'ಸಿದ್ದರಾಮೋತ್ಸವ' ಶಕ್ತಿ ಪ್ರದರ್ಶನದ ವೇದಿಕೆಯಲ್ಲ: ಸಿದ್ದರಾಮಯ್ಯ

Update: 2022-07-02 11:57 GMT

ಬೆಂಗಳೂರು, ಜು. 2: ‘ನನಗೆ ಎಪ್ಪತ್ತೈದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರು, ಹಿತೈಷಿಗಳು ಜನದಿನವನ್ನು ಆಚರಣೆ ಮಾಡಲು ತೀರ್ಮಾನ ಮಾಡಿದ್ದಾರೆ. ‘ಸಿದ್ದರಾಮೋತ್ಸವ'ವೂ ಅಲ್ಲ, ಯಾವ ಉತ್ಸವವೂ ಅಲ್ಲ, ಶಕ್ತಿ ಪ್ರದರ್ಶನದ ವೇದಿಕೆಯೂ ಅಲ್ಲ. ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನ ಅಭಿಮಾನಿಗಳು ಹಾಗೂ ಬೆಂಬಲಿಗರು ಜನ್ಮದಿನಾಚರಣೆ ಮಾಡಿದರೆ ಬಿಜೆಪಿಯವರು ಅನಗತ್ಯ ಟೀಕೆ, ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆರೆಸೆಸ್ಸ್ ನವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ನನ್ನ ಹಿತೈಷಿಗಳು ಸೇರಿ ಜನ್ಮದಿನ ಆಚರಣೆ ಮಾಡುತ್ತಿದ್ದಾರೆ. ನಾನು ಮೊದಲಿಂದಲೂ ಜನ್ಮದಿನ ಆಚರಣೆ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

2022ರ ಆಗಸ್ಟ್ 3ಕ್ಕೆ ನನಗೆ ಎಪ್ಪತ್ತೈದು ವರ್ಷಗಳಾಗುತ್ತಿದ್ದು, ಅಮೃತ ಮಹೋತ್ಸವದ ನೆನಪಿಗೆ ಆಗಸ್ಟ್ 3ಕ್ಕೆ ದಾವಣಗೆರೆಯಲ್ಲಿ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮಂದಿ ಪಾಲ್ಗೊಳ್ಳಲಿದ್ದಾರೆಂದು ವಿವರಣೆ ನೀಡಿದರು.

‘ನನ್ನ ಜನ್ಮದಿನಕ್ಕೆ ಆಕ್ಷೇಪಿಸಿರುವ ಬಿಜೆಪಿ ಮುಖಂಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ 77ನೆ ವರ್ಷದ ಹುಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಅದಕ್ಕೆ ಬಿಜೆಪಿ ಏನು ಮಾತೇ ಆಡಲಿಲ್ಲ. ಬಿಎಸ್‍ವೈ ಜನ್ಮದಿನದ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಈಗ ನನ್ನದು 75ನೆ ಹುಟುಹಬ್ಬ, ಇದೊಂದು ಮಹತ್ವದ ದಿನ ಎಂದು ಆತ್ಮೀಯರು, ಹಿತೈಷಿಗಳು ತೀರ್ಮಾನ ಮಾಡಿದ್ದಾರೆ, ಅದಕ್ಕೆ ನಾನು ಪಾಲ್ಗೊಳ್ಳುತ್ತಿದ್ದೇನೆ' ಎಂದು ಹೇಳಿದರು.

‘ನಿನ್ನೆ ಪತ್ರಿಕೆಗಳಲ್ಲಿ ಕಂದಾಯ ಸಚಿವ ಆರ್.ಅಶೋಕ್ ಜಾಹಿರಾತು ಬಂದಿತ್ತು, ಅದಕ್ಕವರು ಏನಂತ ಕರೆದಿದ್ದಾರೆ? ಅವರು ಜನ್ಮದಿನ ಆಚರಣೆ ಮಾಡಿಕೊಳ್ಳಲ್ವ? ಬಿಜೆಪಿಯವರು ದುರುದ್ದೇಷ ಮತ್ತು ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ, ಇದಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News