150ಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಇನ್ನೂ ಆಸ್ತಿ ವಿವರ ಸಲ್ಲಿಸಿಲ್ಲ !

Update: 2022-07-07 16:59 GMT

ಬೆಂಗಳೂರು, ಜು. 7: ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಲು ಗಡುವು ಮುಕ್ತಾಯವಾಗಿದ್ದರೂ ಇನ್ನೂ 150ಕ್ಕೂ ಹೆಚ್ಚು ಮಂದಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

‘ಕರ್ನಾಟಕ ಲೋಕಾಯುಕ್ತ ನಿಯಮಾವಳಿ-1984' ಸೆಕ್ಷನ್ 7(1)ರ ಪ್ರಕಾರ ಪ್ರತಿವರ್ಷ ಜೂನ್ ಅಂತ್ಯದೊಳಗೆ ಶಾಸಕರು ಮತ್ತು ಮೇಲ್ಮನೆ ಸದಸ್ಯರು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ. ಆದರೆ, ಈವರೆಗೂ 100ಕ್ಕೂ ಅಧಿಕ ಮಂದಿ ಶಾಸಕರು ಹಾಗೂ 45ಕ್ಕೂ ಹೆಚ್ಚು ಮಂದಿ ಮೇಲ್ಮನೆ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

224 ಮಂದಿ ಚುನಾಯಿತ ಶಾಸನಸಭೆ ಸದಸ್ಯರ ಪೈಕಿ ಒಟ್ಟು 113 ಮಂದಿ ಶಾಸಕರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಅದೇ ರೀತಿಯಲ್ಲಿ ವಿಧಾನ ಪರಿಷತ್ತಿನ 75 ಮಂದಿ ಸದಸ್ಯರ ಪೈಕಿ 45ಕ್ಕೂ ಅಧಿಕ ಮಂದಿ ಮೇಲ್ಮನೆ ಸದಸ್ಯರು ತಾವು ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರಗಳ ಸಲ್ಲಿಸದೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಲೋಕಾಯುಕ್ತ ಸಂಸ್ಥೆಯಿಂದ ಈ ಕುರಿತು ಮಾಹಿತಿ ಪಡೆದಿದ್ದು, ‘ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಅಬಕಾರಿ ಸಚಿವ ಕೆ. ಗೋಪಾಲಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೇರಿದಂತೆ ಇನ್ನೂ ಹಲವು ಸಚಿವರು ಹಾಗೂ ಶಾಸಕರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಆ ಪೈಕಿ ಕೆಲವರು ಕಾಲಾವಕಾಶ ಕೋರಿದ್ದಾರೆ' ಎಂಬುದು ಬೆಳಕಿಗೆ ಬಂದಿದೆ.

'ಕ್ರಿಮಿನಲ್ ಕೇಸು ದಾಖಲಿಸಿ'
‘ಶಾಸಕರು ಮತ್ತು ಮೇಲ್ಮನೆ ಸದಸ್ಯ ಜೂನ್ 30ರೊಳಗೆ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ. ಆಸ್ತಿ ವಿವರ ಸಲ್ಲಿಕೆ ಮಾಡದಿದ್ದರೆ ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರಲು ಮಾತ್ರವೇ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ಆಸ್ತಿ ವಿವರ ಸಲ್ಲಿಕೆ ಮಾಡದ ಜನಪ್ರತಿನಿಧಿಗಳ ವಿರುದ್ಧ ಐಪಿಸಿ ಸೆಕ್ಷನ್ 176 ಮತ್ತು 177ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು'
-ಎಚ್.ಎಂ.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News