ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಆರಂಭ: ಹಿಂದುತ್ವ ಗುಂಪಿನಿಂದ ಗಮನ ತಿರುಗಿಸುತ್ತಿರುವ ಪ್ರತಿವಾದಿ ವಕೀಲರು

Update: 2022-07-05 14:24 GMT

ಬೆಂಗಳೂರು,ಜು.5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸರಿಸುಮಾರು ಐದು ವರ್ಷಗಳ ಬಳಿಕ ಸೋಮವಾರ ಬೆಂಗಳೂರಿನ ಕೆಳ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ಆರಂಭಗೊಂಡಿದೆ.

 ಮೊದಲ ದಿನವೇ ಗೌರಿಯವರ ಕಿರಿಯ ಸೋದರಿ ಕವಿತಾ ಲಂಕೇಶರನ್ನು ತೀವ್ರ ಪಾಟೀಸವಾಲಿಗೊಳಪಡಿಸಿರುವ ಆರೋಪಿಗಳ ಪರ ವಕೀಲರು ಕೊಲೆಯ ಹಿಂದಿವೆ ಎನ್ನಲಾಗಿರುವ ಹಿಂದುತ್ವ ಗುಂಪುಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮುಂದಾಗಿದ್ದು, ಗೌರಿ ನಕ್ಸಲರೊಂದಿಗೆ ಸಂಬಂಧ ಹೊಂದಿದ್ದರು ಎಂದು ಬೆಟ್ಟು ಮಾಡಿದ್ದರು.

ವಿಶೇಷ ತನಿಖಾ ತಂಡ (ಸಿಟ್)ವು ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಂತೆ ‘ಹಿಂದು ವಿರೋಧಿ’ಎಂದು ತಾನು ಪರಿಗಣಿಸುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುವ ರಹಸ್ಯ ಸಂಘಟನೆಯೊಂದಕ್ಕೆ ಸೇರಿದ 18 ಜನರು ಗೌರಿ ಕೊಲೆ ಒಳಸಂಚಿನಲ್ಲಿ ಭಾಗಿಯಾಗಿದ್ದರು. ಈ ಪೈಕಿ ವಿಕಾಸ ಪಾಟೀಲ ಅಲಿಯಾಸ್ ದಾದಾ ಅಲಿಯಾಸ್ ನಿಹಾಲ್ ಎಂಬಾತ ಈಗಲೂ ತಲೆಮರೆಸಿಕೊಂಡಿದ್ದಾನೆ.

ಸನಾತನ ಸಂಸ್ಥಾದೊಂದಿಗೆ ಸಂಯೋಜಿತ ಹಿಂದು ಜನಜಾಗ್ರತಿ ಸಮಿತಿಯ ಮಾಜಿ ನಾಯಕ ಅಮೋಲ್ ಕಾಳೆ ಅಲಿಯಾಸ್ ಟೋಪಿವಾಲಾ ಅಲಿಯಾಸ್ ಭಾಯಿ ಸಾಹೇಬ್ ಗೌರಿ ಹತ್ಯೆ ಸಂಚನ್ನು ರೂಪಿಸಿದ್ದ ಎನ್ನುವುದನ್ನು ಸಿಟ್ ತನಿಖೆಯು ಬಹಿರಂಗಗೊಳಿಸಿದೆ. ಆತ ಹಂತಕರಿಗೆ ತರಬೇತಿ ವ್ಯವಸ್ಥೆಯನ್ನು ಮಾಡಿದ್ದ ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದ ಎನ್ನಲಾಗಿದೆ. ಪ್ರಕರಣವನ್ನು ಭೇದಿಸಿದ್ದಕ್ಕಾಗಿ ರಾಜ್ಯ ಸರಕಾರವು ಸಿಟ್ಗೆ ನಗದು ಪುರಸ್ಕಾರವನ್ನು ನೀಡಿದೆ,ಜೊತೆಗೆ ಕೇಂದ್ರ ಗೃಹಸಚಿವರ ಉತ್ಕೃಷ್ಟತಾ ಪದಕಕ್ಕೂ ಅದು ಭಾಜನವಾಗಿದೆ.

ವಿಚಾರಣೆ ಸಂದರ್ಭ ಹಿಂದುತ್ವ ಗುಂಪುಗಳನ್ನು ಪ್ರಕರಣದಿಂದ ದೂರವಿರಿಸಲು ಬಯಸಿದ ಆರೋಪಿ ಪರ ವಕೀಲ ಪಿ.ಕೃಷ್ಣಮೂರ್ತಿಯವರು ಗೌರಿಯವರ ಜೊತೆ ಸ್ನೇಹವನ್ನು ಹೊಂದಿದ್ದ ಕರ್ನಾಟಕದ ಕೆಲವು ಪ್ರತಿಷ್ಠಿತ ಬುದ್ಧಿಜೀವಿಗಳನ್ನು ಪಟ್ಟಿ ಮಾಡಿ,ಅವರು ನಕ್ಸಲರ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.

 ಸ್ವಾತಂತ್ರ ಹೋರಾಟಗಾರ ದಿ.ಎಚ್.ಎಸ್.ದೊರೆಸ್ವಾಮಿ,ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿ.ಗಿರೀಶ್ ಕಾರ್ನಾಡ್, ಸಾಮಾಜಿಕ ಟೀಕಾಕಾರ ಚಂದನ್ ಗೌಡ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಈ ಪಟ್ಟಿಯಲ್ಲಿದ್ದರು.

 ಪ್ರಾಸಿಕ್ಯೂಷನ್ ಆಕ್ಷೇಪಗಳ ನಡುವೆಯೇ ಇದೇ ಧಾಟಿಯಲ್ಲಿ ಮುಂದುವರಿದ ಪ್ರತಿವಾದಿ ಪರ ವಕೀಲರು,ಗೌರಿ ಕೆಲವು ಉಗ್ರರನ್ನು ಶರಣಾಗತರಾಗಿಸುವ ಮೂಲಕ ನಕ್ಸಲರ ಕ್ರೋಧಕ್ಕೆ ಗುರಿಯಾಗಿದ್ದರೇ ಎಂದು ಕವಿತಾರನ್ನು ಪ್ರಶ್ನಿಸಿದರು.
 ಗೌರಿ ತನ್ನ ‘ಸೈದ್ಧಾಂತಿಕ ಪುತ್ರರು’ ಎಂದು ಆಗಾಗ್ಗೆ ಬಣ್ಣಿಸಿದ್ದ ಮೇವಾನಿ ಮತ್ತು ಮಾಜಿ ಜೆಎನ್ಯು ವಿದ್ಯಾರ್ಥಿ ಕನೈಯಾ ಕುಮಾರ್ ಜೊತೆ ಅವರು ಹೊಂದಿದ್ದ ಸಂಬಂಧದ ಸ್ವರೂಪವನ್ನು ವಿವರಿಸುವಂತೆಯೂ ವಕೀಲರು ಕವಿತಾರನ್ನು ಕೇಳಿಕೊಂಡಿದ್ದರು. ಇವರಿಬ್ಬರು ಅದೇ ತುಕ್ಡೆ ತುಕ್ಡೆ ಗ್ಯಾಂಗಿಗೆ ಸೇರಿದ ವ್ಯಕ್ತಿಗಳೇ ಎಂದೂ ಅವರು ಪ್ರಶ್ನಿಸಿದ್ದರು. ಪಾಟೀ ಸವಾಲಿನ ಈ ಧಾಟಿಯನ್ನು ತಳ್ಳಿಹಾಕಿದ ನ್ಯಾಯಾಧೀಶರು,ಅದು ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದರು.
ಗೌರಿಯವರು ಹಲವಾರು ಕಾಂಗ್ರೆಸ್ ನಾಯಕರಿಗೆ ಹತ್ತಿರವಾಗಿದ್ದರು ಎಂಬ ಆರೋಪಿ ಋಷಿಕೇಶ ದೇವಡಿಕರ ಪರ ವಕೀಲ ಗಂಗಾಧರ ಶೆಟ್ಟಿಯವರ ಮಾತಿಗೆ ಕಡಿವಾಣ ಹಾಕಿದ ನ್ಯಾ.ಸಿ.ಎಂ.ಜೋಶಿ ಅವರ,ನಿರ್ದಿಷ್ಟ ಹೆಸರುಗಳನ್ನು ಹೇಳಿ. ಹೆಸರುಗಳಿಲ್ಲದಿದ್ದರೆ ನಿಮ್ಮ ಮಾತಿಗೆ ತೂಕವಿರುವುದಿಲ್ಲ ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಕಾಂಗ್ರೆಸ್ ನಾಯಕರಾದ ರಮೇಶ ಜಾರಕಿಹೊಳಿ (ಈಗ ಬಿಜೆಪಿ),ಉಮಾಶ್ರೀ,ವಿನಯ ಕುಲಕರ್ಣಿ,ಎಸ್.ಎಸ್.ಮಲ್ಲಿಕಾರ್ಜುನ, ಪ್ರಮೋದ್ ಮಧ್ವರಾಜ್ (ಈಗ ಬಿಜೆಪಿ) ಮತ್ತು ತನ್ವೀರ್ ಸೇಠ್ ಅವರ ಹೆಸರುಗಳನ್ನು ಹೇಳಿದರು.

ಲಂಕೇಶ್ ಕುಟುಂಬದೊಳಗೆ, ವಿಶೇಷವಾಗಿ ಗೌರಿ ಮತ್ತು ಪ್ರತಿಸ್ಪರ್ಧಿ ಪತ್ರಿಕೆ ನಡೆಸುತ್ತಿದ್ದ ಸೋದರ ಇಂದ್ರಜಿತ್ ಲಂಕೇಶ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆಯೂ ಪ್ರತಿವಾದಿ ವಕೀಲರು ಕವಿತಾರನ್ನು ಪ್ರಶ್ನಿಸಿದರು. ಬೆಂಗಳೂರಿನ ಬಸವನಗುಡಿಯಲ್ಲಿರುವ ಪತ್ರಿಕಾ ಕಚೇರಿ ಸೇರಿದಂತೆ ಕುಟುಂಬಕ್ಕೆ ಸೇರಿದ ಆಸ್ತಿಗಳ ಬಗ್ಗೆಯೂ ವಕೀಲರು ಕವಿತರನ್ನು ಪ್ರಶ್ನಿಸಿದರು.

ಇದಕ್ಕೂ ಮುನ್ನ ನ್ಯಾಯಾಲಯವು ಕೆ.ಟಿ.ನವೀನ್ ಕುಮಾರ್‌ ನಿಕಟವರ್ತಿ, ಕೋರ್ಟ್ ಸಾಕ್ಷಿ ನಂ.4 ಅನಿಲ ಕುಮಾರ್ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಮೂಲಕ ಕಲಾಪಗಳನ್ನು ಆರಂಭಿಸಿತ್ತು. ಫೆಬ್ರವರಿ 2018ರಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದಲ್ಲಿ ನವೀನ್ ಕುಮಾರ್ ಬಂಧನವು ಇಡೀ ಸಂಚನ್ನು ಬಹಿರಂಗಗೊಳಿಸಿತ್ತು.

Writer - ಪ್ರಜ್ವಲ್ ಭಟ್

contributor

Editor - ಪ್ರಜ್ವಲ್ ಭಟ್

contributor

Similar News