ದೇಶ ಅಧೋಗತಿಗೆ ಬಂದಿರುವುದೇ ಕಾಂಗ್ರೆಸ್ ನಿಂದ: ಸಿಎಂ ಬೊಮ್ಮಾಯಿ

Update: 2022-07-07 16:40 GMT

ಬೆಂಗಳೂರು: ಕಾಂಗ್ರೆಸ್ ನವರು ಮಹಾತ್ಮಾಗಾಂಧಿ ಅವರ ಹೆಸರನ್ನು ಬಹಳಷ್ಟು ದುರುಪಯೋಗಪಡಿಸಿಕೊಂಡಿದ್ದಾರೆ. ಈ ದೇಶ ಅಧೋಗತಿಗೆ ಬಂದಿರುವುದೇ ಕಾಂಗ್ರೆಸ್ಸಿನಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಅವರ ಕಾಲದಲ್ಲಿ ಪಿ.ಎಸ್.ಐ ಪ್ರಕರಣದಲ್ಲಿ ಡಿಐಜಿ ಒಬ್ಬರು ಭಾಗಿಯಾಗಿದ್ದರು. ಕಾಂಗ್ರೆಸ್ ಏನೂ ಮಾಡಲಿಲ್ಲ. ಎಫ್.ಐ.ಆರ್ ನಲ್ಲಿ  ಹೆಸರು ಬಂದರೂ ಕೂಡ ಅವರ ವಿಚಾರಣೆ, ಬಂಧನ, ಅಮಾನತು ಯಾವುದನ್ನೂ ಮಾಡಲಿಲ್ಲ. ಈಗ ನಾನು ಬಂದ ನಂತರ ಕಾನೂನು ಕ್ರಮ ಜರುಗಿಸಿದ್ದೇನೆ. ಇವರು ಜನರ ಬಳಿ ಕ್ಷಮೆಯಾಚಿಸಬೇಕು. ಇದೊಂದು ಸರ್ಕಾರ ನ್ಯಾಯನಿಷ್ಠುರವಾಗಿ ಎಷ್ಟು ದೊಡ್ಡವರದ್ದರೂ ಶಿಕ್ಷೆಗೊಳಪಡಿಸುತ್ತಿದೆ ಎಂದರು.

ಅವರು ಪಕ್ಷಪಾತ, ಲಾಬಿಗಳಿಗೆ ಮಣಿದು ಅಪರಾಧಿಗಳನ್ನು ಹಾಗೂ ಪ್ರಕರಣಗಳನ್ನು ಮುಚ್ಚಿಹಾಕಿ ಅಪರಾಧಿ ಸ್ಥಾನದಲ್ಲಿದ್ದಾರೆ. ಅವರು ಇದರಿಂದ ಪಾಠ ಕಲಿಯಬೇಕು. ಇನ್ನೊಬ್ಬರಿಗೆ ಪಾಠ ಹೇಳುವ ಅಧಿಕಾರ ಅವರಿಗಿಲ್ಲ. ಇದೊಂದೇ ಅಲ್ಲ,  ಕೆ.ಪಿ.ಎಸ್.ಇ ಯಲ್ಲಿ ಸರ್ಕಾರಿ ಅಭಿಯೋಜಕರ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆಯನ್ನು 61 ಜನರದ್ದು ಹೊರಗಿನಿಂದ ಬರೆಸಿದ್ದು ಎನ್ನುವುದು ನ್ಯಾಯಾಲಯದಲ್ಲಿ ನಿರೂಪಿತವಾಗಿ ನ್ಯಾಯಾಲಯ ಆದೇಶಿಸಿತು. ಒಬ್ಬರನ್ನೂ ಅವರು ಅಮಾನತು ಮಾಡಲಿಲ್ಲ. ನಾನು ಗೃಹ ಸಚಿವನಾದ ನಂತರ ಅಮಾನತು ಮಾಡಿದೆ. ಅವರಿಂದ 18 ಕೋಟಿ ರೂ.ಗಳನ್ನು ವಸೂಲು ಮಾಡಿದ್ದರು.  ಇದು ಕಾಂಗ್ರೆಸ್ ವೈಖರಿ. ಈಗ  ನ್ಯಾಯಾಂಗ ತನಿಖೆ ಕೇಳುತ್ತಿದಾರೆ. ನಮ್ಮನ್ನು ಕೇಳುವವರು ಹಿಂದೆ ಅವರ ಎಲ್ಲಾ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಏಕೆ ವಹಿಸಲಿಲ್ಲ.  ಅವರು ಯಾಕೆ ಮಾಡಲಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು ಎಂದರು.

ಕೂಡಲೇ  20 ಜನ ಪೋಲಿಸ್ ಅಧಿಕಾರಿಗಳನ್ನು ಬಂಧಿಸಿರುವುದು ಸಿಐಡಿ ಇರುವುದರಿಂದ ಆಗಿದೆ. ನ್ಯಾಯಾಂಗ ತನಿಖೆಯಾದರೆ  ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಈ ತನಿಖೆ ನ್ಯಾಯಾಲಯದಿಂದ ಮೇಲ್ವಿಚಾರಣೆಗೆ ಒಳಪಟ್ಟಿದೆ. ನ್ಯಾಯಾಲಯಕ್ಕೆ ಪ್ರಗತಿಯ ಬಗ್ಗೆ ವರದಿ ಸಲ್ಲಿಸಲಾಗುತ್ತಿದೆ. ನಮ್ಮ ಸರ್ಕಾರ ಸಂಪೂರ್ನವಾಗಿ ನಿಷ್ಪಕ್ಷಪಾತ ತನಿಖೆಯನ್ನು ನಿಷ್ಠುರವಾಗಿ, ಯಾವ ದಯೆ, ದಾಕ್ಷಿಣ್ಯವಿಲ್ಲದೆ, ಕ್ರಮ ಕೈಗೊಳ್ಳು ಮುಕ್ತವಾದ ಅಧಿಕಾರವನ್ನು ತನಿಕಾಧಿಕಾರಿಗಳಿಗೆ  ಕೊಟ್ಟಿದ್ದರಿಂದ ಈ ಪ್ರಕರಣ ಬಯಲಿಗೆ ಬಂದಿದೆ. ಈಗಾಗಲೇ ಅವರ ಕಾಲದ ಹಗರಣಗಳು ಹೊರಗೆ ಬಂದಿವೆ, ಕಾಲಕಾಲಕ್ಕೆ ಇನ್ನಷ್ಟು ಹೊರಬರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News