ಬೆಂಗಳೂರು ಡಿಸಿ ಕಚೇರಿಯಲ್ಲಿ ಲಂಚ ಪ್ರಕರಣ: ಸುಪ್ರೀಂ ಸೂಚನೆ ಮೇರೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2022-07-13 14:22 GMT

ಬೆಂಗಳೂರು, ಜು.13: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಉಪತಹಶೀಲ್ದಾರ್ ಪಿ.ಎಸ್.ಮಹೇಶ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಸೋಮವಾರ(ಜು.18)ಕ್ಕೆ ಮುಂದೂಡಿತು. 

ಪಿ.ಎಸ್.ಮಹೇಶ್ ಅವರ ಜಾಮೀನು ಅರ್ಜಿಯ ವಿಚಾರಣೆ ಬುಧವಾರ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬಂದಿತು. ಆಗ ಎಸಿಬಿ ಪರ ವಕೀಲರು, ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಎಸಿಬಿ ಮೇಲ್ಮನವಿ ಅರ್ಜಿ ವಿಚಾರಣೆ ಶುಕ್ರವಾರ ನಿಗದಿಯಾಗಿದೆ. ಅಲ್ಲಿಯವರೆಗೆ ಇಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ ಎಂದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿತು.

ಲಂಚ ಪ್ರಕರಣದ ಸಂಬಂಧ ಜು.11ರಂದು ನ್ಯಾಯಮೂರ್ತಿ ಸಂದೇಶ್ ಅವರು ಹೊರಡಿಸಿರುವ ಪ್ರತಿ ಇನ್ನೂ ಲಭ್ಯವಾಗದ ಹಿನ್ನೆಲೆಯಲ್ಲಿ ಮೂರು ದಿನ ಎಸಿಬಿ ವಿಚಾರ ಕುರಿತ ವಿಚಾರಣೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಮಂಗಳವಾರ ನಿರ್ದೇಶನ ನೀಡಿತ್ತು. 

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ನ್ಯಾ.ಸಂದೇಶ್ ಅವರು, ಎಸಿಬಿ ವಿರುದ್ಧ ಹಾಗೂ ತಮ್ಮ ವಿರುದ್ಧ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್‍ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿ ಜು.12ರಂದು ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು.  

ಎಸಿಬಿ ಎಡಿಜಿಪಿ ಸೀಮಂತ್‍ಕುಮಾರ್‍ಸಿಂಗ್ ಪರ ವಕೀಲರು ವಾದ ಮಂಡನೆ ಮಾಡಿದರು. ಸುಪ್ರೀಂ ನ್ಯಾಯಪೀಠವು, ಜು.11ರಂದು ಹೊರಡಿಸಿರುವ ಆದೇಶವನ್ನು ಪರಿಶೀಲಿಸಬೇಕಿರುವುದರಿಂದ ವಿಚಾರಣೆಯನ್ನು 3 ದಿನಗಳ ಕಾಲ ಮುಂದೂಡುವಂತೆ ನ್ಯಾ.ಸಂದೇಶ್ ಅವರಿಗೆ ಸೂಚಿಸಲಾಗುವುದು. ಗುರುವಾರ ವಿಚಾರಣೆಯನ್ನು ಕೈಗೆತ್ತಿಗೊಳ್ಳಲಾಗುವುದು ಎಂದು ಆದೇಶಿಸಿತು.      

ಕಳೆದ ಲಂಚ ಪ್ರಕರಣದ ವಿಚಾರಣೆ ವೇಳೆ ನ್ಯಾ.ಸಂದೇಶ್ ಅವರು, ಎಸಿಬಿಯನ್ನು ಕಲೆಕ್ಷನ್ ಸೆಂಟರ್ ಹಾಗೂ ಅದರ ವರಿಷ್ಠನನ್ನು ಕಳಂಕಿತ ಅಧಿಕಾರಿ ಎಂಬುದಾಗಿ ಹೇಳಿದ್ದರು. ತನಗೆ ವರ್ಗಾವಣೆಯ ಪರೋಕ್ಷ ಬೆದರಿಕೆಯನ್ನು ಒಡ್ಡಲಾಗಿತ್ತು ಹಾಗೂ ಆ ಬೆದರಿಕೆಯ ಸಂದೇಶವನ್ನು ತನಗೆ ಮತ್ತೋರ್ವ ಹಾಲಿ ನ್ಯಾಯಮೂರ್ತಿಗಳ ಮೂಲಕ ರವಾನಿಸಲಾಗಿತ್ತು ಎಂದು ತಿಳಿಸಿದ್ದರು. 

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ರಿತುರಾಜ್ ಅವಸ್ಥಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮತ್ತೋರ್ವ ನ್ಯಾಯಮೂರ್ತಿ ಮೂಲಕ ಈ ಬೆದರಿಕೆಯ ಸಂದೇಶವನ್ನು ರವಾನಿಸಲಾಗಿತ್ತು ಎಂದು ನ್ಯಾ.ಸಂದೇಶ್ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News