ತೀರ್ಪಿನಲ್ಲಿಯ ಅಭಿಪ್ರಾಯಗಳನ್ನು ಹಿಂದೆಗೆದುಕೊಳ್ಳಲು ಸುಪ್ರೀಂಗೆ 92 ಮಾಜಿ ಸರಕಾರಿ ಅಧಿಕಾರಿಗಳ ಆಗ್ರಹ

Update: 2022-07-07 13:30 GMT

ಹೊಸದಿಲ್ಲಿ,ಜು.7: ಕನ್ಸರ್ನ್ಡ್ ಸಿಟಿಝನ್ಸ್ ಗ್ರೂಪ್ ನ ಆಶ್ರಯದಲ್ಲಿ ನಾಗರಿಕ ಸೇವೆಗಳ 92 ಮಾಜಿ ಅಧಿಕಾರಿಗಳು ಝಕಿಯಾ ಜಾಫ್ರಿ ಪ್ರಕರಣದ ತನ್ನ ತೀರ್ಪಿನ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟ್ಲವಾಡ್ ಮತ್ತು ಇತರರ ವಿರುದ್ಧ ವ್ಯಕ್ತಪಡಿಸಿರುವ ಅನಪೇಕ್ಷಿತ ಅಭಿಪ್ರಾಯಗಳನ್ನು ಹಿಂದಗೆದುಕೊಳ್ಳುವಂತೆ ಹೇಳಿಕೆಯೊಂದರಲ್ಲಿ ಆಗ್ರಹಿಸಿದ್ದಾರೆ. 

ಜೂನ್ 24ರಂದು ಝಕಿಯಾ ಜಾಫ್ರಿ ವಿರುದ್ಧ ಗುಜರಾತ್ ಸರಕಾರ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು 2002ರ ದಂಗೆಗಳಲ್ಲಿ ಆಗಿನ ಗುಜರಾತ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ 63 ಜನರಿಗೆ ವಿಶೇಷ ತನಿಖಾ ತಂಡ (ಸಿಟ್)ವು ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿಹಿಡಿದಿತ್ತು.

ಸೆಟ್ಲವಾಡ್ ಬಂಧನವು ತನ್ನ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡುವಂತೆಯೂ ಈ ಅಧಿಕಾರಿಗಳು ಬಹಿರಂಗ ಪತ್ರದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬೆನ್ನಿಗೇ ದಂಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷಾಧಾರಗಳ ಆರೋಪದಲ್ಲಿ ಗುಜರಾತ ಪೊಲೀಸರು ಸೆಟ್ಲವಾಡ್ ಮತ್ತು ಅವರನ್ನು ಬಂಧಿಸಿದ್ದರು. ಸೆಟ್ಲವಾಡ್ ಅವರ ಬೇಷರತ್ ಬಿಡುಗಡೆಗೆ ಆದೇಶಿಸುವಂತೆಯೂ ಈ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.

ಇದೇ ತೀರ್ಪಿನ ಆಧಾರದಲ್ಲಿ ಗುಜರಾತಿನ ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಅವರನ್ನೂ ಬಂಧಿಸಿದ್ದಾರೆ. ಹಳೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ವಿರುದ್ಧವೂ ಪೊಲೀಸರು ಹೊಸದಾಗಿ ಪ್ರಕರಣವನ್ನು ದಾಖಲಿಸಿದ್ದಾರೆ.

ವೌನದ ಪ್ರತಿಯೊಂದೂ ದಿನವು ನ್ಯಾಯಾಲಯದ ಘನತೆಯನ್ನು ತಗ್ಗಿಸುತ್ತದೆ ಹಾಗೂ ಜೀವನದ ಮೂಲಭೂತ ಹಕ್ಕುಗಳನ್ನು ಮತ್ತು ಸರಕಾರದ ಪ್ರಶ್ನಾರ್ಹ ಕ್ರಮಗಳ ವಿರುದ್ಧ ಸ್ವಾತಂತ್ರವನ್ನು ರಕ್ಷಿಸುವ ಸಂವಿಧಾನದ ಮುಖ್ಯ ಆಶಯವನ್ನು ಎತ್ತಿ ಹಿಡಿಯುವ ಅದರ ದೃಢಸಂಕಲ್ಪದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿಕೆಯಲ್ಲಿ ಬೆಟ್ಟುಮಾಡಲಾಗಿದೆ. ‌

ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ,ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್,ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ,ಮಾಜಿ ಆರೋಗ್ಯ ಕಾರ್ಯದರ್ಶಿ ಕೆ.ಸುಜಾತಾ ರಾವ್,ಮಾಜಿ ಐಪಿಎಸ್ ಅಧಿಕಾರಿ ಎ.ಎಸ್.ದುಲತ್ ಮತ್ತು ಮಾಜಿ ಐಎಎಸ್ ಅಧಿಕಾರಿ ಅರುಣಾ ರಾಯ್ ಮತ್ತಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು,ಕನಿಷ್ಠವಾಗಿ ಹೇಳುವುದಾದರೆ ಈ ದೇಶದ ಪ್ರಜೆಗಳಿಗೆ ಆತಂಕವನ್ನುಂಟು ಮಾಡಿದೆ ಮತ್ತು ನಿರಾಶೆಗೊಳಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಮೇಲ್ಮನವಿಯನ್ನು ವಜಾಗೊಳಿಸಿರುವುದು ಮಾತ್ರವಲ್ಲ, ಮೇಲ್ಮನವಿದಾರರು,ಅವರ ವಕೀಲರು ಮತ್ತು ಬೆಂಬಲಿಗರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠವು ವ್ಯಕ್ತಪಡಿಸಿರುವ ಅನಪೇಕ್ಷಿತ ಅಭಿಪ್ರಾಯಗಳೂ ಜನರನ್ನು ಆಶ್ಚರ್ಯಗೊಳಿಸಿವೆ ಎಂದು ಹೇಳಿರುವ ಮಾಜಿ ಸರಕಾರಿ ಅಧಿಕಾರಿಗಳು, ಅತ್ಯಂತ ಅಚ್ಚರಿದಾಯಕ ಹೇಳಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರಕಾರವನ್ನು ಸಮರ್ಥಿಸಿಕೊಂಡ ವಿಶೇಷ ತನಿಖಾ ತಂಡವನ್ನು ಪ್ರಶಂಸಿಸಿದೆ ಮತ್ತು ಸಿಟ್ ತನಿಖಾ ವರದಿಯನ್ನು ಪ್ರಶ್ನಿಸಿದ್ದ ಮೇಲ್ಮನವಿದಾರರನ್ನು ಟೀಕಿಸಿದೆ ಎಂದು ತೀರ್ಪಿನ 88ನೇ ಪ್ಯಾರಾವನ್ನು ಉಲ್ಲೇಖಿಸಿ ಹೇಳಿದ್ದಾರೆ.

‘ತಮ್ಮ ಆದೇಶವನ್ನು ಪುನರ್ಪರಿಶೀಲಿಸುವಂತೆ ಮತ್ತು ಪ್ಯಾರಾ 88ರಲ್ಲಿಯ ಅಭಿಪ್ರಾಯಗಳನ್ನು ಹಿಂದೆಗೆದುಕೊಳ್ಳುವಂತೆ ನಾವು ನ್ಯಾಯಮೂರ್ತಿಗಳನ್ನು ಆಗ್ರಹಿಸುತ್ತೇವೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಮದನ ಲೋಕೂರ್ ಅವರು ಪ್ರತಿಪಾದಿಸಿದ್ದ ಕ್ರಮವನ್ನು ಅಳವಡಿಸಿಕೊಳ್ಳುವಂತೆಯೂ ನಾವು ಅವರನ್ನು ವಿನಂತಿಸುತ್ತೇವೆ’ ಎಂದು ಮಾಜಿ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೆಟ್ಲವಾಡ್ ಅವರನ್ನು ಬಂಧಿಸಬೇಕು ಎನ್ನುವುದು ತನ್ನ ಉದ್ದೇಶವಾಗಿರಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಬೇಕು ಮತ್ತು ಅವರ ಬೇಷರತ್ ಬಿಡುಗಡೆಗೆ ಆದೇಶಿಸಬೇಕು ಎಂದು ನ್ಯಾ.ಲೋಕೂರ್ ಹೇಳಿರುವುದನ್ನು ಈ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಅಹ್ಮದಾಬಾದ್ನ ನ್ಯಾಯಾಲಯವು ಜು.2ರಂದು ಸೆಟ್ಲವಾಡ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News