆಯಲ್ಲಿ ತೆಗೆದುಹಾಕಿದ್ದರೂ, ತಿದ್ದೋಲೆಯಲ್ಲಿ ಸೇರಿಸಿಲ್ಲ. 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಭಾಗ-2ರಲ್ಲಿದ್ದ ಅಂಬೇಡ್ಕರ್ ಅವರ ಜೀವನ ವಿವರಗಳು, ಮಹಾಡ್ ಸತ್ಯಾಗ್ರಹ, ಕಾಲಾರಾಂ ದೇಗುಲ ಪ್ರವೇಶದಂತಹ ಹೋರಾಟದ ವಿವರಗಳನ್ನು ಮರು ಪರಿಷ್ಕರಣೆಯಲ್ಲಿ ಬಿಟ್ಟಿದ್ದು ತಿದ್ದೋಲೆಯಲ್ಲಿ ಸೇರಿಸಿಲ್ಲ ಎಂದರು.

ಇದೇ ಪಠ್ಯದಲ್ಲಿ ಬರಗೂರು ಸಮಿತಿಯು ಮಹಿಳಾ ಸಮಾಜ ಸುಧಾರಕರ ಬಗ್ಗೆ ಹೊಸ ಪಾಠ ಸೇರಿಸಿ ಮೊದಲಿಗೆ ಸಾವಿತ್ರಿಬಾಯಿ ಫುಲೆ ಅವರ ವಿವರಗಳನ್ನು ನೀಡಿತ್ತು. ಮರು ಪರಿಷ್ಕರಣೆಯಲ್ಲಿ ಇಡೀ ಪಾಠವನ್ನೇ ಕಿತ್ತು ಹಾಕಿ ಸಮಾಜ ಸುಧಾರಕಿಯರನ್ನು ಕಡೆಗಣಿಸಲಾಗಿದೆ. ವಿಶೇಷವಾಗಿ ಸಾವಿತ್ರಿಬಾಯಿ ಫುಲೆಯವರ ವಿವರ ಕೈಬಿಟ್ಟು ಭಾರತದ ಮೊದಲ ಶಿಕ್ಷಕಿ ಎನಿಸಿಕೊಂಡಿದ್ದ ದಲಿತ ಸಾಧಕಿಗೆ ಅವಮಾನ ಮಾಡಲಾಗಿದೆ ಎಂದು ಅವರು ಕಿಡಿಕಾರಿದರು.

ಕನ್ನಡ ಭಾಷಾ ಪಠ್ಯದಲ್ಲೂ ಸಾವಿತ್ರಿಬಾಯಿ ಫುಲೆಯವರಿಗೆ ಅವಮಾನವಾಗಿದೆ. 7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿದ್ದ ಡಾ.ಅನುಪಮಾ ವಿರಚಿತ ಸಾವಿತ್ರಿಬಾಯಿ ಫುಲೆಯವರ ಪಾಠ ತೆಗೆದು ಅದೇ ವಿಷಯದ ರಮಾನಂದ ಆಚಾರ್ಯ ಎಂಬುವರ ಪಾಠವನ್ನು ಸೇರಿಸಲಾಗಿದೆ. ಒಬ್ಬ ಮಹಿಳೆ ಬರೆದ ಪಾಠವನ್ನು ತೆಗೆಯಲು ಕಾರಣಗಳೇ ಇರಲಿಲ್ಲ. ಅದಲ್ಲದೆ, ಹೊಸದಾಗಿ ಸೇರ್ಪಡೆಯಾದ ಪಾಠದಲ್ಲಿ ಸಾವಿತ್ರಿಬಾಯಿ ಫುಲೆ ಅವರನ್ನು ಅವಳು, ಇವಳು ಎಂದು ಕರೆದು ಅವಮಾನಿಸಲಾಗಿದೆ. ದಲಿತ ಮಹಿಳೆ ಎಂದು ಹೀಗೆ ಕರೆಯಲಾಗಿದೆಯೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡ ಮೋಹನ್ ರಾಜ್ ಅವರು ಮಾತನಾಡಿ, ‘6ನೇ ತರಗತಿಯ ಕನ್ನಡ ಪಠ್ಯದಲ್ಲಿದ್ದ ಚೆನ್ನಣ್ಣ ವಾಲೀಕಾರ ಅವರು ಅಂಬೇಡ್ಕರ್ ಅವರ ಬಗ್ಗೆ ಬರೆದಿದ್ದ ಪಠ್ಯವನ್ನು ತೆಗೆದು ಹಾಕಲಾಗಿದೆ. ಹಾಗೆಯೇ 7ನೇ ತರಗತಿಯ ಕನ್ನಡ ಪಠ್ಯದಲ್ಲಿದ್ದ ಅರವಿಂದ ಮಾಲಗತ್ತಿ ಅವರ ಬುದ್ಧಗುರು ಕುರಿತ ಪಠ್ಯವನ್ನು ಕೈ ಬಿಡಲಾಗಿದೆ. ಅಷ್ಟೇಕೆ 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಬೌದ್ಧಧರ್ಮ ಮತ್ತು ಜೈನಧರ್ಮದ ಪಾಠವನ್ನು ಕೈ ಬಿಡಲಾಗಿದೆ’ ಎಂದು ಆರೋಪಿಸಿದರು.

ಮರುಪರಿಷ್ಕರಣೆಯಲ್ಲಿ ಕನ್ನಡ ಪಠ್ಯಗಳಲ್ಲಿದ್ದ ಎಲ್ಲಾ ದಲಿತ ಲೇಖಕ-ಲೇಖಕಿಯರ ಪಾಠಗಳನ್ನು ತೆಗೆದುಹಾಕಲಾಗಿದೆ. ಬಹುಪಾಲು ಮಹಿಳೆ ಮತ್ತು ಹಿಂದುಳಿದ ವರ್ಗದ ಬರಹಗಾರರ ಪಾಠಗಳನ್ನು ಕೈಬಿಡಲಾಗಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರ ಪಾಠಗಳನ್ನು ತೆಗೆದುಹಾಕಿ ಅನ್ಯಾಯ ಮಾಡಲಾಗಿದೆ. ಕರ್ನಾಟಕ ಏಕೀಕರಣಕ್ಕೆ ದುಡಿದ ಕವಿ ಕಯ್ಯಾರ ಅವರ ಹೆಸರನ್ನೇ ತೆಗೆದದ್ದು ಮತ್ತೊಂದು ಅನ್ಯಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

--------------

ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದ ಬರಹಗಾರರಿಗೆ ಅನ್ಯಾಯ ಮಾಡಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಮರುಪರಿಷ್ಕರಣೆಯ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ವಿರುದ್ಧವಾದ ಮಾತುಗಳನ್ನು ಪಠ್ಯಪುಸ್ತಕಗಳ ತಮ್ಮ ಹೇರಿಕೆಯಲ್ಲಿ ದಾಖಲಿಸಿ ಸಂವಿಧಾನದ ಆಶಯಕ್ಕೆ ತಾವು ವಿರೋಧಿ ಎಂದು ಅಧಿಕೃತಗೊಳಿಸಿದ್ದಾರೆ.

-ಮಾವಳ್ಳಿ ಶಂಕರ್, ದಸಂಸ(ಅಂಬೇಡ್ಕರ್ ವಾದ)ದ ಸಂಚಾಲಕ

--------------------------------------

ದೇಶಪ್ರೇಮದ ಬಗ್ಗೆ ಮಾತನಾಡುವವರು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾದ ರಾಣಿ ಅಬ್ಬಕ್ಕನವರ ವಿವರಗ¼ನ್ನು ತೆಗೆದು ಹಾಕಿದ್ದಾರೆ. ಜೊತೆಗೆ ಯಶೋಧರಮ್ಮ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಅವರ ಪಾಠಗಳೂ ಇಲ್ಲ. ವಿವಾದಿತ ಪಠ್ಯಪರಿಷ್ಕರಣೆಗೆ ತಿದ್ದೋಲೆಯು ಪರಿಹಾರವಲ್ಲ. 

-ನಾಗಣ್ಣ, ಡಿಎಚ್‍ಎಸ್‍ನ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News