ಪುಲಿಟ್ಝರ್ ಪ್ರಶಸ್ತಿ ವಿಜೇತೆ ಕಾಶ್ಮೀರಿ ಫೋಟೋಜರ್ನಲಿಸ್ಟ್ ಸನಾ ಇರ್ಷಾದ್‍ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಣೆ

Update: 2022-07-02 11:47 GMT

ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಡೆದ ಇಮಿಗ್ರೇಶನ್ ಅಧಿಕಾರಿಗಳು

 ಹೊಸದಿಲ್ಲಿ: ಈ ವರ್ಷ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾಗಿರುವ ಕಾಶ್ಮೀರಿ ಫೋಟೋಜರ್ನಲಿಸ್ಟ್ ಸನಾ ಇರ್ಷಾದ್ ಮಟ್ಟೂ ಅವರನ್ನು ದಿಲ್ಲಿಯಿಂದ ಪ್ಯಾರಿಸ್‍ಗೆ ಪ್ರಯಾಣಿಸಲು ಇಮಿಗ್ರೇಶನ್ ಅಧಿಕಾರಿಗಳು ತಡೆದಿದ್ದಾರೆ. ಸನ್ನಾ ಅವರು ಫ್ರೆಂಚ್ ವೀಸಾ ಹೊಂದಿರುವ ಹೊರತಾಗಿಯೂ ಅವರಿಗೆ ದೇಶದಿಂದ ಹೊರಗೆ ಪ್ರಯಾಣಿಸಲು ಅನುಮತಿ ನಿರಾಕರಿಸಲಾಗಿದೆ.

ಸೆರೆಂಡಿಪಿಟಿ ಆರ್ಲೆಸ್ ಗ್ರಾಂಟ್ 2020 ಪ್ರಶಸ್ತಿ ವಿಜೇತ 10 ಮಂದಿಯಲ್ಲಿ ಒಬ್ಬಳಾಗಿರುವ ತಾನು ಪುಸ್ತಕ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕಾಗಿ ಪ್ಯಾರಿಸ್‍ಗೆ ತೆರಳುತ್ತಿರುವುದಾಗಿ ಮಟ್ಟೂ ಟ್ವೀಟ್ ಮಾಡಿದ್ದರು.

ಆದರೆ ಆಕೆಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಡೆದ ಇಮಿಗ್ರೇಶನ್ ಅಧಿಕಾರಿಗಳು  ಆಕೆಯನ್ನು ತಡೆಯುತ್ತಿರುವ ಕ್ರಮದ ಹಿಂದಿನ ಕಾರಣ ವಿವರಿಸಿಲ್ಲ, ಬದಲು ಆಕೆ ವಿದೇಶ ಪ್ರಯಾಣ ಕೈಗೊಳ್ಳುವ ಹಾಗಿಲ್ಲ ಎಂದಷ್ಟೇ ಹೇಳಿದ್ದಾರೆ.

ಸೆಂಟ್ರಲ್ ಯುನಿವರ್ಸಿಟಿ ಆಫ್ ಕಾಶ್ಮೀರದಿಂದ ಕನ್ವರ್ಜೆಂಟ್ ಜರ್ನಲಿಸಂ ನಲ್ಲಿ ಸ್ನಾತ್ತಕೋತ್ತರ ಪದವೀಧರೆಯಾಗಿರುವ ಸನಾ ಅವರು 2021ರಲ್ಲಿ ಪ್ರತಿಷ್ಠಿತ ಮ್ಯಾಗ್ನಮ್ ಫೌಂಡೇಶನ್ ಫೆಲೋಶಿಪ್ ಪಡೆದಿದ್ದರು.

ಸೆಪ್ಟೆಂಬರ್ 2019ರಲ್ಲಿ  ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರದ ಬೆಳವಣಿಗೆಯಲ್ಲಿ ಕಾಶ್ಮೀರಿ ಪತ್ರಕರ್ತ, ಲೇಖಕ ಗೌಹರ್ ಗೀಲಾನಿ ಅವರನ್ನು ಬಾನ್‍ಗೆ ತೆರಳಲು ಅವಕಾಶ ನಿರಾಕರಿಸಿ ಅವರನ್ನು ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News