ರಾಜ್ಯದಲ್ಲಿ 5 ಸಾವಿರ ಶಾಲೆಗಳ ದುರಸ್ತಿ: ಸಚಿವ ಮುರುಗೇಶ್ ನಿರಾಣಿ

Update: 2022-07-13 14:26 GMT

ಕಲಬುರಗಿ, ಜು.13: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಮ್ಮ ಸರಕಾರ ರಾಜ್ಯದಲ್ಲಿ 5 ಸಾವಿರ ಶಾಲೆಗಳನ್ನು ದುರಸ್ತಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಯುದ್ದೋಪಾದಿಯಲ್ಲಿ ಈ ಕಾರ್ಯ ಸಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಬುಧವಾರ ಅಫ್ಝಲ್‍ಪುರ ತಾಲೂಕಿನ ಮಾತೋಳಿ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತದಿಂದ ಆಗಿರುವ ಹಾನಿ ವೀಕ್ಷಿಸಿ, ಮನೆಯ ಮಾಲಕ ಪಂಡಿತ್ ತಂ.ಶಿವಯೋಗಿ ಅವರಿಗೆ ಶಾಸಕ ಎಂ.ವೈ.ಪಾಟೀಲ್ ಅವರೊಂದಿಗೆ 10 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು.

ಶಾಲೆ ಕಟ್ಟಡ ಸುಸ್ಥಿತಿ ಕುರಿತು ಲೋಕೋಪಯೋಗಿ ಇಲಾಖೆಯಿಂದ ಒಂದು ವಾರದೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಬಿ.ಇ.ಓಗಳಿಗೆ ಸೂಚಿಸಿಲಾಗಿದೆ. ಉತ್ತಮ ಸ್ಥಿತಿಯಲ್ಲಿರುವ ಶಾಲೆಗಳಿಗೆ ಮಳೆ ಬಂದರೆ ರಜೆ ನೀಡುವುದಿಲ್ಲ. ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದಲ್ಲಿ ರಜೆಗೆ ಪರಿಗಣಿಸಲಾಗುವುದು ಎಂದು ಮುರುಗೇಶ್ ನಿರಾಣಿ ಹೇಳಿದರು.

ಎರಡು ವರ್ಷದ ಹಿಂದೆ ಅಫ್ಝಲ್‍ಪುರ ತಾಲೂಕಿನ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ ಲಕ್ಷಾಂತರ ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ಎಂದೂ ಕಾಣದ ಪ್ರವಾಹಕ್ಕೆ ಜಿಲ್ಲೆ ಸಾಕ್ಷಿಯಾಗಿತ್ತು. ಇದು ಮತ್ತೆ ಮರುಕಳಿಸದಂತೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತೆ ಕೈಗೊಂಡಿದೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದ ಉಜನಿ ಜಲಾಶಯದ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ನಮ್ಮ ಅಧಿಕಾರಿಗಳು ಸತತ ಸಂಪರ್ಕ ಸಾಧಿಸಲು ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಪ್ರತಿ ಗಂಟೆಗೆ ಆ ರಾಜ್ಯದಲ್ಲಿನ ಡ್ಯಾಂನಿಂದ ನೀರು ಹರಿಬಿಡುವ ಮಾಹಿತಿ ನಮಗೆ ಸಿಗಲಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಅತಿವೃಷ್ಟಿಯಿಂದ ಮಾನವ, ಪ್ರಾಣಿ ಹಾನಿಯಾದಲ್ಲಿ ಎಸ್.ಡಿ.ಆರ್.ಎಫ್/ಎನ್.ಡಿ.ಅರ್.ಎಫ್ ಮಾರ್ಗಸೂಚಿ ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಮನೆ ಕುಸಿದ ಪ್ರಕರಣಗಳಲ್ಲಿ ಶೇ.75ರಷ್ಟು ಮೇಲ್ಪಟ್ಟ ಹಾನಿಗೆ 5 ಲಕ್ಷ ರೂ., ಶೇ.25 ರಿಂದ 50ರಷ್ಟು ಹಾನಿಗೆ 3 ಲಕ್ಷ ರೂ. ಹಾಗೂ ಶೇ.15 ರಿಂದ ಶೇ.25 ರಷ್ಟು ಹಾನಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಅನುದಾನ ಸಹ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಭೀಮಾ ಪ್ರವಾಹದಿಂದ ಭಾದಿತ ಗ್ರಾಮಗಳ ಪುನರ್ವಸತಿ ಕಾರ್ಯವನ್ನು ಹಂತ-ಹಂತವಾಗಿ ತೆಗೆದುಕೊಳ್ಳಲಾಗುವುದು ಎಂದು ಮುರುಗೇಶ್ ನಿರಾಣಿ ಹೇಳಿದರು.

ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ.ಬದೋಲೆ, ತಹಶೀಲ್ದಾರ್ ಸಂಜೀವ್‍ಕುಮಾರ್ ದಾಸರ್, ಗ್ರೇಡ್-2 ತಹಶೀಲ್ದಾರ್ ಪೃಥ್ವಿರಾಜ್ ಬಿ. ಪಾಟೀಲ, ಅಫ್ಝಲ್‍ಪುರ ಸಿ.ಪಿ.ಐ ಜಗನ್ನಾಥ ಪಾಳಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News