ಮರವಂತೆಯಲ್ಲಿ ತೀವ್ರ ಕಡಲ್ಕೊರೆತ: ತೆಂಗಿನಮರಗಳು ಸಮುದ್ರಪಾಲು

Update: 2022-07-02 15:09 GMT

ಬೈಂದೂರು: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿವೆ. ಇದರಿಂದ ತೆಂಗಿನ ಮರಗಳು ಕಡಲ ಒಡಲು ಸೇರುವ ಭೀತಿಯಲ್ಲಿದ್ದು, ತೀರ ನಿವಾಸಿಗಳಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ.

ಮರವಂತೆಯ ಕರಾವಳಿ ಪ್ರದೇಶದಲ್ಲಿ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಬಡಿಯುತ್ತಿದೆ. ಕಡಲ್ಕೊರೆತದ ಪರಿಣಾಮ ಇಲ್ಲಿನ ಫಿಶರೀಸ್ ರಸ್ತೆಯಲ್ಲಿ ಈವರೆಗೆ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ತಡೆಗೋಡೆಯ ಬೃಹತ್ ಕಲ್ಲು ಬಂಡೆಗಳು ಕೂಡ ಜಾರುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿವೆ. ಇದರಿಂದ ಇಲ್ಲಿನ ಜನರು ಆತಂಕದಿಂದ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ.

ಕಡಲಿನ ಅಬ್ಬರ ಇನ್ನು ಹೆಚ್ಚಗಾಲಿದ್ದು, ಇನ್ನಷ್ಟು ತೆಂಗಿನ ಮರಗಳು ಕೂಡ ಸಮುದ್ರ ಪಾಲಾಗುವ ಭೀತಿಯಲ್ಲಿವೆ. ಮೀನುಗಾರಿಕೆಯ ಬಲೆ, ಇನ್ನಿತರ ಪರಿಕರಗಳನ್ನು ಇಟ್ಟಿರುವ ಮೀನುಗಾರರ ಶೆಡ್‌ಗಳು ಕೂಡ ಅಪಾಯದ ಸ್ಥಿತಿ ಯಲ್ಲಿವೆ. ಮೀನುಗಾರಿಕಾ ರಸ್ತೆಯ ಆಚೆ ಅನೇಕ ಮನೆಗಳಿದ್ದು, ಇಲ್ಲಿಗೆ ಸಮೀಪದ ರಸ್ತೆಯೂ ಕೊಚ್ಚಿಹೋಗುವ ಆತಂಕದಲ್ಲಿದೆ ಎಂದು ಸ್ಥಳೀಯರಾದ ವಾಸುದೇವ ಖಾರ್ವಿ ತಿಳಿಸಿದ್ದಾರೆ.

ಸಮುದ್ರದ ದೈತ್ಯ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿವೆ. ಈ ಭಾಗದ ವಿದ್ಯಾರ್ಥಿ ಗಳು ಶಾಲಾ-ಕಾಲೇಜಿಗೆ ಅಪಾಯದ ನಡುವೆ ತೆರಳುವ ಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಈವರೆಗೆ ಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿ ಗಳ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

"ಮೀನುಗಾರಿಕಾ ರಸ್ತೆಯಲ್ಲಿ ಒಂದೂವರೆ ಸಾವಿರ ಕುಟುಂಬಗಳು ವಾಸವಾಗಿವೆ. ಈಗಾಗಲೇ ಸಮುದ್ರ ತಟದ ತೆಂಗಿನ ಮರಗಳು ಕಡಲು ಪಾಲಾಗಿವೆ. ಮನೆಗಳು ಕೊಚ್ಚಿಹೋಗುವ ಭೀತಿ ಇವೆ. ಯಾರೊಬ್ಬ ಜನಪ್ರತಿನಿಧಿ, ಅಧಿಕಾರಿಗಳು ನಮ್ಮ ಕಷ್ಟ ನೋಡಲು ಬಂದಿಲ್ಲ. ಯಾವುದೇ ಇಲಾಖೆ ಬಳಿ ಕೇಳಿದರೂ ಇದಕ್ಕೆ ಅನುದಾನ ಇಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಕಡಲ್ಕೊರೆತ ಸಮಸ್ಯೆಯಿಂದಾಗಿ ಹಲವು ವರ್ಷಗಳಿಂದ ಯಾತನೆ ಅನುಭವಿಸುತ್ತಿದ್ದೇವೆ. ಪ್ರತಿವರ್ಷ ಈ ಸಮಯದಲ್ಲಿ ಬಂದು ಸರ್ವೇ ಮಾಡಿ ಹೋಗುತ್ತಾರೆ. ಮತ್ತೆ ಈ ಕಡೆ ತಲೆ ಹಾಕುವುದಿಲ್ಲ. ಸಮಸ್ಯೆ ಪರಿಹಾರಕ್ಕಾಗಿ ವೈಜ್ಞಾನಿಕ ಮಾದರಿಯ ಕಾಮಗಾರಿ ನಡೆಸಬೇಕಾಗಿದೆ".

- ವಾಸುದೇವ ಖಾರ್ವಿ, ಮರವಂತೆ ಮೀನುಗಾರಿಕ ರಸ್ತೆ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News