ಅಸಲಿ ದೇಶದ್ರೋಹಿಗಳು ಯಾರು?

Update: 2022-07-06 08:34 GMT

ಈಗಂತೂ ಈ ಅಸಲಿ ದೇಶದ್ರೋಹಿಗಳು ಸರಕಾರದ ಅಂಗಸಂಸ್ಥೆಗಳಲ್ಲಿ ಸೇರಿಕೊಂಡು ಒಂದು ಅಪಾಯಕಾರಿ Deep State ಆಗಿ ಬದಲಾಗಿದ್ದಾರೆ ಹಾಗೂ ಇಂತಹ ದೇಶದ್ರೋಹಿ ಕೃತ್ಯಗಳಿಗೆ ಸರಕಾರದ ರಕ್ಷಣೆ, ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಿದ್ದಾರೆ. ದವಿಂದರ್ ಸಿಂಗ್, ಪುಲ್ವಾಮ, ತಾಲಿಬ್ ಹುಸೈನ್, ರಿಯಾಝ್ ಅತ್ತಾರಿ ಪ್ರಕರಣಗಳು ಅದನ್ನೇ ಸಾಬೀತು ಪಡಿಸುತ್ತದೆ ಎಂದು ಯಾರಿಗಾದರೂ ಅನಿಸಿದರೆ ಅದು ಉತ್ಪ್ರೇಕ್ಷೆಯೇನಲ್ಲ.. ವ್ಯಕ್ತಿಗಿಂತ ದೇಶ ಮುಖ್ಯ ಎಂದು ಭಾವಿಸುವವರು ಈಗಲಾದರೂ ಅಸಲಿ ದೇಶದ್ರೋಹಿಗಳು ಯಾರು ಎಂದು ಅರಿಯಬೇಕಲ್ಲವೇ?

  


ಪ್ರವಾದಿ ಮುಹಮ್ಮದರನ್ನು ಹೀಯಾಳಿಸಿದ್ದ ಬಿಜೆಪಿಯ ನೂಪುರ್ ಶರ್ಮಾರನ್ನು ಬೆಂಬಲಿಸಿದ ಕಾರಣಕ್ಕೆ ಮುಹಮ್ಮದ್ ರಿಯಾಝ್ ಅತ್ತಾರಿ ಮತ್ತು ಗೌಸ್ ಮುಹಮ್ಮದ್ ಎಂಬ ಇಬ್ಬರು ಮತಾಂಧರು ರಾಜಸ್ಥಾನದ ಉದಯ್‌ಪುರದಲ್ಲಿ ಕನ್ಹಯಲಾಲ್ ಎಂಬ ದರ್ಜಿಯನ್ನು ಕೊಂದುಹಾಕಿದರು. ಕೂಡಲೇ ಅವರ ಬಂಧನವೂ ಆಯಿತು. ಆದರೆ ನೂಪುರ್ ಶರ್ಮಾರ ವಿದ್ಯಮಾನದಿಂದ ಆದ ಹಿನ್ನೆಡೆಯನ್ನು ಕನ್ಹಯಲಾಲ್ ಹತ್ಯೆಯನ್ನು ಬಳಸಿಕೊಂಡು ಸರಿದೂಗಿಸಬಹುದೆಂದು ಬಿಜೆಪಿ-ಆರೆಸ್ಸೆಸ್ ಕೂಟ ದೇಶಾದ್ಯಂತ ಮತ್ತೆ ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರಕ್ಕಿಳಿದಿತ್ತು. ಆದರೆ ಅದಾದ ಎರಡೇ ದಿನಗಳಲ್ಲಿ ಕನ್ಹಯ ಕೊಲೆಯ ಪ್ರಧಾನ ಪಾತ್ರಧಾರಿ ರಿಯಾಝ್ ಅತ್ತಾರಿ ಬಿಜೆಪಿಯ ಕಾರ್ಯಕರ್ತ ಹಾಗೂ ಆರೆಸ್ಸೆಸ್‌ನ ಮುಸ್ಲಿಮ್ ವಿಭಾಗವಾದ ಮುಸ್ಲಿಮ್ ರಾಷ್ಟ್ರೀಯ ಮಂಚ್ ನ ಸದಸ್ಯನಾಗಿದ್ದನೆಂಬುದು ಬಯಲಾಗತೊಡಗಿತು. ಅಷ್ಟು ಮಾತ್ರವಲ್ಲ, ಈ ಇಬ್ಬರು ಪಾತಕಿಗಳು ರಾಜಸ್ಥಾನದ ಬಿಜೆಪಿಯ ಮುಸ್ಲಿಮ್ ಮೋರ್ಚಾದ ನಾಯಕರು ಮತ್ತು ರಾಜಸ್ಥಾನದ ವಿಧಾನಸಭೆಯ ಬಿಜೆಪಿ ನಾಯಕರ ಗುಲಾಬ್ ಚಂದ್ ಕಟಾರಿಯಾ ಜೊತೆಗಿರುವ ಫೋಟೋಗಳು ಬಯಲಿಗೆ ಬರಲು ಆರಂಭಿಸಿದವು. ಇದಾದ ಎರಡೇ ದಿನಗಳಲ್ಲಿ ಕಾಶ್ಮೀರದ ಜಮ್ಮು ಪ್ರಾಂತದಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಉಗ್ರಗಾಮಿ ಸಂಘಟನೆಯದ ಲಷ್ಕರೆ-ತಯ್ಯಿಬಾದ ಮುಖ್ಯಸ್ಥನೆಂದು ತಾಲಿಬ್ ಹುಸೈನ್ ಎಂಬ ವ್ಯಕ್ತಿಯನ್ನು ಬಂಧಿಸಿದರು. ಅದರೆ ಈ ವ್ಯಕ್ತಿ ಬಿಜೆಪಿಯ ಜಮ್ಮು ವಿಭಾಗದ ಐಟಿ ಸೆಲ್‌ನ ಮುಖ್ಯಸ್ಥ ಎಂಬುದು ಮರುದಿನವೇ ಬಯಲಾಯಿತು ಹಾಗೂ ಆತ ಬಿಜೆಪಿಯ ಜಮ್ಮು-ಕಾಶ್ಮೀರ ಮುಖಸ್ಥ ರೈನಾ ಜೊತೆಗೆ ಹಾಗೂ ಗೃಹಮಂತ್ರಿ ಅಮಿತ್ ಶಾ ಜೊತೆಗಿರುವ ಫೋಟೊ ಕೂಡ ಬಯಲಿಗೆ ಬಂತು.

ಕಾಶ್ಮೀರದಲ್ಲಿರುವುದು ಕೇಂದ್ರದ ಆಡಳಿತವೇ ಅರ್ಥಾತ್ ಬಿಜೆಪಿ ಆಡಳಿತವೇ. ಹೀಗಾಗಿ ಈ ಬಂಧನದ ಹಿಂದೆ ಬೇರೆ ಪಕ್ಷಗಳ ಕೈವಾಡವನ್ನು ಆರೋಪಿಸಲಾಗದ ಹತಾಶೆಯಲ್ಲಿರುವ ಬಿಜೆಪಿ ಈ ಭಯೋತ್ಪಾದಕರು ತಮ್ಮ ಪಕ್ಷದೊಳಗೆ ನುಸುಳಿದ್ದಾರೆಂದು, ದೊಡ್ಡದೊಡ್ಡ ನಾಯಕರನ್ನು ಹತ್ಯೆ ಮಾಡುವ ಸಂಚನ್ನು ಮಾಡುತ್ತಿದ್ದಿರಬಹುದೆಂದು ಸಂದರ್ಭದ ದುರ್ಲಾಭ ಪಡೆದುಕೊಳ್ಳಲು ಯತ್ನಿಸುತ್ತಾ ಪ್ರಮುಖ ಪ್ರಶ್ನೆಗಳನ್ನು ಮರೆಮಾಚುತ್ತಿದ್ದಾರೆ. ಹೀಗಾಗಿ ಈ ದೇಶದ ನಿಜವಾದ ದೇಶಭಕ್ತರು ಇದೇ ರೀತಿಯಲ್ಲಿ ಇತರ ಪಕ್ಷಗಳು ಭಯೋತ್ಪಾದಕರ ಸಂಬಂಧ ಹೊಂದಿದ್ದರೆ ಬಿಜೆಪಿ-ಆರೆಸ್ಸೆಸ್‌ಏನು ಪ್ರಶ್ನೆಗಳನ್ನು ಕೇಳುತ್ತಿತ್ತೋ ಅದೇ ಪ್ರಶ್ನೆಗಳನ್ನು ಕೇಳಬೇಕಿದೆ. ಏಕೆಂದರೆ, ತಾಲಿಬ್ ಹುಸೇನ್ ಆಗಲೀ, ರಿಯಾಝ್ ಅತ್ತಾರಿಯಾಗಲೀ ಬಿಜೆಪಿಯ ಸಾಮಾನ್ಯ ಸದಸ್ಯರಲ್ಲ. ಹಲವು ವರ್ಷಗಳಿಂದ ಬಿಜೆಪಿ ಜೊತೆಗಿದ್ದು, ಅವರನ್ನು ಸಂಪೂರ್ಣವಾಗಿ ಪರಿಶೀಲಿಸಿದ ಮೇಲೆಯೇ ಅವರಿಗೆ ಬಿಜೆಪಿ ಪಕ್ಷದಲ್ಲಿ ಪ್ರಮುಖ ಸ್ಥಾನವನ್ನು ಕೊಟ್ಟಿದೆ. ನೂಪುರ್ ಶರ್ಮಾ ಹಾಗೂ ಜಿಂದಾಲ್‌ಗಳಿಗೆ ಕೊಟ್ಟಂತೆ. ಆದ್ದರಿಂದ, ಮೋದಿ ಸರಕಾರವನ್ನು ತಾತ್ವಿಕವಾಗಿ ಮತ್ತು ರಾಜಕೀಯವಾಗಿ ವಿರೋಧಿಸುವ ಎಲ್ಲಾ ವಿರೋಧ ಪಕ್ಷಗಳನ್ನು ಮತ್ತು ಹೋರಾಟಗಾರರನ್ನು ಭಯೋತ್ಪಾದಕರ ಜೊತೆ ಸಂಬಂಧ ಇರುವ ದೇಶದ್ರೋಹಿಗಳೆಂದು ಹೀಯಾಳಿಸುವ, ಬಂಧಿಸುವ ಮತ್ತು ಅವರ ಹತ್ಯೆಗಳಿಗೆ ಪರೋಕ್ಷ ಕಾರಣವಾಗುವ ಈ ಸಂಗಳೇ ಅಸಲಿ ದೇಶದ್ರೋಹಿಗಳಲ್ಲವೇ ಎಂಬ ಪ್ರಶ್ನೆ ಈಗಲಾದರೂ ಹುಟ್ಟಬೇಕು. ಸಂಘಿಗಳಿಗೂ- ಭಯೋತ್ಪಾದಕರಿಗೂ ಇರುವ ಸಂಬಂಧವೇನು ಎಂದು ಈಗಲಾದರೂ ಕೇಳಬೇಕು. ಸಂಘಿಗಳಿಗೆ ದೇಶ ಮುಖ್ಯವೇ ಅಥವಾ ಅಧಿಕಾರ ಮುಖ್ಯವೇ ಎಂದು ಇನ್ನಾದರೂ ಕೇಳಬೇಕು. ಭಯೋತ್ಪಾದಕರನ್ನು ಸಾಕಿಕೊಂಡು ಅವರ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿರುವುದು ದೇಶದ್ರೋಹವಲ್ಲವೇ ಎಂದು ಕೇಳಬೇಕು.

ಬಾಂಬ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳ ಮೂಲಕ ಜನರಲ್ಲಿ ಭೀತಿ ಮತ್ತು ಅಭದ್ರತೆ ಹುಟ್ಟಿಸಿ ಆ ಮೂಲಕ ತಮ್ಮ ಸಂಕುಚಿತ ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳುವುದನ್ನು ಭಯೋತ್ಪಾದನೆ ಎಂದು ವಿಶ್ವಸಂಸ್ಥೆ ಹಾಗೂ ಭಾರತದ ಭಯೋತ್ಪಾದಕ ವಿರೋಧಿ ಕಾನೂನುಗಳು ಹೇಳುತ್ತವೆ. ಹಾಗಿದ್ದಲ್ಲಿ, ಸಂಘಿಗಳಿಗೂ ಹಾಗೂ ಭಯೋತ್ಪಾದನೆಗೂ ಬಹಳ ಹಳೆಯ ಸಂಬಂಧವೇ ಇದೆ. ಆದರೆ ಅದನ್ನು ಮರೆಮಾಚಿ, ಜನರ ಕಣ್ಣಿಗೆ ಮಣ್ಣೆರೆಚುವಲ್ಲಿ ಯಶಸ್ವಿಯಾಗಿದ್ದಾರೆ ಅಷ್ಟೆ. ಗಾಂಧಿ ಹತ್ಯೆ ಮಾಡಿದ ಗೋಡ್ಸೆಯ ಸಂತಾನಗಳ ಭಯೋತ್ಪಾದಕ ಕೃತ್ಯಗಳ ಇತ್ತೀಚಿನ ಉದಾಹರಣೆಗಳೂ ಅವನ್ನು ಸ್ಪಷ್ಟ ಪಡಿಸುತ್ತವೆ. ಆದರೆ ಅವನ್ನು ಪರಿಶೀಲಿಸುವ ಮುಂಚೆ 2019ರಿಂದಲೂ ಉಳಿದುಹೋಗಿರುವ ಒಂದು ಭಯೋತ್ಪಾದಕ ಗೊಂದಲವನ್ನು ಗಮನಿಸೋಣ:

2019ರ ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಕಾರ್ ಬಾಂಬ್ ದಾಳಿಯ ಭಯೋತ್ಪಾದನೆಯಲ್ಲಿ ಭಾರತದ ನಲವತ್ತು ಸೈನಿಕರು ಹತರಾದರು. ಆದರೆ ಈ ಘಟನೆ 2019ರ ಚುನಾವಣೆಯ ದಿಕ್ಕನ್ನೇ ಬದಲಾಯಿಸಿ ಮೋದಿಯವರ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಿತು. ಆದರೆ ಅಪಾರವಾದ ಸೈನಿಕ ಸುರಕ್ಷೆ ಮತ್ತು ಭದ್ರತಾ ನಿಗರಾನಿಯಲ್ಲಿರುವ ಕಾಶ್ಮ್ಮೀರದಲ್ಲಿ, ಎಲ್ಲರ ಕಣ್ಣುತಪ್ಪಿಸಿ ಆರ್‌ಡಿಎಕ್ಸ್ ತುಂಬಿಕೊಂಡ ಕಾರೊಂದು ನಮ್ಮ ಸೈನಿಕರ ಕಾರಾವಾನ್ ಮೇಲೆ ಹೇಗೆ ದಾಳಿ ಮಾಡಲು ಸಾಧ್ಯವಾಯಿತು ಎಂಬುದನ್ನು ಘಟನೆ ನಡೆದ 3 ವರ್ಷಗಳ ನಂತರವೂ ಸರಕಾರದ ತನಿಖೆ ಏಕೆ ಬಯಲು ಮಾಡಿಲ್ಲ? ಇದಕೆ ಸ್ವಲ್ಪಮುಂಚೆ ಇದೇ ಪುಲ್ವಾಮ ಪ್ರಾಂತದಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡುತ್ತಿದ್ದ ದವಿಂದರ್ ಸಿಂಗ್ ಅವರು ಪುಲ್ವಾಮ ಘಟನೆಯಾದ ಕೆಲವೇ ತಿಂಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮೂವರು ಭಯೋತ್ಪಾದಕರನ್ನು ಗಡಿಯಾಚೆ ಸಾಗಿಸುವ ಪ್ರಯತ್ನದಲ್ಲಿ ಕಾಶ್ಮೀರ ಪೊಲೀಸರಿಗೆ ಸಿಕ್ಕಿಬಿದ್ದರು. ತನ್ನನ್ನು ಬಂಧಿಸಬಾರದೆಂದೂ, ತನಗೆ ದಿಲ್ಲಿಯಿಂದ ಆದೇಶವಿದೆಯೆಂದೂ ಆತ ಹೇಳಿದುದಾಗಿ ಕಾಶ್ಮೀರ ಪೊಲೀಸರು ಹೇಳಿದರು. ಆ ನಂತರ ಕೇಂದ್ರದ ನಿಯಂತ್ರಣದಲ್ಲಿರುವ ಎನ್‌ಐಎ ದವಿಂದರ್ ಸಿಂಗ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅದಾದ ನಂತರ ಆತನಿಗೆ ಒಂದು ಪ್ರಕರಣದಲ್ಲಿ ಜಾಮೀನು ದೊರೆಯಿತು.

ಆತನನ್ನು ಎನ್‌ಐಎ ಸಂಪೂರ್ಣವಾಗಿ ಸಾರ್ವಜನಿಕರಿಂದ ದೂರವಿಟ್ಟಿದೆ. ಏಕೆ? ಇದಲ್ಲದೆ ಮೋದಿ ಸರಕಾರ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ 2002ರಲ್ಲಿ ಅವಕಾಶ ಮಾಡಿಕೊಟ್ಟ ಭೀಕರ ಭಯೋತ್ಪಾದಕ ನರಮೇಧವಲ್ಲದೆ ನಾಂದೇಡ್, ಪರ್ಭಣಿ, ಪೂರ್ನ, ಜಲ್ನಾ, ಸಹರಾನ್‌ಪುರ, ಮಾಲೆಗಾಂವ್, ಹೈದರಾಬಾದ್, ದಿಲ್ಲಿ, ತಮಿಳುನಾಡಿನ ತೆನ್‌ಕಾಶಿ ಹಾಗೂ ಇನ್ನಿತರ ಕಡೆಗಳಲ್ಲಿ 2001-2012ರ ವರೆಗೆ ದೇಶಾದ್ಯಂತ ನಡೆದ ಹತ್ತು ಹಲವು ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸಂಘಪರಿವಾರದ ನೇರವಾದ ಪಾತ್ರವಿತ್ತು. ಕೆಲವು ಸಾಬೀತಾಗಿದೆ. ಕೆಲವದರ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಕನಿಷ್ಠ ಹತ್ತು ಆರೋಪಿಗಳು ಸಂಘಪರಿವಾರದ ವಿವಿಧ ವಿಭಾಗಗಳ ನಾಯಕರು ಮತ್ತು ಅದರಲ್ಲಿ ಕನಿನಿಷ್ಠ ಇಬ್ಬರು ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದಾರೆ. ಕೆಲವರು ಜಾಮೀನಿನ ಮೇಲಿದ್ದಾರೆ. ಸುನಿಲ್ ಜೋಷಿ ಎಂಬ ಭಯೋತ್ಪಾದಕನನ್ನು ಆತನ ಜೊತೆಗಾರ ಭಯೋತ್ಪಾದಕರೇ ಕೊಂದು ಹಾಕಿದ್ದಾರೆ. ಸಂದೀಪ್ ಡಾಂಗೆ ಹಾಗೂ ಕಲಸಾಂಗ್ರ ಎಂಬಿಬ್ಬರು ಸಂಘಿ ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ. ಪ್ರಜ್ಞಾ ಸಿಂಗ್ ಅಂತಹವರು ಸಂಸದರಾಗಿದ್ದಾರೆ. ಮೋದಿ ಸರಕಾರ ಬಂದಮೇಲೆ ಈ ಎಲ್ಲಾ ಪ್ರಕರಣಗಳಲ್ಲೂ ಒಬ್ಬೊಬ್ಬರೇ ಸಾಕ್ಷಿಗಳು ಉಲ್ಟಾ ಹೊಡೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಖುದ್ದು ಎನ್‌ಐಎ ಆರೋಪಿಗಳು ಬಿಡುಗಡೆಯಾಗುವಂತೆ ಮಾಡುತ್ತಿದ್ದಾರೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿದ್ದ ರೋಹಿಣಿ ಸಾಲಿಯಾನ್ ಅವರು ಕೊಟ್ಟ ಅಧಿಕೃತ ಹೇಳಿಕೆಯಂತೆ ಖುದ್ದು ಎನ್‌ಐಎ ಮೋದಿ ಸರಕಾರ ಬಂದ ಮೇಲೆ ಆರೋಪಿಗಳ ಮೇಲೆ ಕೇಸು ಸಾಬೀತು ಮಾಡಬಾರದೆಂದು, ನಿಧಾನವಾಗಿ ಸಾಗಬೇಕೆಂದು ಸೂಚನೆ ನೀಡಲಾಗಿದೆ. ಇದಲ್ಲದೆ ಮಾಲೆಗಾಂವ್ ಮಸೀದಿಯ ಬಳಿಯ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ಹಿಂದುತ್ವ ಭಯೋತ್ಪಾದಕರ ಪಾತ್ರವನ್ನೂ ಸ್ಪಷ್ಟವಾಗಿ ಬಯಲಿಗೆ ತಂದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯವರು ಅತ್ಯಂತ ನಿಗೂಢವಾಗಿ 2008ರ ನವೆಂಬರ್ 26ರಂದು ನಡೆದ ಪಾಕಿಸ್ತಾನಿ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹತರಾಗುತ್ತಾರೆ. ಅವರು ಭಯೋತ್ಪಾದಕರ ಗುಂಡಿಗೆ ಬಲಿಯಾದರೋ ಅಥವಾ ಅವರಿದ್ದ ಜೀಪಿನಲ್ಲೇ ಹತರಾದರೋ ಎಂಬಂತಹ ಹಲವು ಗಂಭೀರ ಪ್ರಶ್ನೆಗಳಿಗೆ ಸರಕಾರ ಉತ್ತರ ಕೊಡುವ ಗೋಜಿಗೇ ಹೋಗಿಲ್ಲ.

ಬದಲಿಗೆ ಹೇಮಂತ್ ಕರ್ಕರೆ ಸಾವನ್ನು ಸಂಭ್ರಮಿಸಿದ ಪ್ರಜ್ಞಾ ಸಿಂಗ್ ‘‘ನನ್ನ ಶಾಪದಿಂದಲೇ ಅವರು ಸತ್ತರು’’ ಎಂಬ ಹೇಳಿಕೆಯ ನಿಗೂಢತೆಯನ್ನು ಅರಿಯುವ ಪ್ರಯತ್ನವನ್ನು ಮಾಡಲಿಲ್ಲ. ಇದೇ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಕರ್ನಲ್ ಶ್ರೀಕಾಂತ್ ಪುರೋಹಿತ್, ಸ್ಫೋಟ ನಡೆಸಿದ ಅಭಿನವ್ ಭಾರತ ಸಂಸ್ಥೆಗೂ ತನಗೂ ಇದ್ದ ಸಂಬಂಧವನ್ನು ನಿರಾಕರಿಸಿಲ್ಲ. ಬದಲಿಗೆ ತಾನು ಅಭಿನವ್ ಭಾರತ ಸಂಸ್ಥೆಯೊಳಗೆ ನುಸುಳಿ ಅವರ ಸುಳಿವನ್ನು ಯೋಜನೆಯನ್ನು ಪಡೆದುಕೊಳ್ಳುವ ಬೇಹುಗಾರಿಕಾ ಕೆಲಸವನ್ನು ಮಾತ್ರ ಮಾಡುತ್ತಿದೆ ಎಂದು ಒಮ್ಮೆ ಹೇಳಿದರೆ ಮತ್ತೊಮ್ಮೆ ಈ ಸ್ಫೋಟ ಪ್ರಕರಣದಲ್ಲಿ ತಾನು ತನಗಿಂತ ಹಿರಿಯ ಅಧಿಕಾರಿಗಳ ಆದೇಶದ ಮೇರೆಗಷ್ಟೆ ಭಾಗವಹಿಸಿದ್ದೆ ಎಂದೂ ಹೇಳಿದ್ದಾರೆ. ಮೋದಿ ಸರಕಾರ ಬಂದ ಮೇಲೆ ಆರೋಪಗಳನ್ನು ಸಡಿಲಿಸಿ ಅವರ ಜಾಮೀನಿಗೆ ಅವಕಾಶ ಮಾಡಿಕೊಟ್ಟಿರುವ ಎನ್‌ಐಎಯ ಆ ಹಿರಿಯ ಸೇನಾಧಿಕಾರಿಗಳು ಯಾರು? ಅವರಿಂದ ದೇಶಕ್ಕಿರುವ ಆಪತ್ತೇನು ಎಂಬ ಬಗ್ಗೆ ಈವರೆಗೂ ಯಾವುದೇ ತನಿಖೆ ಮಾಡಿಲ್ಲ. ಬದಲಿಗೆ ಸಾಕ್ಷಿಗಳನ್ನು ಬೆದರಿಸಿ ಪುರೋಹಿತ್ ಅವರನ್ನು ಸಂಪೂರ್ಣವಾಗಿ ದೋಷಮುಕ್ತರಾಗಿಸುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ 2007ರಲ್ಲಿ ನಡೆದ ಅಜ್ಮೀರ್ ದರ್ಗಾ, ಹೈದರಾಬಾದಿನ ಮೆಕ್ಕಾ ಮಸೀದಿ ಮತ್ತು ದಿಲ್ಲಿ ಸಮೀಪ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಗಳೆಲ್ಲದರಲ್ಲೂ ನಿಂದಿತನಾಗಿದ್ದ ಸ್ವಾಮಿ ಅಸೀಮಾನಂದ್ ಎಂಬ ವ್ಯಕ್ತಿ 2010ರಲ್ಲಿ ಸ್ವೇಚ್ಛಾ ಹೇಳಿಕೆಯನ್ನು ಕೊಟ್ಟು ಇವೆಲ್ಲ ಬಾಂಬ್ ಭಯೋತ್ಪಾದನೆಯ ಹಿಂದೆ ಆರೆಸ್ಸೆಸ್‌ನ ಸರಸಂಘ ಚಾಲಕ ಭಾಗವತ್ ಅವರನ್ನೂ ಒಳಗೊಂಡಂತೆ ಹಿರಿಯ ನಾಯಕರ ಸಹಕಾರ ಮತ್ತು ಮಾರ್ಗದರ್ಶನವಿತ್ತು ಎಂದು ಹೇಳಿದ್ದರು.

ಆ ನಂತರ ಆ ಹೇಳಿಕೆಯನ್ನು ಅವರು ವಾಪಸ್ ತೆಗೆದುಕೊಂಡರೂ, 2014ರಲ್ಲಿ ‘ಕಾರಾವಾನ್’ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಅವೆಲ್ಲವನ್ನೂ ಪುನರುಚ್ಚರಿಸಿದ್ದರು. ಒಂದು ದೇಶಭಕ್ತ ಸರಕಾರ ಅಸೀಮಾನಂದನ ಹೇಳಿಕೆಯನ್ನು ತಳ್ಳಿಹಾಕುತ್ತಿತ್ತೇ? ಅಥವಾ ವ್ಯಕ್ತಿಗಿಂತ ದೇಶ ಮುಖ್ಯ ಎಂಬ ತಮ್ಮ ಸೋಗಲಾಡಿ ಘೋಷಣೆಗೆ ತಕ್ಕಂತೆ ಗಂಭೀರ ತನಿಖೆಯನ್ನು ಮಾಡುತ್ತಿತ್ತೇ? ಆದರೆ ದೇಶಭಕ್ತ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಇಂತಹ ಎಲ್ಲಾ ಅಸಲಿ ಭಯೋತ್ಪಾದಕರು ಬಿಡುಗಡೆಯಾಗುತ್ತಿದ್ದಾರೆ. ಅದರ ಬದಲಿಗೆ ತೀಸ್ತಾ ಸೆಟಲ್ವಾಡ್, ಸಂಜೀವ್ ಭಟ್, ಶ್ರೀ ಕುಮಾರ್, ಝುಬೈರ್, ಸ್ಟಾನ್ ಸ್ವಾಮಿ, ತೇಲ್ತುಂಬ್ಡೆ, ವರವರರಾವ್, ಉಮರ್ ಖಾಲಿದ್‌ನಂತಹ ಅಪ್ಪಟ ದೇಶಭಕ್ತರನ್ನು ತುಕ್ಡೆತುಕ್ಡೆ ಗ್ಯಾಂಗ್ ಎಂದು, ಭಯೋತ್ಪಾದಕರೆಂದು ಜೈಲಿಗೆ ತಳ್ಳಲಾಗುತ್ತಿದೆ. ಈಗಂತೂ ಈ ಅಸಲಿ ದೇಶದ್ರೋಹಿಗಳು ಸರಕಾರದ ಅಂಗಸಂಸ್ಥೆಗಳಲ್ಲಿ ಸೇರಿಕೊಂಡು ಒಂದು ಅಪಾಯಕಾರಿ Deep State ಆಗಿ ಬದಲಾಗಿದ್ದಾರೆ ಹಾಗೂ ಇಂತಹ ದೇಶದ್ರೋಹಿ ಕೃತ್ಯಗಳಿಗೆ ಸರಕಾರದ ರಕ್ಷಣೆ, ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಿದ್ದಾರೆ. ದವಿಂದರ್ ಸಿಂಗ್, ಪುಲ್ವಾಮ, ತಾಲಿಬ್ ಹುಸೈನ್, ರಿಯಾಝ್ ಅತ್ತಾರಿ ಪ್ರಕರಣಗಳು ಅದನ್ನೇ ಸಾಬೀತು ಪಡಿಸುತ್ತದೆ ಎಂದು ಯಾರಿಗಾದರೂ ಅನಿಸಿದರೆ ಅದು ಉತ್ಪ್ರೇಕ್ಷೆಯೇನಲ್ಲ.. ವ್ಯಕ್ತಿಗಿಂತ ದೇಶ ಮುಖ್ಯ ಎಂದು ಭಾವಿಸುವವರು ಈಗಲಾದರೂ ಅಸಲಿ ದೇಶದ್ರೋಹಿಗಳು ಯಾರು ಎಂದು ಅರಿಯಬೇಕಲ್ಲವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News