ಕೊಡಗಿನಲ್ಲಿ ಭಾರೀ ಮಳೆ: ಮನೆಗಳಿಗೆ ಹಾನಿ, ಸಂಚಾರಕ್ಕೆ ಅಡಚಣೆ

Update: 2022-07-07 15:51 GMT

ಮಡಿಕೇರಿ ಜು.7 : ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆ ಕೊಡಗಿನಲ್ಲಿ ಆತಂಕ ಸೃಷ್ಟಿಸಿದೆ. ಬೆಟ್ಟ, ಗುಡ್ಡಗಳ ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿದ್ದು, ಹೆದ್ದಾರಿಯಲ್ಲಿ ಬರೆಗಳು ಕುಸಿಯುತ್ತಲೇ ಇರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶುಕ್ರವಾರ ಬೆಳಗ್ಗಿನ 8.30ರವರೆಗೆ ಜಿಲ್ಲೆಯಾದ್ಯಂತ 3ನೇ ಬಾರಿಗೆ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 115.6 ಮಿ.ಮೀ.ನಿಂದ 204 ಮಿ.ಮೀ.ವರೆಗೆ ವ್ಯಾಪಕ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಮುಂದುವರೆದಿರುವ ಹಿನ್ನೆಲೆ ಅಲ್ಲಲ್ಲಿ ಭೂ ಕುಸಿತ, ಮನೆ ಹಾನಿ, ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. 

ಕಾವೇರಿ ನದಿ ಪ್ರವಾಹ ಮಟ್ಟ ತಲುಪಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭಾಗಮಂಡಲ-ಅಯ್ಯಂಗೇರಿ ರಸ್ತೆ ಕಳೆದ 4 ದಿನಗಳಿಂದ ನದಿ ನೀರಿನ ಪ್ರವಾಹದಲ್ಲಿ ಮುಳುಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಮೂರ್ನಾಡು-ನಾಪೋಕ್ಲು, ನಾಪೋಕ್ಲು-ಬೊಳಿಬಾಣೆ, ಸಿದ್ದಾಪುರ ಸಮೀಪದ ಕರಡಿಗೋಡು, ನೆಲ್ಯಹುದಿಕೇರಿ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಗಾಳಿ ಸಹಿತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮರ ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದ ಬಗ್ಗೆಯೂ ವರದಿಯಾಗಿದೆ. ದುರಸ್ಥಿ ಕಾರ್ಯಗಳ ನಡುವೆಯೇ ಮಳೆಗೆ ಮರಗಳು ಮುರಿದು ಬೀಳುತ್ತಿರುವ ಪರಿಣಾಮ ಹಲವು ಗ್ರಾಮಗಳು ಕತ್ತಲಿನಲ್ಲಿ ಮುಳುಗಿವೆ.

ಮನೆಗಳಿಗೆ ಹಾನಿ
ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ನಿವಾಸಿ ಖದೀಜ ಎಂಬವರ ಮನೆ ಮೇಲೆ ಬೀಟೆ ಮರ ಮುರಿದು ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ಈ ಘಟನೆಯಲ್ಲಿ ಖದೀಜ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುಂಟಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿ ದೇಜಪ್ಪ ಎಂಬವರಿಗೆ ಸೇರಿದ ಮನೆ ಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದ್ದು, ವಾಸಕ್ಕೆ ಯೋಗ್ಯವಿಲ್ಲದಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಭಾರ ಮಳೆ ಸುರಿಯುತ್ತಿದ್ದು, ಕೊಟ್ಟೂರು ಗ್ರಾಮದ ರಾಜು ಎಂಬವರ ಮನೆಯ ಪಕ್ಕದಲ್ಲೇ ಬರೆ ಜರಿದು ಬಿದ್ದು, ಅಪಾಯ ಸ್ಥಿತಿ ಎದುರಾಗಿದೆ. ಈ ಕಾರಣದಿಂದ ಮನೆ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಅಲ್ಲಲ್ಲಿ ಬರೆ ಕುಸಿತ
ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿಯ ಕರ್ತೋಜೆ ಬಳಿ 2 ಬಾರಿ ಲಘು ಭೂ ಕುಸಿದು ಕೆಲಕಾಲ ರಸ್ತೆ ಸಂಪರ್ಕ ಬಂದ್ ಆಗಿತ್ತು. ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣನ್ನು ತೆರವುಗೊಳಿಸಿ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮಧ್ಯಾಹ್ನದ ವೇಳೆ ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿಯೂ ಭೂ ಕುಸಿದು ಸಂಚಾರ ವ್ಯತ್ಯಯವಾಗಿತ್ತು. ಲೋಕೋಪಯೋಗಿ ಇಲಾಖೆ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿದೆ.  ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿ ಗ್ರಾಮದ ಕುಮಾರಸ್ವಾಮಿ ಬಡಾವಣೆಗೆ ತೆರಳುವ ಮಾರ್ಗದಲ್ಲಿ  ಅಲ್ಪ ಪ್ರಮಾಣದ ಭೂ ಕುಸಿತವಾಗಿದ್ದು, ಪಂಚಾಯಿತಿ ವತಿಯಿಂದ ಮಣ್ಣನ್ನು ತೆರವುಗೊಳಿಸಲಾಗಿದೆ. ಮಡಿಕೇರಿ ಭಾಗಮಂಡಲ ರಸ್ತೆಯ ಬೆಟ್ಟಗೇರಿ ಬಳಿ ಮರ ರಸ್ತೆಗೆ ಮುರಿದು ಬಿದ್ದ ಪರಿಣಾಮ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಎಂದಿನಂತೆ ಮುಂದುವರೆಯಿತು.

ವಿದ್ಯುತ್ ಕಂಬಗಳಿಗೆ ಹಾನಿ
ಸುಂಟಿಕೊಪ್ಪ ಹೋಬಳಿಯ ಬೆಟ್ಟಗೇರಿ ನಾಕೂರು ಶಿರಂಗಾಲ, ಪಣ್ಯ ಶ್ರೀದೇವಿ ಭೂತನಕಾಡು, ಮಳೂರು ಹೋರೂರು ವ್ಯಾಪ್ತಿಯಲ್ಲಿ ಮಳೆಯ ರಭಸಕ್ಕೆ ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. 35 ಕ್ಕೂ ಹೆಚ್ಚು ಕಂಬಗಳು ಬಿದ್ದಿದ್ದು, 15ಕ್ಕೂ ಹೆಚ್ಚು ಕಂಬಗಳು ಬಳಕೆಗೆ ಬಾರದಂತೆ ಮುರಿದು ಹೋಗಿವೆ. ಸೆಸ್ಕ್ ನಿಗಮಕ್ಕೆ ಅಪಾರ ನಷ್ಟ ಸಂಭವಿಸಿದೆ ಎಂದು ಇಲಾಖೆ ಕಿರಿಯ ಅಭಯಂತರ ಜೈದೀಪ್ ತಿಳಿಸಿದ್ದಾರೆ.

ಹೆಚ್ಚು ಮಳೆ
ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದ ದಾಖಲೆಯ ಮಳೆಯನ್ನು ಈ ಬಾರಿಯ ಮಳೆ ಸರಿಗಟ್ಟಿದೆ. ಈ ಬಾರಿ ಜನವರಿಯಿಂದ ಜು.7ರ ಬೆಳಗಿನ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಾದ್ಯಂತ 1081.9 ಮಿ.ಮೀ ಮಳೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 951.61 ಮಿ.ಮೀ ಮಳೆಯಾಗಿತ್ತು. 

ಮಡಿಕೇರಿ ತಾಲೂಕಿಗೆ ಈ ವರ್ಷ 1588.02 ಮಿ.ಮೀ, ಕಳೆದ ವರ್ಷ 1399.64 ಮಿ.ಮೀ ಮಳೆಯಾಗಿತ್ತು. ವಿರಾಜಪೇಟೆ ವ್ಯಾಪ್ತಿಯಲ್ಲಿ ಈ ವರ್ಷ 869.64 ಮಿ.ಮೀ ಮಳೆ ಸುರಿದರೆ, ಕಳೆದ ವರ್ಷ 827.38 ಮಿ.ಮೀ. ಮಳೆ ದಾಖಲಾಗಿತ್ತು. ಇನ್ನು ಸೋಮವಾರಪೇಟೆ ತಾಲೂಕಿಗೆ ಈ ವರ್ಷ ಜನವರಿಯಿಂದ ಜು.7ರ ಬೆಳಗಿನ ವರೆಗೆ 788.04 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 627.80 ಮಳೆ ಸುರಿದಿತ್ತು. ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ  10,015 ಕ್ಯೂಸೆಕ್ ನೀರಿನ ಒಳಹರಿವು ಕಂಡು ಬಂದಿದ್ದು, ನದಿ ಪಾತ್ರಕ್ಕೆ 15,560 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.

ಶಾಲಾ ಕಾಲೇಜುಗಳಿಗೆ ರಜೆ
ಮತ್ತೆ ಆರೆಂಜ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜು.8 ರಂದು ಕೂಡ ಅಂಗನವಾಡಿ ಹಾಗೂ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News