ಉತ್ತರಪ್ರದೇಶ ಪೊಲೀಸರ ಎಫ್ ಐಆರ್ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಮುಹಮ್ಮದ್ ಝುಬೈರ್

Update: 2022-07-07 06:50 GMT
Photo: PTI

ಹೊಸದಿಲ್ಲಿ: ಯತಿ ನರಸಿಂಗಾನಂದ ಸರಸ್ವತಿ, ಭಜರಂಗ ಮುನಿ ಹಾಗೂ  ಆನಂದ್ ಸ್ವರೂಪ್  ಕುರಿತು ಮಾಡಿರುವ  ಟ್ವೀಟ್‌ಗಾಗಿ ಉತ್ತರಪ್ರದೇಶ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಮುಹಮ್ಮದ್ ಝುಬೇರ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಇಂದು ತುರ್ತು  ವಿಚಾರಣೆಗಾಗಿ  ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ. ಮಹೇಶ್ವರಿ ಅವರ ರಜಾಕಾಲದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು.

"ಇದು ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮುಹಮ್ಮದ್ ಝಬೈರ್‌ಗೆ ಸಂಬಂಧಿಸಿದೆ. ಅವರ ಕೆಲಸ ಸುದ್ದಿಗಳನ್ನು ಪರಿಶೀಲಿಸುವುದು. ಅವರು ದ್ವೇಷದ ಭಾಷಣಗಳನ್ನು ಗುರುತಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದರಲ್ಲಿ ಯಾವುದೇ ಅಪರಾಧವಿಲ್ಲ ಎಂದು ಎಫ್‌ಐಆರ್ ತೋರಿಸುತ್ತದೆ. ನಾವು ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋದೆವು.  ಆದರೆ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ. ಝುಬೈರ್ ಕೊಲೆ ಬೆದರಿಕೆ ಎದುರಿಸುತ್ತಿದ್ದಾರೆ.  ನಾವು ಅವನನ್ನು ಕೊಲ್ಲುತ್ತೇವೆ ಎಂದು ಜನ ಹೇಳುತ್ತಿದ್ದಾರೆ.  ಅವರ ಸುರಕ್ಷತೆಯ ಬಗ್ಗೆ ನಮಗೆ ಚಿಂತೆಯಾಗಿದೆ. ಸಾಧ್ಯವಾದರೆ ಇಂದು ಮಧ್ಯಾಹ್ನ  2  ಗಂಟೆಗೆ ವಿಷಯವನ್ನು ಪಟ್ಟಿ ಮಾಡಿ'' ಎಂದು ಹಿರಿಯ ವಕೀಲಕಾಲಿನ್ ಗೊನ್ಸಾಲ್ವಿಸ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಾಧೀಶರ ನಿಯೋಜನೆಗೆ ಒಳಪಟ್ಟು ವಿಷಯವನ್ನು ನಾಳೆ ಪಟ್ಟಿ ಮಾಡಬಹುದು ಎಂದು ಪೀಠ ಹೇಳಿದೆ

ಝುಬೈರ್ 2018 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ನಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪದ ಮೇಲೆ ದಿಲ್ಲಿ ಪೊಲೀಸರು ಜೂನ್ 27 ರಂದು ಅವರನ್ನು ಬಂಧಿಸಿದ್ದರು. ಉತ್ತರಪ್ರದೇಶ ಪೊಲೀಸರು ದಾಖಲಿಸಿದ ಎಫ್ ಐಆರ್ ಆಧರಿಸಿ ಅವರನ್ನು ಉತ್ತರಪ್ರದೇಶದ ಸಿತಾಪುರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News