‘ಇಸ್ಲಾಮ್ ಗೆ ಬೆದರಿಕೆಗಳು’ ಕುರಿತು ಚಾಟ್ ಮಾಡಿದ್ದಕ್ಕೆ ಬಂಧಿತ ವ್ಯಕ್ತಿಗೆ 6 ವರ್ಷಗಳ ನಂತರ ಕೊನೆಗೂ ಸಿಕ್ಕಿತು ಜಾಮೀನು

Update: 2022-07-06 14:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಇಸ್ಲಾಮ್ ಗೆ ‘ಬೆದರಿಕೆಗಳ’ ಕುರಿತು ತನ್ನ ಸ್ನೇಹಿತರೊಂದಿಗೆ ಚರ್ಚಿಸಿದ್ದಕ್ಕಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಲ್ಲಿ ಕರಾಳ ಭಯೋತ್ಪಾದನೆ ಚಟುವಟಿಕೆಗಳ( ತಡೆ) ಕಾಯ್ದೆ (ಯುಎಪಿಎ) ಅಡಿ ಬಂಧಿಸಲ್ಪಟ್ಟಿದ್ದ ಮಹಾರಾಷ್ಟ್ರದ ಪರ್ಭನಿಯ ಶಾಲಾಶಿಕ್ಷಕ ಮುಹಮ್ಮದ್ ರಯೀಸುದ್ದೀನ್ (44)ಗೆ ಆರು ವರ್ಷಗಳ ಬಳಿಕ ಕೊನೆಗೂ ಕಳೆದ ವಾರ ಬಾಂಬೆ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು theprint.in ವರದಿ ಮಾಡಿದೆ.

ರಯೀಸುದ್ದೀನ್ ತನ್ನ ಮನೆಯಿಂದ 50 ಕಿ.ಮೀ.ದೂರದ ನೆರೆಯ ಹಿಂಗೋಲಿ ಜಿಲ್ಲೆಯಲ್ಲಿ ಶಾಲಾ ಶಿಕ್ಷಕರಾಗಿದ್ದು, ವಾರಾಂತ್ಯದಲ್ಲಿ ಪರ್ಭನಿಯ ತನ್ನ ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ಇಸ್ಲಾಮ್ ಗೆ ‘ಬೆದರಿಕೆಗಳು’ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತನ್ನ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದರು ಮತ್ತು ಇವೇ ಚರ್ಚೆಗಳು ಅವರನ್ನು ಆರು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದವು ಎಂದು ವರದಿಯಾಗಿದೆ.

ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು 2016,ಆಗಸ್ಟ್ 12ರಂದು ರಯೀಸುದ್ದೀನ್ರನ್ನು ಬಂಧಿಸಿತ್ತು ಮತ್ತು ಬಳಿಕ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ರಯೀಸುದ್ದೀನ್ ರ ಸಹಆರೋಪಿಗಳಾಗಿದ್ದ ನಾಸೆರ್ ಬಿನ್ ಅಬೂಬಕರ್ ಯಫಾಯಿ ಮತ್ತು ಮುಹಮ್ಮದ್ ಶಾಹಿದ್ ಖಾನ್ ಅವರು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ಬಳಿಕ ಕಳೆದ ಮೇ ತಿಂಗಳಲ್ಲಿ ಅವರಿಬ್ಬರಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು,ಈ ಪೈಕಿ ಆರು ವರ್ಷಗಳ ಶಿಕ್ಷೆಯನ್ನು ಅವರು ಈಗಾಗಲೇ ಅನುಭವಿಸಿದ್ದಾರೆ. ರಯೀಸುದ್ದೀನ್ ಬಂಧನಕ್ಕೆ ಒಂದು ತಿಂಗಳು ಮೊದಲು ಅವರನ್ನು ಬಂಧಿಸಲಾಗಿತ್ತು. ಇನ್ನೋರ್ವ ಸಹ ಆರೋಪಿ ಇಕ್ಬಾಲ್ ಅಹ್ಮದ್ ಗೆ ಉಚ್ಚ ನ್ಯಾಯಾಲಯವು 2021,ಆಗಸ್ಟ್ ನಲ್ಲಿ ಜಾಮೀನು ಮಂಜೂರು ಮಾಡಿತ್ತು.

ರಯೀಸುದ್ದೀನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎನ್ಎಐ ವಿಶೇಷ ನ್ಯಾಯಾಲಯವು 2019, ಜ.31ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜೂ.27ರಂದು ರಯೀಸುದ್ದೀನ್ ಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ವಿ.ಜಿ.ಬಿಷ್ಟ್ ಮತ್ತು ರೇವತಿ ಮೊಹಿತೆ ಡೇರೆ ಅವರ ಪೀಠವು,ಈ ಹಂತದಲ್ಲಿ ಪ್ರಾಥಮಿಕವಾಗಿ ಅವರ ವಿರುದ್ಧ ಪ್ರಕರಣ ರೂಪುಗೊಂಡಿಲ್ಲ ಎಂದು ಅಭಿಪ್ರಾಯಿಸಿದೆ.

ಈ ಎಲ್ಲ ವರ್ಷಗಳಲ್ಲಿ ರಯೀಸುದ್ದೀನ್ ರ ಪ್ರಕರಣದಲ್ಲಿ ಹೇಳುವಂತಹ ಪ್ರಗತಿಯೇನೂ ಆಗಿಲ್ಲ. 550 ಸಾಕ್ಷಿಗಳ ಪೈಕಿ ಒಬ್ಬರನ್ನೂ ವಿಚಾರಣೆಗೊಳಪಡಿಸಿಲ್ಲ ಎಂದು ತನ್ನ 37 ಪುಟಗಳ ಜಾಮೀನು ಆದೇಶದಲ್ಲಿ ಹೇಳಿರುವ ಉಚ್ಚ ನ್ಯಾಯಾಲಯವು, ನ್ಯಾಯಸಮ್ಮತ ಕಾಲಮಿತಿಯಲ್ಲಿ ಪ್ರಕರಣವು ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲ ಎಂದು ಬೆಟ್ಟು ಮಾಡಿದೆ ಎಂದು ವರದಿಯಾಗಿದೆ.

ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ನಾಯಕನಿಗೆ ನಿಷ್ಠೆಯ ಪ್ರಮಾಣ ಸೇರಿದಂತೆ ರಯೀಸುದ್ದೀನ್ ವಿರುದ್ಧದ ಪ್ರತಿಯೊಂದೂ ಸಾಕ್ಷ್ಯವನ್ನು ಅಕ್ಷರಶಃ ತಿರಸ್ಕರಿಸಿದೆ. ಇವು ಯಾವುದೂ ಆಕ್ಷೇಪಾರ್ಹ ಸ್ವರೂಪದ್ದಲ್ಲ ಎಂದು ಅದು ಹೇಳಿದೆ.
ಉಚ್ಚ ನ್ಯಾಯಾಲಯವು ರಯೀಸುದ್ದೀನ್ ಬೃಹನ್ಮುಂಬೈ ವ್ಯಾಪ್ತಿಯಿಂದ ಹೊರಗೆ ಹೋಗಕೂಡದು ಎಂಬ ತನ್ನ ಮೂಲ ಆದೇಶದಲ್ಲಿಯ ಷರತ್ತನ್ನು ಮಂಗಳವಾರ ತಿದ್ದುಪಡಿಗೊಳಿಸಿದೆ.
 
ThePrint ಜೊತೆ ಮಾತನಾಡಿದ ರಯೀಸುದ್ದೀನ್ ಪರ ವಕೀಲ ಅಬ್ದುಲ್ ರಹೀಂ ಬುಖಾರಿ ಅವರು, ತನ್ನ ಕಕ್ಷಿದಾರರ ಬಂಧನದ ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು ಮತ್ತು ಅವರು ಅರ್ಧ ಸಂಬಳವನ್ನು ಪಡೆಯುತ್ತಿದ್ದರು. ಈಗ ಅವರು ಶೇ.75ರಷ್ಟು ಸಂಬಳಕ್ಕೆ ಅರ್ಹರಾಗಲಿದ್ದಾರೆ ಮತ್ತು ಪ್ರಕರಣದಿಂದ ಖುಲಾಸೆಗೊಂಡ ಬಳಿಕ ಶೇ.100ರಷ್ಟು ಸಂಬಳವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಮುಸ್ಲಿಮರು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದ ಗುಂಪಿನ ಭಾಗವಾಗಿದ್ದರು ಎನ್ನುವುದು ರಯೀಸುದ್ದೀನ್ ವಿರುದ್ಧದ ಮುಖ್ಯ ಆರೋಪವಾಗಿತ್ತು. ಅವರು ಐಎಸ್ ಜೊತೆ ನಂಟು ಹೊಂದಿದ್ದಾರೆ ಎಂದೂ ಆರೋಪಿಸಲಾಗಿತ್ತು ಎಂದು ಹೇಳಿದ ಬುಖಾರಿ, ರಯೀಸುದ್ದೀನ್ ಗೌರವಾನ್ವಿತ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅವರ ಇಬ್ಬರು ಸೋದರರು ವೈದ್ಯರಾಗಿದ್ದು, ಇಬ್ಬರು ಫಾರ್ಮಾಸಿಸ್ಟ್ಗಳಾಗಿದ್ದಾರೆ ಮತ್ತು ಮೂವರು ಸೋದರಿಯರು ಸರಕಾರಿ ಶಾಲಾ ಶಿಕ್ಷಕಿಯರಾಗಿದ್ದಾರೆ ಎಂದು ತಿಳಿಸಿದರು.

ರಯೀಸುದ್ದೀನ್ ಜೊತೆ ಚರ್ಚೆಗಳಲ್ಲಿ ಭಾಗಿಯಾಗಿದ್ದ ಇತರ ಐವರು ಸಾಕ್ಷಿಗಳ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು,ಅವರು ಕೇವಲ ಇಸ್ಲಾಮ್ಗೆ ಬೆದರಿಕೆಗಳ ಕುರಿತು ಚರ್ಚಿಸಿದ್ದರು. ಆರೋಪಿ ಯಾವುದೇ ಅಪರಾಧ ಅಥವಾ ದಂಗೆಯನ್ನು ಪ್ರಚೋದಿಸಿದ್ದನ್ನು ಅಥವಾ ಹಿಂಸಾಚಾರವನ್ನು ಪ್ರತಿಪಾದಿಸಿದ್ದನ್ನು ಸೂಚಿಸುವ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅವಲಂಬಿಸಿರುವ ನಿರ್ಣಾಯಕ ಸಾಕ್ಷ್ಯವೆಂದರೆ ರಯೀಸುದ್ದೀನ್ ಐಎಸ್ ಮುಖ್ಯಸ್ಥನಿಗೆ ನಿಷ್ಠೆಯ ಪ್ರಮಾಣ ಮಾಡಿದ್ದು. ಪ್ರಮಾಣವು ‘ಕೇವಲ ಸ್ವೀಕಾರ’ವಾಗಿದೆ ಮತ್ತು ಅದು ಆಕ್ಷೇಪಾರ್ಹವಲ್ಲ ಎಂದೂ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News