ಚಿಕ್ಕಮಗಳೂರು: ಕಾಲು ಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಶಾಲಾ ಬಾಲಕಿ

Update: 2022-07-04 15:32 GMT

ಚಿಕ್ಕಮಗಳೂರು, ಜು.4: ಕಾಫಿತೋಟದಲ್ಲಿ ಹಳ್ಳದಾಟುವಾಗ ಕಾಲುಜಾರಿ ಹಳ್ಳಕ್ಕೆ ಬಿದ್ದ ಪರಿಣಾಮ 7ವರ್ಷದ ಶಾಲಾ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಸೋಮವಾರ ಸಂಜೆ ವರದಿಯಾಗಿದೆ.

ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 7ವರ್ಷದ ಬಾಲಕಿ ಸುಪ್ರೀತಾ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಹಳ್ಳಕ್ಕೆ ನಿರ್ಮಿಸಲಾಗಿದ್ದ ಕಿರುಸೇತುವೆ ದಾಟುತ್ತಿದ್ದಾಗ ಕೈಯಲ್ಲಿದ್ದ ಛತ್ರಿ ಹಳ್ಳದ ಪಕ್ಕಕ್ಕೆ ಬಿದ್ದಿದೆ. ಈ ಛತ್ರಿಯನ್ನು ತೆಗೆಯಲು ಹಳ್ಳದ ಬಳಿ ತೆರಳಿದ್ದ ಬಾಲಕ ಕಾಲುಜಾರಿ ಹಳ್ಳಕ್ಕೆ ಬಿದ್ದಿದ್ದಾಳೆಂದು ತಿಳಿದು ಬಂದಿದೆ. ಹಳ್ಳಕ್ಕೆ ಬಿದ್ದ ಬಾಲಕಿ ಹಳ್ಳದಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಸ್ಥಳೀಯರು ಭೇಟಿನೀಡಿ ಹಳ್ಳದ ಬಳಿ ಬಾಲಕಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಾಲಕಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಘಟನೆ ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಶಾಲಾ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News