ಕಾಫಿನಾಡಿನಲ್ಲಿ ಚುರುಕುಗೊಂಡ ಮುಂಗಾರು ಮಳೆ

Update: 2022-07-02 13:30 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರುಮಳೆ ಚುರುಕುಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೇ ಬಯಲು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಿಲ್ಲೆಯ ಕಳಸ-ಹೊರನಾಡು ಪಟ್ಟಣ ಸಂಪರ್ಕದ ಹೆಬ್ಬಾಳ ಸೇತುವೆ ಭದ್ರಾ ನದಿಯಲ್ಲಿ ಮುಳುಗಡೆಯಾಗುವ ಹಂತಕ್ಕೆ ತುಲುಪಿದೆ.

ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಲ್ಲಿ ಸುರಿಯಬೇಕಿದ್ದ ಮುಂಗಾರು ಮಳೆ ಆರ್ಭಟ ಈ ಬಾರಿ ಸಾಧಾರಣವಾಗಿತ್ತು. ಆಗಾಗ್ಗೆ ಮಳೆ ಸುರಿದಿದ್ದರೂ ಈ ಮಳೆ ಭತ್ತದ ಗದ್ದೆ ಸೇರಿದಂತೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಜಿಲ್ಲಾದ್ಯಂತ ಭತ್ತದ ಗದ್ದೆಗಳಲ್ಲಿ ಕೃಷಿ ಚಟಿವಟಿಕೆ ನೆನೆಗುದಿಗೆ ಬೀಳುವಂತಾಗಿದ್ದ ಹಿನ್ನೆಲೆಯಲ್ಲಿ ಭತ್ತದ ಕೃಷಿಕರು ಆಕಾಶ ನೋಡುತ್ತ ಮಳೆಗಾಗಿ ಎದುರು ನೋಡುವಂತಾಗಿತ್ತು. ಜೂನ್ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆ ಸದ್ಯ ಜುಲೈ ತಿಂಗಳು ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಸುಗೊಂಡಿದೆ.

ಕಳೆದ ಗುರುವಾರ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದರೇ ಶುಕ್ರವಾರ ಹಗಲು ಹಾಗೂ ರಾತ್ರಿ ಮಳೆಯ ಆರ್ಭಟ ಮತ್ತಷ್ಟು ಜೋರಾದ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಶುಕ್ರವಾರ ರಾತ್ರಿ ಕಳಸ ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳಸ ಪಟ್ಟಣ ಹಾಗೂ ಹೊರನಾಡು ಯಾತ್ರಾ ಸ್ಥಳ ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. 4 ಅಡಿಗಳಷ್ಟು ನೀರು ಹೆಚ್ಚಳವಾದಲ್ಲಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳಲಿದೆ. 

ಮಲೆನಾಡು ಭಾಗದಲ್ಲಿ ಶನಿವಾರವೂ ಮಳೆ ಮುಂದುವರಿದಿದ್ದು, ಶನಿವಾರ ರಾತ್ರಿಯೂ ಮಳೆಯಾದಲ್ಲಿ ಹೆಬ್ಬಾಳೆ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಮಲೆನಾಡು ಭಾಗದಲ್ಲಿ ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳಲ್ಲಿ ಹಾಗೂ ಅಡಿಕೆ, ಕಾಫಿ ತೋಟಗಳಲ್ಲೂ ಕೃಷಿ ಚಟುವಟಿಕೆಗಳೂ ಗರಿಗೆದರಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಅನಾಹುತಗಳು ಸಂಭವಿಸಿರುವ ಬಗ್ಗೆ ಯಾವುದೇ ವರದಿಗಳು ದಾಖಲಾಗಿಲ್ಲ.

ಇನ್ನು ಜಿಲ್ಲೆಯ ಬಯಲು ಭಾಗದಲ್ಲೂ ಮಳೆ ಸುರಿಯುತ್ತಿದೆಯಾದರೂ ಎಲ್ಲೆಡೆ ಸಾಧಾರಣ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಆಗಾಗ್ಗೆ ಉತ್ತಮ ಮಳೆ ಸುರಿದಿದ್ದರೇ, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಆಗಾಗ್ಗೆ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಮಳೆ ಹಿನ್ನೆಲೆಯಲ್ಲಿ ಬಯಲು ಭಾಗದಲ್ಲೂ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News