​ಕೇಂದ್ರದ ಜೊತೆ ಕಚ್ಚಾಟದ ನಡುವೆ ಹೈಕೋರ್ಟ್ ಮೆಟ್ಟಿಲೇರಿದ ಟ್ವಿಟರ್

Update: 2022-07-05 18:42 GMT

ಬೆಂಗಳೂರು,ಜು.5: ವಿಷಯಗಳನ್ನು ತೆಗೆದುಹಾಕುವಂತೆ ಸರಕಾರದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಮಂಗಳವಾರ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಕೆಲವು ಆದೇಶಗಳು ನಿರಂಕುಶ ಮತ್ತು ಅಸಮವಾಗಿವೆ ಎಂದು ತನ್ನ ಅರ್ಜಿಯಲ್ಲಿ ಹೇಳಿರುವ ಟ್ವಿಟರ್,ತಡೆಯಬೇಕು ಎಂದು ಸರಕಾರವು ಬಯಸಿರುವ ವಿಷಯಗಳ ನ್ಯಾಯಾಂಗ ಪರಾಮರ್ಶೆಯನ್ನು ಕೋರಿದೆ.

ರಾಜಕೀಯ ಪಕ್ಷಗಳ ಹ್ಯಾಂಡಲ್ ಗಳಿಂದ ಕೆಲವು ವಿಷಯಗಳ ನಿರ್ಬಂಧವನ್ನು ಸರಕಾರವು ಬಯಸಿದ್ದು,ಇದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಗೆ ಸಮನಾಗಿದೆ ಎಂದು ಟ್ವಿಟರ್ ವಾದಿಸಿದೆ.

ಇತರ ಪ್ರಕರಣಗಳಲ್ಲಿ ಕಂಟೆಂಟ್ ಜನರೇಟರ್ ಗೆ ಸೂಚನೆಯನ್ನು ನೀಡಲಾಗಿಲ್ಲ ಎಂದು ಭಾರತದಲ್ಲಿ 2.4 ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟರ್ ಹೇಳಿದೆ.

ನ್ಯಾಯಾಂಗ ಪರಾಮರ್ಶೆಗಾಗಿ ಟ್ವಿಟರ್ ಪ್ರಯತ್ನವು ಕೇಂದ್ರದೊಂದಿಗೆ ಹೆಚ್ಚುತ್ತಿರುವ ಅದರ ಕಚ್ಚಾಟದ ಭಾಗವಾಗಿರುವಂತೆ ಕಂಡು ಬಂದಿದೆ.

ನಿರ್ಬಂಧಿಸಬೇಕೆಂದು ಸರಕಾರವು ಬಯಸಿರುವ ಟ್ವೀಟ್ ಗಳು ರೈತರ ಪ್ರತಿಭಟನೆ,ಸರಕಾರದಿಂದ ಕೋವಿಡ್ ಸಾಂಕ್ರಾಮಿಕದ ನಿರ್ವಹಣೆಗೆ ಸಂಬಂಧಿಸಿವೆ. ಈ ಪೋಸ್ಟ್ಗಳು ತಪ್ಪು ಮಾಹಿತಿಯನ್ನು ಹರಡುತ್ತಿವೆ ಎನ್ನುವುದು ಸರಕಾರದ ಆರೋಪವಾಗಿದೆ ಎಂದು ಟ್ವಿಟರ್ ತಿಳಿಸಿದೆ. ನಿರ್ಬಂಧ ಪಟ್ಟಿಯಲ್ಲಿ ಸ್ವತಂತ್ರ ಸಿಖ್ ರಾಜ್ಯವನ್ನು ಬೆಂಬಲಿಸಲು ಸೃಷ್ಟಿಸಲಾದ ಖಾತೆಗಳೂ ಸೇರಿವೆ.

ಕೆಲವು ಆದೇಶಗಳನ್ನು ಪಾಲಿಸದಿದ್ದರೆ ಕ್ರಿಮಿನಲ್ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಳೆದ ತಿಂಗಳು ಟ್ವಿಟರ್ಗೆ ಎಚ್ಚರಿಕೆ ನೀಡಿತ್ತು.

ತಾನು ಮುಕ್ತತೆ ಮತ್ತು ಪಾರದರ್ಶಕತೆಯ ತತ್ತ್ವಗಳಿಗೆ ಬದ್ಧನಾಗಿರುವುದಾಗಿ ಟ್ವಿಟರ್ ತನ್ನ ಅರ್ಜಿಯಲ್ಲಿ ಹೇಳಿದೆ.

ರಾಜಕಾರಣಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಖಾತೆಗಳನ್ನು ನಿರ್ಬಂಧಿಸಿದ್ದಕ್ಕಾಗಿ ಟ್ವಿಟರ್ ಈಗಾಗಲೇ ಭಾರತದಲ್ಲಿ ಹಿನ್ನಡೆಯನ್ನು ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News