10 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದೇಕೆ: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-07-07 12:43 GMT

ಬೆಂಗಳೂರು, ಜು. 7: ‘ಸರಕಾರ ಹೈಕೋರ್ಟ್‍ಗೆ ಸಲ್ಲಿಸಿರುವ ವರದಿಯೊಂದರ ಪ್ರಕಾರ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಇದು ಕಳವಳಕಾರಿ ಸಂಗತಿ. ಈ ವರದಿ ರಾಜ್ಯದ ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿಯ ಕೈಗನ್ನಡಿ. ಶಿಕ್ಷಣ ವ್ಯವಸ್ಥೆ ಸುಧಾರಿಸಲು ಹಿಂದಿನ ಸರಕಾರಗಳು ಹಲವು ಯೋಜನೆ ಕೈಗೊಂಡಿದ್ದವು. ಆದರೆ ಈಗಿನ ಸರಕಾರ ಶಿಕ್ಷಣವನ್ನು ಕಾಲಕಸದಂತೆ ನೋಡುತ್ತಿದೆ. ಅದರ ಪರಿಣಾಮವಿದು' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿ ನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಮಕ್ಕಳನ್ನು ಶಾಲೆಗೆ ಆಕರ್ಷಿಸಲು ವಿದ್ಯಾಸಿರಿ ಯೋಜನೆ, ಬಿಸಿಯೂಟ ಯೋಜನೆಗಳನ್ನು ಹಿಂದಿನ ಸರಕಾರಗಳು ಜಾರಿಗೆ ತಂದಿವೆ. ಬಿಎಸ್‍ವೈ ಸರಕಾರವಿದ್ದಾಗ ಹೈಸ್ಕೂಲು ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆ ಜಾರಿಗೆ ಬಂತು. ಆದರೆ ಈಗಿನ ಸರಕಾರ ಸೈಕಲ್ ವಿತರಿಸುವುದನ್ನು ಸ್ಥಗಿತಗೊಳಿಸಿದೆ. ಇತ್ತ ಮಕ್ಕಳಿಗೆ ನೀಡುತ್ತಿದ್ದ ಶೂ, ಸಾಕ್ಸ್‍ಗಳಿಗೂ ಕತ್ತರಿ ಹಾಕಿದೆ' ಎಂದು ದೂರಿದ್ದಾರೆ.

‘ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಈ ಹಿಂದಿನ ಸರಕಾರಗಳು ಜಾರಿಗೆ ತಂದಿದ್ದ ಯೋಜನೆಗಳು ಮುಂದುವರೆಯಬೇಕು. ಆದರೆ ಶೂ, ಸಾಕ್ಸ್ ಗಳಿಗೋಸ್ಕರ ಮಕ್ಕಳು ಶಾಲೆಗೆ ಬರುವುದಿಲ್ಲ ಎಂದು ಸಚಿವ ನಾಗೇಶ್ ಉಡಾಫೆ ಮಾತನಾಡುತ್ತಾರೆ. ಹಾಗಾದರೆ, 10ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಏಕೆ ಎಂಬುದಕ್ಕೆ ಸಚಿವ ನಾಗೇಶ್ ಬಳಿ ಉತ್ತರವಿದೆಯೇ?' ಎಂದು ದಿನೇಶ್ ಗುಂಡೂರಾವ್  ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News