ಸುಳ್ಳಿನ ಸಂಭ್ರಮ, ಕೊಟ್ಟ ಭರವಸೆ ಈಡೇರಿಸದೆ ದ್ರೋಹ: ಸಿದ್ದರಾಮಯ್ಯ ವಾಗ್ದಾಳಿ

Update: 2022-07-02 13:39 GMT

ಬೆಂಗಳೂರು, ಜು. 2: ‘ಪ್ರಧಾನಿ ಮೋದಿ ಆಡಳಿತಕ್ಕೆ ಬಂದು ಎಂಟು ವರ್ಷಗಳಾಗಿದ್ದು, ‘ವರುಷ ಎಂಟು ಅವಾಂತರ ನೂರೆಂಟು' ಎಂಬಂತಾಗಿದೆ. ಎಂಟು ವರ್ಷಗಳ ಮೋದಿ ಸರಕಾರದ ‘ಸುಳ್ಳಿನ ಸಂಭ್ರಮ' ಆಗಿದೆ. ದೇಶದ ಜನರಿಗೆ ಅವರು ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸದೆ ದ್ರೋಹ ಮಾಡಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಪ್ರಧಾನಿ ಮೋದಿ ಆಡಳಿತ ಅವಧಿಯ ವೈಫಲ್ಯಗಳ ಕುರಿತು ‘ವರುಷ ಎಂಟು ಅವಾಂತರಗಳು ನೂರೆಂಟು' ಎಂಬ ಕಿರು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಹೈದರಾಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ನಡೆಯುತ್ತಿದ್ದು, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ ಇದಕ್ಕೆ ಉತ್ತರ ನೀಡಬೇಕು' ಎಂದು ಆಗ್ರಹಿಸಿದರು.

‘ಮೋದಿ ಸರಕಾರ ಎಂಟು ವರ್ಷ ಪೂರೈಸಿದೆ ಎಂದು ಬಿಜೆಪಿಯವರು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಅಲ್ಲದೆ, ದೇಶ ಅಭಿವೃದ್ಧಿ ಮಾಡಿದ್ದೇವೆ. ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದ್ದೇವೆ' ಎಂದು ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಆದರೆ, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಯನ್ನು ಈ ಸರಕಾರ ಈಡೇರಿಸಿಲ್ಲ. ಹೀಗಾಗಿ ಬಡವರು, ದಲಿತರು ಹಾಗೂ ರೈತರ ಬದುಕು ಮತ್ತಷ್ಟು ದುಸ್ತರವಾಗಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಗುಜರಾತ್ ಮಾದರಿ ಅಭಿವೃದ್ಧಿ ಮಾಡುತ್ತೇವೆ, ಕಪ್ಪುಹಣ ವಾಪಸ್ ತಂದು, ದೇಶದ ಎಲ್ಲರ ಖಾತೆಗೆ ತಲಾ 15ಲಕ್ಷ ರೂ.ಹಾಕುತ್ತೇವೆ, ಭ್ರಷ್ಟಾಚಾರ ತಡೆಗಟ್ಟುತ್ತೇವೆ, ಯುವಕರಿಗೆ ಉದ್ಯೋಗ ಕೊಡುತ್ತೇವೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ. ಬೆಲೆ ಏರಿಕೆ ನಿಯಂತ್ರಿಸುತ್ತೇವೆ' ಎಂದು ಭರವಸೆ ನೀಡಿದ್ದರು. ಆದರೆ, ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಭ್ರಷ್ಟಾಚಾರವೂ ನಿಂತಿಲ್ಲ. ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗವನ್ನು ಕಿತ್ತುಕೊಂಡಿದ್ದಾರೆ. ರೈತರ ಆದಾಯ ದ್ವಿಗುಣ ಆಗುವುದಿರಲಿ, ಅವರ ಸಾಲ ದುಪ್ಪಟ್ಟು ಆಗಿದೆ' ಎಂದು ಸಿದ್ದರಾಮಯ್ಯ ಅಂಕಿ-ಅಶಂಗಳನ್ನು ನೀಡಿದರು.

‘ಜನರ ಪ್ರತಿರೋಧವನ್ನು ಮರೆಮಾಚಲು ಬಿಜೆಪಿ ಸರಕಾರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು 2019ರಲ್ಲಿ ಪುನಃ ಅಧಿಕಾರಕ್ಕೆ ಬಂದರು. ಜನರ ಸಮಸ್ಯೆಗಳು, ಕಷ್ಟಗಳನ್ನು ಪರಿಹಾರ ಮಾಡಲೇ ಇಲ್ಲ. ಅಚ್ಚೇದಿನ್ ಆಯೇಗಾ ಎಂದು ಮೋದಿ ಭರವಸೆ ನೀಡಿ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೆ ಏರಿಸಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬಾರಿ ಇಳಿಕೆ ಮಾಡಲಾಗಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಇಳಿಕೆ ಮಾಡಲೇ ಇಲ್ಲ' ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಾಲದ ಸುನಾಮಿ: ‘ಮೋದಿ ಆಡಳಿತಾವಧಿಯಲ್ಲಿ ಸಾಲ ಸುನಾಮಿಯಂತೆ ಬೆಳೆದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇದ್ದ ಒಟ್ಟು ಸಾಲ ಮತ್ತು ಮೋದಿ ಎಂಟು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸಿದ್ದಾರೆ. ಇದು ಅವರ ಕೆಟ್ಟ ಆರ್ಥಿಕ ನೀತಿ ಹಾಗೂ ಕಾರ್ಪೋರೆಟ್ ಕಂಪೆನಿಗಳ ಪರ ಕೆಲಸ ಮಾಡಿದ್ದರಿಂದ ದೇಶ ಸಂಕಷ್ಟದ ಸುಲಿಗೆ ಸಿಲುಕಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದರು.

ಅನಾಹುತಗಳು: ‘ಮೋದಿ ಆಡಳಿತದಿಂದ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಬೆಲೆಯೇರಿಕೆ ಹಿಂದೆಂದು ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ 17ವರ್ಷಗಳಲ್ಲಿ ತೀವ್ರಗತಿಗೆ ಮುಟ್ಟಿದೆ. ನಿರುದ್ಯೋಗ ತಾರಕಕ್ಕೇರಿದೆ. ರಾಜ್ಯಗಳ ಆರ್ಥಿಕತೆ ಕುಸಿದುಹೋಗುತ್ತಿದೆ. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ ಇದರ ಜೊತೆಯಲ್ಲಿ ದೇಶದ ಪ್ರಜಾಪ್ರಭುತ್ವ ಭಯಭೀತವಾಗಿದೆ. ಜಿಎಸ್ಟಿ, ನೋಟು ರದ್ದು, ಕೊರೋನ ನಿರ್ವಹಣೆಯ ಎಡಬಿಡಂಗಿ ನಿಲುವುಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿದೆ' ಎಂದು ಅವರು ದೂರಿದರು.

‘ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ, ಕಾರ್ಖಾನೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ರೈತರು, ಕಾರ್ಮಿಕ, ಮಹಿಳೆ, ಯುವ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಅದರ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ, ಧಮನಿಸಲಾಗುತ್ತಿದೆ. ಜನರನ್ನು ಬಡತನಕ್ಕೆ ತಳ್ಳಲಾಗುತ್ತಿದೆ, ಅಂಬಾನಿ, ಅದಾನಿಗಳಂತಹ ಕಾರ್ಪೋರೇಟ್ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ. ಮೋದಿ ಸರಕಾರದಿಂದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸಲಾಗುತ್ತಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್, ಶಾಸಕ ಗಣೇಶ್ ಹುಕ್ಕೇರಿ, ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ, ಮಾಜಿ ಶಾಸಕ ಅಶೋಕ್ ಪಟ್ಟಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News