ಗೌರಿ ಲಂಕೇಶ್ ಪ್ರಕರಣ ವಿಚಾರಣೆ: ಮೃತದೇಹ ಮೊದಲು ನೋಡಿದ್ದ ವ್ಯಕ್ತಿಗೆ ಪ್ರತಿವಾದಿ ವಕೀಲರ ಅನಗತ್ಯ ಪ್ರಶ್ನೆಗಳ ಸುರಿಮಳೆ

Update: 2022-07-07 10:39 GMT

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಬುಧವಾರ ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಗೌರಿ ಅವರ ಮೃತದೇಹವನ್ನು ಮೊದಲು ನೋಡಿದ ಸ್ಯಾಟಿಲೈಟ್ ಕೇಬಲ್ ಆಪರೇಟರ್ ಒಬ್ಬರನ್ನು ಪ್ರತಿವಾದಿ ವಕೀಲರು ತೀವ್ರವಾಗಿ ಪ್ರಶ್ನಿಸಿರುವುದು ವಿಶೇಷ ನ್ಯಾಯಾಲಯದ ಆಕ್ರೋಶಕ್ಕೆ ಕಾರಣವಾಯಿತು ಎಂದು thenewsminute.com ವರದಿ ಮಾಡಿದೆ.

ಗೌರಿ ಅವರ ಮನೆ ಪಕ್ಕದಲ್ಲಿದ್ದ ಕೇಬಲ್ ಆಪರೇಟರ್ ಪ್ರಕಾಶ್ ಅವರನ್ನು ಸೆಪ್ಟೆಂಬರ್ 5, 2017ರಂದು ನಡೆದ ಈ ಹತ್ಯೆ ಸಂಬಂಧ ಸಾಕ್ಷಿಗಳಲ್ಲಿ ಒಬ್ಬರನ್ನಾಗಿ ಸಿಟ್ ನಮೂದಿಸಿತ್ತು.

ಆರೋಪಿಗಳ ಪರ ವಕೀಲರು ಬುಧವಾರ ಪ್ರಕಾಶ್ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದು  ನ್ಯಾಯಾಧೀಶ ಸಿ ಎಂ ಜೋಷಿ ಅವರ ಮಧ್ಯ ಪ್ರವೇಶದ ನಂತರವಷ್ಟೇ ತಣ್ಣಗಾಗಿದ್ದರು ಎಂದು ವರದಿ ಉಲ್ಲೇಖಿಸಿದೆ.

ಗೌರಿ ಅವರ ಮೃತದೇಹ ಮೊದಲು ಕಂಡಾಗ ಆ ಪ್ರದೇಶದಲ್ಲಿ ಯಾವುದಾದರೂ ವಾಹನ ಸುಳಿಯಿತೇ ಹಾಗೂ ಆ ಸ್ಥಳದಲ್ಲಿ ಏನು ಮಾಡುತ್ತಿದ್ದಿರಿ ಎಂದು ಪ್ರತಿವಾದಿ ವಕೀಲರು ಪ್ರಶ್ನಿಸಿದಾಗ ಪ್ರಕಾಶ್ ಅವರು ಸ್ಥಳೀಯರೊಬ್ಬರು ಇಂಗ್ಲಿಷ್ ಚಾನಲ್ ಒಂದರ ಪ್ರಸಾರದಲ್ಲಿ ಸಮಸ್ಯೆಯ ಕುರಿತು ದೂರಿದ್ದರಿಂದ ಬಂದಿದ್ದಾಗಿ ಹೇಳಿದರು. ಆಗ ವಕೀಲರು, ಕೇವಲ ಒಂದು ಚಾನಲ್ ಸಂಬಂಧಿ ಪ್ರಶ್ನೆಗೆ ಖುದ್ದಾಗಿ ಹಾಜರಾಗಬೇಕಿತ್ತೇ ಎಂದು ಪ್ರಶ್ನಿಸಿದ್ದರು.

ಈ ಕೊಲೆಗೂ ಕೇಬಲ್ ಆಪರೇಟರ್‍ಗೂ ನಂಟಿದೆ ಎಂದು ಹೇಳುವ ಯತ್ನ ನಡೆಸುತ್ತಿದ್ದೀರಾ? ಎಂದು ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಪ್ರಶ್ನಿಸಿದರು. ಸಾಧ್ಯತೆ ಇದೆ ಎಂದು ವಕೀಲರು ಹೇಳಿದಾಗ, ನಿಜವಾಗಿಯೂ ನೀವು ಗಂಭೀರರಾಗಿ ಚಿಂತಿಸುತ್ತೀರಾದರೆ ಪ್ರಮುಖ ಪ್ರಶ್ನೆಗಳನ್ನು ಕೇಳಿ, ನಾನು ಕೇಳಬೇಕೇ?'' ಎಂದು ನ್ಯಾಯಮೂರ್ತಿಗಳು ಹೇಳಿದಾಗ ಪ್ರತಿವಾದಿ ವಕೀಲರು ಮೌನವಾದರು.

 ಈ ಪ್ರಕರಣದಲ್ಲಿ ಹಿಂದುತ್ವ ಸಂಘಟನೆಗೆ ಸೇರಿದ 13 ಮಂದಿ ಭಾಗಿಯಾಗಿದ್ದಾರೆಂದು ಸಿಟ್ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆಯಲ್ಲದೆ ಕೊಲೆ ಸಂಚನ್ನು ಸನಾತನ ಸಂಸ್ಥಾದ ಸಹಸಂಸ್ಥೆ ಹಿಂದು ಜನಜಾಗೃತಿ ಸಮಿತಿಯ ಮಾಜಿ ನಾಯಕ ಅಮೋಲ್ ಕಾಳೆ ಆಲಿಯಾಸ್ ಟೋಪಿವಾಲ ಆಲಿಯಾಸ್ ಭಾಯಿ ಸಾಹೇಬ್  ರೂಪಿಸಿದ್ದ ಎಂದು ತನಿಖೆಯಿಂದ ಕಂಡುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News