ಕಾಫಿನಾಡಿನಲ್ಲಿ ಮುಂದುವರಿದ ಮಳೆ: ಅಲ್ಲಲ್ಲಿ ಭೂಕುಸಿತ; ರಸ್ತೆ ಸಂಪರ್ಕ ಕಡಿತ

Update: 2022-07-07 15:11 GMT

ಚಿಕ್ಕಮಗಳೂರು, ಜು.7: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆರಿದ್ರಾ ಮಳೆಯ ಆರ್ಭಟ ಗುರುವಾರವೂ ಮುಂದೂವರೆದಿದೆ. ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ, ಮನೆಗೆ ಹಾನಿ, ರಸ್ತೆ ಸಂಪರ್ಕ ಕಡಿತದಂತಹ ಸಣ್ಣಪುಟ್ಟ ಅನಾಹುತಗಳ ಸರಣಿ ವರದಿಯಾಗಿವೆ. ಮಲೆನಾಡು ಭಾಗದ ಪ್ರಮುಖ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳ ಜನರ ಆತಂಕ ಹೆಚ್ಚಾಗಿದೆ.

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುರುವಾರ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದರೇ, ಶುಕ್ರವಾರ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಜು.9ರವರೆಗೆ ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನಿರಂತರ ಮಳೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜಜೀವನ ಅಸ್ತವ್ಯಸ್ತಗೊಂಡಿದೆ.

ಬುಧವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಮೂಡಿಗೆರೆ, ಕಳಸ ತಾಲೂಕು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಗುರುವಾರ ಮುಂಜಾನೆ ಕಳಸ ತಾಲೂಕು ವ್ಯಾಪ್ತಿಯ ಬಾಳೆಹೊಳೆ ಗ್ರಾಮದಲ್ಲಿ ಮಾಗುಂಡಿ-ಕಳಸ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಮರ ಬಿದ್ದ ರಭಸಕ್ಕೆ ಭಾರೀ ಪ್ರಮಾಣದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು ತೆರವುಕಾರ್ಯ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಕೆಳಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 173ರ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಮತ್ತೆ 4 ಮನೆಗಳು ಸಂಪೂರ್ಣ ಜಖಂಗೊಂಡಿದ್ದರೇ 10 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಲೆನಾಡು ಭಾಗದ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಬಾಳೆಹೊನ್ನೂರು ಸಮೀಪ ಭದ್ರಾ ನದಿ ನೀರು ನದಿಪಾತ್ರದಲ್ಲಿದ್ದ ತೋಟಗಳಿಗೆ ನುಗ್ಗಿದೆ. ಸುರಕ್ಷತೆಯ ಹಿತದೃಷ್ಟಿಯಿಂದ ನದಿಸಮೀಪದ ಜನರನ್ನು  ಸ್ಥಳಾಂತರಿಸಲಾಗಿದೆ.

ಕೊಪ್ಪ ತಾಲೂಕಿನ ಅತ್ತಿಕುಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಿಕಲ್ ಬಳಿ ಭೂ ಕುಸಿತ ಉಂಟಾಗಿದ್ದರೇ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದ ಪರಿಣಾಮ ವಿದ್ಯುತ್ ಸ್ಥಗಿತಗೊಂಡಿದೆ. ಗುರುವಾರ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ 174 ಮಿ.ಮೀ.ಹೆಚ್ಚು ಮಳೆಯಾಗಿದೆ. ಇನ್ನು ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಆಗಾಗ್ಗೆ ಸಾಧಾರಣ ಮಳೆಯಾಗಿದ್ದು, ಬಯಲುಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದೆಯಾದರೂ ಧಟ್ಟ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲಾದ್ಯಂತ ಕಳೆದ 24 ಗಂಟೆಗಳಲ್ಲಿ ಬಿದ್ದಿರುವ ಮಳೆ ವಿವರ ಮಿಲಿಮೀಟರ್‍ಗಳಲ್ಲಿ ಇಂತಿದೆ: ಚಿಕ್ಕಮಗಳೂರು ಕಸಬಾ 19, ವಸ್ತಾರೆ 28, ಆಲ್ದೂರು 42, ಜೋಳದಾಳ್ 32.6, ಅತ್ತಿಗುಂಡಿ 92.4, ಕೆ.ಆರ್.ಪೇಟೆ 48.3 ಸಂಗಮೇಶ್ವರಪೇಟೆ 50.8, ಬ್ಯಾರುವಳ್ಳಿ 40.2, ಕಳಸಾಪುರ 10, ದಾಸರಹಳ್ಳಿ 11, ಮೂಡಿಗೆರೆ 53.7, ಕೊಟ್ಟಿಗೆಹಾರ 90, ಗೋಣಿಬೀಡು 70, ಜಾವಳಿ 69.2, ಹಿರೇಬೈಲು 70,ಕಳಸ 78.2, ಹೊಸಕೆರೆ 156, ಬೆಳ್ಳೂರು 82.4, ನರಸಿಂಹರಾಜಪುರ 68.4, ಬಾಳೆಹೊನ್ನೂರು 68, ಮೇಗರಮಕ್ಕಿ 70, ಶೃಂಗೇರಿ 126, ಕಿಗ್ಗ 93.6, ಕೊಪ್ಪ 150.4, ಹರಿಹರಪುರ 145, ಜಯಪುರ 87.4, ಬಸರಿಕಟ್ಟೆ 124.5, ಕಮ್ಮರಡಿ 150.2, ತರೀಕೆರೆ 15.2, ಲಕ್ಕವಳ್ಳಿ 16.6, ರಂಗೇನಹಳ್ಳಿ 21.2, ಲಿಂಗದಹಳ್ಳಿ 18.2, ಉಡೇವಾ 17.8, ತಣಿಗೆಬೈಲು 31.2, ತ್ಯಾಗದಬಾಗಿ 22, ಹುಣಸಘಟ್ಟ 12, ಕಡೂರು 10, ಬೀರೂರು 12.6 ಸಖರಾಯಪಟ್ಟಣ 30.2, ಸಿಂಗಟಗೆರೆ 12.2, ಪಂಚನಹಳ್ಳಿ 12.6, ಎಮ್ಮೆದೊಡ್ಡಿ 18, ಯಗಟಿ 7.2, ಗಿರಿಯಾಪುರ 5.5, ಚೌಳಹಿರಿಯೂರು 10.4, ಅಜ್ಜಂಪುರ 10.2, ಶಿವನಿ 6.1, ಬುಕ್ಕಾಂಬುದಿಯಲ್ಲಿ 11 ಮಿಲಿಮೀಟರ್ ಮಳೆಬಿದ್ದಿದೆ.

ಬಾಲಕಿಗಾಗಿ 4ನೇ ದಿನವೂ ಮುಂದುವರಿದ  ಶೋಧ ಕಾರ್ಯ: ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಇತ್ತೀಚೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಶಾಲಾ ಬಾಲಕಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಶಾಲೆಯಿಂದ ಮನೆಗೆ ತೆರಳುತ್ತಿದ್ದ 7ವರ್ಷ ಬಾಲಕಿ ಸುಪ್ರೀತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಆಕೆಯ ಶೋಧಕಾರ್ಯ 4ನೇ ದಿನಕ್ಕೆ ಕಾಲಿಟ್ಟಿದೆ. ಎಸ್‍ಡಿಆರ್‍ಎಫ್ ತಂಡ, ಅಗ್ನಿಶಾಮಕ ದಳ, ಮೂಡಿಗೆರೆಯ ಸಾಮಾಜಿಕ ಸಕ್ರೀಯ ಸೇವಾ ಸಂಘದ ಸದಸ್ಯರು ಹಾಗೂ ಸ್ಥಳೀಯರು ನಿರಂತವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಭಾಗದ ಸುತ್ತಮುತ್ತ ನಿರಂತರ ಮಳೆಯಾಗುತ್ತಿದ್ದು, ಹಳ್ಳದಲ್ಲಿನ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಶೋಧಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News