PSI ಹಗರಣ: ರಾಜ್ಯ ಸರಕಾರಕ್ಕೆ ಕಾಂಗ್ರೆಸ್ ಪಂಚ ಆಗ್ರಹ

Update: 2022-07-13 13:10 GMT

ಬೆಂಗಳೂರು, ಜು.13: ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ಬಿಜೆಪಿ ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಸರಕಾರಕ್ಕೆ ಪಂಚ ಆಗ್ರಹಗಳನ್ನು ಮಾಡಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಿಎಸ್‍ಐ ಅಕ್ರಮ ಪ್ರಕರಣದ ತನಿಖೆಯನ್ನು ಕಲಬುರಗಿಯ ಒಂದು ಪರಿಕ್ಷಾ ಕೇಂದ್ರದ ಅಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದು, ರಾಜ್ಯದ ಇತರೆ ಕೇಂದ್ರಗಳಲ್ಲಿನ ಅಕ್ರಮದ ಕುರಿತು ತನಿಖೆ ಯಾವಾಗ? ಅದಕ್ಕೆ ಕಾಲಮಿತಿ ಏನು? ರಾಜ್ಯದ ಇತರೆ ಭಾಗಗಳಲ್ಲಿ ನಡೆದಿರುವ ಅಕ್ರಮದ ತನಿಖೆಯೂ ತ್ವರಿತಗತಿಯಲ್ಲಿ ಆಗಬೇಕು ಎಂದು ಆಗ್ರಹಿಸಿದರು.

ಅನ್ನಪೂರ್ಣೇಶ್ವರಿ ನಗರದಲ್ಲಿ ದಾಖಲಾಗಿರುವ ದೂರಿನ ಪ್ರತಿಯನ್ನೇ ಮುಚ್ಚಿಹಾಕಿ ಪ್ರಕರಣವನ್ನೇ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಹಗರಣದ ತನಿಖೆ ವಿಳಂಬ ಹಾಗೂ ಮುಚ್ಚಿಹಾಕುವ ಪ್ರಯತ್ನವನ್ನು ನಿಲ್ಲಿಸಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಎಡಿಜಿಪಿ ಅಮೃತ್ ಪೌಲ್ ಅವರ ಹೇಳಿಕೆಯನ್ನು ಸೆಕ್ಷನ್ 164 ಪ್ರಕಾರ ನ್ಯಾಯಾಲಯದ ಮುಂದೆ ದಾಖಲಿಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಎಸ್‍ಡಿಎ, ಎಫ್‍ಡಿಎ, ಪಿಡಬ್ಲ್ಯೂಡಿ, ಪೊಲೀಸ್ ಕಾನ್‍ಸ್ಟೇಬಲ್ ನೇಮಕಾತಿ ಅಕ್ರಮದ ಕುರಿತು ಕೂಡಲೇ ತನಿಖೆ ಆಗಬೇಕು. ಈ ಸರಕಾರ ಬಂದ ನಂತರ ಆಗಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.

ತನಿಖಾಧಿಕಾರಿಗಳು ಈ ಪ್ರಕರಣದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಅಕ್ರಮ ನಡೆದಿದ್ದು, ಇಲ್ಲಿ ಎರಡು ವಿಚಾರವಾಗಿ ದೂರು ದಾಖಲಾಗಿವೆ. ಒಎಂಆರ್ ಪತ್ರಿಕೆ ತಿದ್ದುಪಡಿ ಮಾಡಲಾಗಿದೆ ಎಂಬುದು ಮೊದಲ ಆರೋಪವಾದರೆ, ಬ್ಲ್ಯೂ ಟೂತ್ ಬಳಸಿ ಅಕ್ರಮ ನಡೆಸಲಾಗಿದೆ ಎಂದು ಮತ್ತೊಂದು ಆರೋಪವಾಗಿದೆ ಎಂದು ಅವರು ಹೇಳಿದರು.

ಈ ಶಾಲೆಯಲ್ಲಿ ಪರೀಕ್ಷೆ ನಡೆಯುವಾಗ ಪ್ರಾಂಶುಪಾಲರು ಹಾಗೂ ಪರೀಕ್ಷಾ ಮೇಲ್ವಿಚಾರಕರಿಗೆ ಮಾತ್ರ ಅವಕಾಶವಿರುತ್ತದೆ. ಆದರೆ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ತಾವೇ ಶಾಲೆಯ ಪ್ರಾಂಶುಪಾಲೆ ಎಂದು ಹೇಳಿ ಅಧಿಕಾರಿಗಳ ದಾರಿ ತಪ್ಪಿಸಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆಯುವಂತೆ ನೋಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಪರೀಕ್ಷೆ ವೇಳೆ ಅಕ್ರಮ ನಡೆಸಲು ಅವಕಾಶ ಮಾಡಿಕೊಡುವುದಕ್ಕಾಗಿ ಪ್ರತಿ ಅಭ್ಯರ್ಥಿಗಳಿಂದ 30 ಲಕ್ಷ, 25 ಲಕ್ಷ ರೂ.ಗಳನ್ನು ಪಡೆಯಲಾಗಿದೆ. ಪರೀಕ್ಷಾ ಮೇಲ್ವಿಚಾರಕರಿಗೆ ಭತ್ತೆ 1 ಸಾವಿರ ರೂ.ಜತೆಗೆ ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ 4 ಸಾವಿರ ರೂ.ನೀಡಲಾಗಿದೆ.

ಆರೋಪಪಟಿಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಸಹಕಾರ ಇಲ್ಲದೆ ಈ ಅಕ್ರಮ ನಡೆಯಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಆರ್.ಡಿ.ಪಾಟೀಲ್ ಎಂಬುವವರು ಬೇರೆಯವರಿಂದ 50 ಲಕ್ಷ ರೂ.ಪಡೆಯಲಾಗುವುದು. ನೀವು ಸಂಬಂಧಿಯಾಗಿರುವುದರಿಂದ 30 ಲಕ್ಷ ರೂ.ನೀಡಿದರೆ ಸಾಕು. ಬೇರೆ ಯಾರಾದರೂ ಇದ್ದರೆ ಅವರನ್ನು ಕರೆತನ್ನಿ ಎಂದು ಅಭ್ಯರ್ಥಿಗೆ ಹೇಳಿರುವ ವಿಚಾರವನ್ನು ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕೇವಲ ಈ ಒಂದು ಪರಿಕ್ಷಾ ಕೇಂದ್ರದಲ್ಲೇ ಸುಮಾರು 3.5 ಕೋಟಿಯಷ್ಟು ಅಕ್ರಮ ನಡೆದಿದ್ದು, ರಾಜ್ಯದ ಇತರೆ ಕೇಂದ್ರಗಳಲ್ಲಿ ಎಷ್ಟು ಅಕ್ರಮ ನಡೆದಿರಬಹುದು. ಈ ನೇಮಕಾತಿಯಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಎಷ್ಟು ಮಂದಿ ವಿಚಾರಣೆಗೆ ಆಗಮಿಸಿದ್ದಾರೆ? ಈ ಅಕ್ರಮ ಬಯಲಿಗೆಳೆದವರಿಗೆ ನೋಟಿಸ್ ಜಾರಿ ಮಾಡುವ ಸರಕಾರ ಈ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿದೆಯೇ? ಎಂದು ಅವರು ಪ್ರಶ್ನಿಸಿದರು.

ಆರೋಪಿಗಳಿಂದ ಎಷ್ಟು ಮಾಹಿತಿ ಬೇಕೋ ಅಷ್ಟನ್ನು ಮಾತ್ರ ದಾಖಲಿಸಿಕೊಳ್ಳಲಾಗಿದೆ. ಇದು ಸರಕಾರದ ರಕ್ಷಣೆಗೆ ನಡೆಯುತ್ತಿರುವ ತನಿಖೆಯೇ ಹೊರತು, ಯುವಕರ ಭವಿಷ್ಯ ರಕ್ಷಣೆಗೆ ಅಲ್ಲ. ಕೆಪಿಎಸ್ಸಿ ಮೂಲಕ 3,702 ಹುದ್ದೆಗಳ ನೇಮಕ ನಡೆದಿದೆ. ಇದರಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಸರಕಾರದಲ್ಲಿನ ಭ್ರಷ್ಟಾಚಾರದ ವಿಚಾರಣೆಗೆ ತ್ವರಿತ ಗತಿಯ ನ್ಯಾಯಾಲಯ ಸ್ಥಾಪಿಸುವುದು ಉತ್ತಮ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಸಹ ಮುಖ್ಯಸ್ಥ ಮನ್ಸೂರ್ ಅಲಿ ಖಾನ್, ಉಪಾಧ್ಯಕ್ಷ ರಮೇಶ್ ಬಾಬು, ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಉಪಸ್ಥಿತರಿದ್ದರು

ಯತ್ನಾಳ್ ವಿಚಾರಣೆ ಯಾವಾಗ?

ಪಿಎಸ್‍ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಮಗನ ಕೈವಾಡವಿದೆ. ಈ ಅಕ್ರಮದಲ್ಲಿ ನಡೆದಿರುವ ಅವ್ಯವಹಾರದ ಸಂಪೂರ್ಣ ದಾಖಲೆ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸರಕಾರದ ವಿರುದ್ಧ ನೇರವಾಗಿ ಹಾಗೂ ಬಹಿರಂಗವಾಗಿ ಆರೋಪ ಮಾಡುತ್ತಿರುವ ಯತ್ನಾಳ್ ಅವರ ವಿಚಾರಣೆಯನ್ನು ಯಾವಾಗ ಮಾಡುತ್ತೀರಾ? 

-ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News