ನಿರಾಕ್ಷೇಪಣಾ ಪತ್ರವಿಲ್ಲವೆಂದು ವಿದ್ಯುತ್ ಸಂಪರ್ಕ ನಿರಾಕರಿಸುವಂತಿಲ್ಲ: ಸಚಿವ ಸುನೀಲ್‍ ಕುಮಾರ್

Update: 2022-07-02 15:27 GMT

ಬೆಂಗಳೂರು, ಜು.2: ಕಟ್ಟಡಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ(ಓಸಿ) ಇಲ್ಲ ಎಂಬ ಕಾರಣಕ್ಕೆ ಇನ್ನು ಮುಂದೆ ವಿದ್ಯುತ್ ಸಂಪರ್ಕ ನಿರಾಕರಣೆ ಇನ್ನು ಸಾಧ್ಯವಿಲ್ಲ. ಕಾಂಗ್ರೆಸ್ ಕಾಲದ ಈ ‘ಕತ್ತಲೆಭಾಗ್ಯದ’ ನಿಯಮವನ್ನು ಕೊನೆಗೂ ನಿವಾರಿಸಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ನಿಯಮ ಬದಲಾಯಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‍ಸಿ) ಹೊರಡಿಸಿದ್ದ ಆದೇಶ ಇಂದಿನಿಂದಲೇ ರಾಜ್ಯಪತ್ರದ ಮೂಲಕ ಜಾರಿಗೆ ಬರುತ್ತಿದೆ. ಸರ್ವರಿಗೂ ಬೆಳಕು ಎಂಬ ನಮ್ಮ ಧ್ಯೇಯವಾಕ್ಯಕ್ಕೆ ಇನ್ನು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಯಾವ ಕಾರಣಕ್ಕಾಗಿ ಈ ನಿಯಮ ಜಾರಿಗೆ ತರಲಾಗಿತ್ತು ಎಂಬುದು ಅರ್ಥವಾಗದ ಸಂಗತಿ. ವಿದ್ಯುಚ್ಛಕ್ತಿ ಅಧಿನಿಯಮದ ಮೂಲ ಆಶಯಕ್ಕೆ ಇದು ವಿರುದ್ಧವಾಗಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಂಡ ಜನಪರ ನಿಲುವು ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯುತ್ ಸಂಪರ್ಕಕ್ಕೆ ಓಸಿ ಕಡ್ಡಾಯಗೊಳಿಸಿದ್ದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಲಕ್ಷ ಕುಟುಂಬಗಳು ಕತ್ತಲೆ ಅನುಭವಿಸುವಂತಾಗಿತ್ತು. ವಾಣಿಜ್ಯ ಚಟುವಟಿಕೆಗಳಿಗೆ ಹಿನ್ನಡೆ ಯಾಗಿತ್ತು. ಆದರೆ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗೂ ಗೃಹಬಳಕೆ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ನಿರಾಕ್ಷೇಪಣಾ ಪತ್ರ(ಓಸಿ) ಕಡ್ಡಾಯಗೊಳಿಸಿ ಜನಹಿಂಸೆಗೆ ಕಾರಣವಾಗಿದ್ದ ಕಾಂಗ್ರೆಸ್ ಕಾಲದ ನಿಯಮವನ್ನು ಬದಲಾಯಿಸಿದ್ದೇವೆ. ನಿಯಮ ಬದಲಾವಣೆಗೆ ಮುತುವರ್ಜಿ ವಹಿಸಿದ ಮುಖ್ಯಮಂತ್ರಿಗೆ ಬೆಂಗಳೂರು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News