ಮಗಳ ಮನೆಗೆ ದನಗಳನ್ನು ಸಾಗಿಸುತ್ತಿದ್ದ ರೈತ ಮಹಿಳೆಗೆ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಅಡ್ಡಿ: ಆರೋಪ

Update: 2022-07-04 12:05 GMT

ಕಲಬುರಗಿ, ಜು.4: ಪತಿ ನಿಧನದ ಬಳಿಕ ಸಂಕಷ್ಟಕ್ಕೊಳಗಾದ ರೈತ ಮಹಿಳೆಯೊಬ್ಬರು ತನ್ನ 33 ದನಗಳನ್ನು ಮಗಳ ಮನೆಗೆ ಸಾಗಿಸುತ್ತಿದ್ದ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಅಡ್ಡಿಪಡಿಸಿದ್ದಲ್ಲದೆ, ಪೊಲೀಸರಿಗೊಪ್ಪಿಸಿದ ಘಟನೆ ಪಟ್ಟಣದಲ್ಲಿ ರವಿವಾರ ನಡೆದಿದೆ.

ಕೋಲಿ ಸಮಾಜಕ್ಕೆ ಸೇರಿದ ಕಾಂತಮ್ಮ ದುರ್ಗಪ್ಪ ಹತ್ತಿಕುಣಿ ಎಂಬ ರೈತ ಮಹಿಳೆ ಶ್ರೀರಾಮ ಸೇನೆಯಿಂದ ಸಂಕಷ್ಟಕ್ಕೊಳಗಾದವರು ಎಂದು ತಿಳಿದು ಬಂದಿದೆ.

ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ಗಡಿ ಗ್ರಾಮ ಯರಗೋಳ ನಿವಾಸಿಯಾದ ಕಾಂತಮ್ಮರ ಪತಿ ಇತ್ತೀಚೆಗೆ ನಿಧನರಾಗಿದ್ದು, ಆ ಬಳಿಕ ಕಂಗೆಟ್ಟ ಇವರು ಶಹಾಬಾದ್ ನಗರದಲ್ಲಿರುವ ಮಗಳು ಸಾವಿತ್ರಿಬಾಯಿ ಮನೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದರು. ಅದರಂತೆ ತಾನು ಸಾಕುತ್ತಿದ್ದ 33 ದನಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ-150 ಮಾರ್ಗವಾಗಿ ಶಹಾಬಾದ್ ನಗರಕ್ಕೆ ಹೊರಟಿದ್ದರು. ದಾರಿಮಧ್ಯೆ ವಾಡಿ ಪಟ್ಟಣದ ಹೊರ ವಲಯದ ಬಳಿ ರಾಮ ಚೌಕ್ ಬಳಿ ತಲುಪಿದಾಗ ಶ್ರೀರಾಮ ಸೇನೆಯ ಅಧ್ಯಕ್ಷ ವಿನೋದ್, ಕಾರ್ಯದರ್ಶಿ ವಿಶ್ವ ತಳವಾರ, ಕಾರ್ಯಕರ್ತರಾದ ಕರಣ್ ರಾಠೋಡ್ ಎಂಬವರು ತಡೆದು . ಗೋವುಗಳನ್ನು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆ ಎಂದು ತರಾಟೆಗೈದಿದ್ದಾರೆ ಎಂದು ದೂರಲಾಗಿದೆ. ಈ ವೇಳೆ  ಕಾಂತಮ್ಮ ವಾಸ್ತವ ವಿಚಾರವನ್ನು ತಿಳಿಸಿದರೂ ಮುಂದಕ್ಕೊಗಲು ಅವಕಾಶ ನೀಡದ ಶ್ರೀರಾಮ ಸೇನೆ ಕಾರ್ಯಕರ್ತರು, ಬಳಿಕ ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಸ್ಥಳಾಂತರಿಸುತ್ತಿದ್ದಾರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು, 17 ಹಸು, 8 ಕರು, 4 ಹೊರಿ, 4 ಮಣಕಾ ಸೇರಿದಂತೆ ಒಟ್ಟು 33 ಗೋವುಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. "ಆಕಳನ್ನು ಕಟುಕರಿಗೆ ಮಾರಲು ತಂದಿಲ್ರೀ, ನನ್ನ ಮಗಳ ಊರಿಗೆ ಬಿಡಲು ತಂದಿದ್ದೇನೆ.  ನನಗೆ ಬಿಟ್ಟುಬಿಡ್ರೀ" ಎಂದು ಮಹಿಳೆ ಕಾಂತಮ್ಮ ಪೊಲೀಸರ ಎದುರು ಕಣ್ಣೀರಿಟ್ಟು ಪರಿಪರಿಯಾಗಿ ಮನವಿ ಮಾಡಿದರು. ಆದರೆ ಸಾಗಣೆ ಪರವಾನಿಗೆ ಇಲ್ಲದ ಸಾಗಾಟ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಾನುವಾರುಗಳನ್ನು ವಶಕ್ಕೆ ಪಡೆದು ಕೊಂಚೂರು ಪುಣ್ಯಕೋಟಿ ಗೋಶಾಲೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News