ನ್ಯಾಯಾಂಗ ವ್ಯವಸ್ಥೆಯ ಮೇಲೆ ಬಿಜೆಪಿಯ ಪೂರ್ವನಿಯೋಜಿತ ದಾಳಿ: ಅಭಿಷೇಕ್ ಮನು ಸಿಂಘ್ವಿ

Update: 2022-07-06 18:30 GMT
photo- pti

ಬೆಂಗಳೂರು, ಜು.7: ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಧೀಶರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಾಳಿ ಕಾಕತಾಳೀಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಂಗವನ್ನು ಟ್ರೋಲ್ ಮಾಡುವ ಸಂದೇಶಗಳನ್ನು ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಎಲ್ಲೆಡೆ ಪಸರಿಸುತ್ತಿದ್ದಾರೆ. ಈ ಅಭಿಯಾನದ ಹಿಂದೆ ನ್ಯಾಯಾಂಗದ ನೈತಿಕಸ್ಥೈರ್ಯ ಕುಗ್ಗಿಸುವ, ಒತ್ತಡ ಹೇರುವ ಹಾಗೂ ಬೆದರಿಸುವ ಉದ್ದೇಶ ಅಡಗಿದೆ ಎಂದು ದೂರಿದರು.

ದೇಶದ ನಾಗರಿಕರು ಹಾಗೂ ಎಲ್ಲ ವರ್ಗದಿಂದ ಬಿಜೆಪಿ ಸರಕಾರ ಪ್ರತಿರೋಧ ಎದುರಿಸುತ್ತಿದೆ. ನಿರುದ್ಯೋಗ, ಹಣದುಬ್ಬರ, ಸಾಮಾಜಿಕ ಹೋರಾಟ ವಿಚಾರಗಳಿಂದ ದಿನನಿತ್ಯ ಉದ್ಭವಿಸುತ್ತಿರುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಮೋದಿ ಸರಕಾರ ಇಂತಹ ನೀಚ ಅಭಿಯಾನಗಳನ್ನು ನಡೆಸುತ್ತಿದೆ ಎಂದು ಆವರು ಆಕ್ರೋಶ ವ್ಯಕ್ತಪಡಿಸಿದರು.

ಉದಯಪುರದಲ್ಲಿನ ಹತ್ಯೆ ಪ್ರಕರಣದಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿತ್ತು, ಆದರೆ ಹಂತಕರು ಬಿಜೆಪಿಯ ಸದಸ್ಯರು ಎಂದು ಗೊತ್ತಾಯಿತು. ಕಾಶ್ಮೀರದಲ್ಲಿ ಬಂಧಿಸಲ್ಪಟ್ಟ ಲಷ್ಕರ್ ಉಗ್ರಗಾಮಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಎಂಬುದು ಬೆಳಕಿಗೆ ಬಂದಿದೆ. ಇದೆಲ್ಲದರ ಮಧ್ಯೆ ಬಿಜೆಪಿ ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ನಕಲಿ ರಾಷ್ಟ್ರೀಯತೆಯನ್ನು ಪ್ರದರ್ಶಿಸುತ್ತಿದೆ ಎಂದು ಅವರು ಕಿಡಿಗಾರಿದರು.

ಬಿಜೆಪಿಯ ಪರ ಪ್ರಚಾರ ಮಾಡುವ ಮಾಧ್ಯಮವೊಂದು ರಾಹುಲ್ ಗಾಂಧಿ ವಿರುದ್ಧ ಉದ್ದೇಶಪೂರ್ವಕವಾಗಿ ಬಿಜೆಪಿ ನಾಯಕರು ಪ್ರಕಟಿಸಿದ್ದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಕೇರಳದ ಗಲಭೆ ವಿಚಾರವಾಗಿ ನೀಡಿದ ಹೇಳಿಕೆಯನ್ನು, ಉದಯಪುರ ಗಲಭೆ ವಿಚಾರವಾಗಿ ನೀಡಿದ ಹೇಳಿಕೆ ಎಂದು ಪ್ರಸಾರ ಮಾಡಿತು. ಈ ಸಂಬಂಧ ಪ್ರಕರಣ ದಾಖಲಿಸಿದ ನಂತರ ಆ ವಾಹಿನಿ ಕ್ಷಮೆಯಾಚಿಸಿತು ಎಂದು ಅವರು ಹೇಳಿದರು.

ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಾಗ ನ್ಯಾಯಾಲಯಕ್ಕೆ ಜೈಕಾರ ಹಾಕಿದೆ ಬಿಜೆಪಿ, ಉದಯಪುರ ಗಲಭೆ ಹಿಂದೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ಕುರಿತು ಹೇಳಿದ್ದಕ್ಕೆ ಟೀಕೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿಯ ಬುದ್ಧಿಜೀವಿಗಳು ನ್ಯಾಯ ಪೀಠಕ್ಕೆ ಪತ್ರ ಬರೆದು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕೇಳಿದರು. ಬಿಜೆಪಿ ವಜಾಗೊಳಿಸಿರುವ ಒಬ್ಬ ವ್ಯಕ್ತಿ ಪರವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದ್ದು ಹೇಗೆ? ಅವರಿಗೆ ಏಕಾಏಕಿ ಲಕ್ಷ್ಮಣ ರೇಖೆ ನೆನಪಾಗಿದ್ದೇಕೆ? ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ನಿಮಿಷ ದ್ವೇಷಪೂರಿತ ಸಂದೇಶಗಳನ್ನು ಪ್ರಕಟಿಸುವಾಗ ಬಿಜೆಪಿಗೆ ಈ ಲಕ್ಷ್ಮಣ ರೇಖೆ ನೆನಪಾಗಲಿಲ್ಲವೇ? ಇದರ ಹಿಂದೆ ಪ್ರಧಾನಿ ಕಚೇರಿಯ ಕೃಪಾಪೋಷಣೆ ಇದೆ ಎಂದು ಅವರು ದೂರಿದರು.

ರಾಜ್ಯದ ಹೈಕೋರ್ಟ್‍ನ ಹಿರಿಯ ನ್ಯಾಯಾಧೀಶರು ತಮ್ಮ ಮೇಲೆ ವರ್ಗಾವಣೆ ಬೆದರಿಕೆ ಒತ್ತಡ ಇದ್ದು, ನಾನು ಕೇವಲ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. 2014ರ ನಂತರ ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಣದ ಶಕ್ತಿಗಳು ಈ ರೀತಿ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ ಎಂದು ಅಭಿಷೇಕ್ ಮನು ಸಂಘ್ವಿ ಹೇಳಿದರು. 

ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಈ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವಂತೆ ಕೋರಿದ್ದೇವೆ ಎಂದ ಅವರು, ನೂರು ಕೋಟಿ ಧ್ವನಿಗಳಿರುವ ದೇಶದಲ್ಲಿ ಬಿಜೆಪಿ ಎಷ್ಟು ಧ್ವನಿಗಳನ್ನು ಅಡಗಿಸಲು ಸಾಧ್ಯ? ಸಂವಿಧಾನದ ಮೇಲೆ ಕಟ್ಟಲಾಗಿರುವ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಎಷ್ಟು ಸಂಸ್ಥೆಗಳನ್ನು ನಾಶಪಡಿಸಲಿದೆ? ಬಿಜೆಪಿಯ ದುರಾಡಳಿತ ಹಾಗೂ ವೈಫಲ್ಯ ಎದುರಿಸುತ್ತಿರುವ ದೇಶದಲ್ಲಿ ಬಿಜೆಪಿ ಎಷ್ಟು ದಿನಗಳ ಕಾಲ ಇಂತಹ ವಿಭಜನೆಯ ಅಭಿಯಾನಗಳ ಹಿಂದೆ ಅವಿತುಕೊಳ್ಳಲಿದೆ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News