ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿಗೆ ಅಡಿಕೆ ಬೆಳೆಗಾರರ ಸಂಘ ವಿರೋಧ

Update: 2022-07-14 17:17 GMT

ಶಿವಮೊಗ್ಗ(ಜು.14): ಮಲೆನಾಡ ಜನರ ಬದುಕನ್ನು ಕಸಿದುಕೊಳ್ಳುವ ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿ ಸರ್ಕಾರ ಜಾರಿ ಮಾಡಲು ಹೊರಟಿರುವುದನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ತೀವ್ರ ವಗಿ ಖಂಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ , ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮಲೆನಾಡ ಜನರಿಗೆ ಮಾರಕವಾಗುವ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದಿಲ್ಲ. ಆ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ, ಈಗ ಆ ಮಾತು ಸುಳ್ಳಾಗಿದ್ದು, ಇತ್ತೀಚೆಗಷ್ಟೇ ಕೇಂದ್ರದ ಅರಣ್ಯ ಸಚಿವರು ಮಲೆನಾಡಿನ ಸುಮಾರು 10 ಜಿಲ್ಲೆಗಳನ್ನೊಳಗೊಂಡ 26 ಸಾವಿರಕ್ಕೂ ಹೆಚ್ಚು ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದೆ ಎಂದರು.

ಈ ರೀತಿಯ ಘೋಷಣೆಗೆ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತು ಮಲೆನಾಡು ಪ್ರದೇಶದ ಸಂಸದರು ನೇರ ಹೊಣೆಯಾಗಿದ್ದಾರೆ. ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಸಂಸದರಾಗಿದ್ದ ಕಾಲದಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ತುಟಿಕ್ ಪಿಟಿಕ್ ಎಂದಿಲ್ಲ. ಸಂಸತ್ ನಲ್ಲಿ ಬಾಯಿ ಹೊಲಿದುಕೊಂಡು ಕುಳಿತಿದ್ದರು. ಇವರ ನಿರ್ಲಕ್ಷ್ಯದಿಂದಾಗಿಯೇ ಈ ಕಷ್ಟ ಎದುರಾಗಿದೆ. ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 475 ಗ್ರಾಮಗಳಿಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗುತ್ತದೆ. ಆ ಭಾಗದ ಜನರಿಗೆ ಯಾವ ಮೂಲ ಸೌಲಭ್ಯಗಳು ಸಿಗುವುದಿಲ್ಲ. ಪರಿಸರ ಇಲಾಖೆಯ ಒಪ್ಪಿಗೆ ಪಡೆಯಲಾಗುವುದಿಲ್ಲ. ಹಾಗಾಗಿ, ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗುತ್ತವೆ. ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದರಲ್ಲಿ ಅಡಗಿದೆ. ಕೆಲವು ಪರಿಸರವಾದಿಗಳು ಕೂಡ ಇದರ ಪರವಾಗಿದ್ದಾರೆ. ಅವರಿಗೆ ಅಲ್ಲಿನ ಅರಣ್ಯ ನಿವಾಸಿಗಳ ಜನರ ಬದುಕಿನ ಕಷ್ಟ ಗೊತ್ತಿಲ್ಲ. ನೆಮ್ಮದಿ ಕಸಿದುಕೊಳ್ಳುವ ಇಂತಹ ಸೂಕ್ಷ್ಮ ಪ್ರದೇಶಗಳು ಬೇಕಾಗಿಲ್ಲ. ಆ ಭಾಗದ ಜನರ ಜೀವ ಮತ್ತು ಜೀವನ ಈ ಕರಾಳ ಶಾಸನ ಕುತ್ತಿಗೆ ಬಿಗಿಯುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಈಗಾಗಲೇ ಪರಿಸರ ಸಂರಕ್ಷಣೆಗೆ ಹಲವು ಕಾಯ್ದೆಗಳಿವೆ. ಆ ಕಾಯ್ದೆಯ ಅನ್ವಯವೇ ಮಲೆನಾಡು ಭಾಗದ ಅರಣ್ಯ ಉಳಿಸಲು ಸಾಧ್ಯವಿದೆ. ಯಾವ ತಪ್ಪನ್ನು ಮಾಡದೇ ಅರಣ್ಯದ ಜೊತೆಗೆ ಹೊಂದಿಕೊಂಡು ಬಾಳುವ ಅಲ್ಲಿನ ಜನಸಮುದಾಯವನ್ನು ಹೊರಗೆ ದಬ್ಬಲಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಸುಪ್ರೀ ಕೋರ್ಟ್ ಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

2014 ರಿಂದಲೇ ಬಿಜೆಪಿ ಸರ್ಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ಈ ಕಾಯ್ದೆ ಜಾರಿಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. 2015 ರಿಂದ 2022 ರ ವರೆಗೆ 4 ಬಾರಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದೆಲ್ಲವೂ ಕರ್ನಾಟಕ ಸರ್ಕಾರಕ್ಕೆ ಗೊತ್ತಿದೆ. ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುವ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಮಲೆನಾಡು ಭಾಗದ ರೈತರ ಪರವಾಗಿ ಇಲ್ಲ. ಕಸ್ತೂರಿ ರಂಗನ್ ವರದಿ ಜಾರಿಗೆ ಅವರದ್ದೂ ಪಾತ್ರವಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇಕ್ಕೇರಿ ರಮೇಶ್, ಗಿರೀಶ್, ಡಿ.ಸಿ. ನಿರಂಜನ್, ಜಯ್ಯಪ್ಪ, ಪುಟ್ಟಪ್ಪಗೌಡ ಮುಂತಾದವರಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ವಿಷಯದಲ್ಲಿ ಮೌನಕ್ಕೆ ಜಾರಿದ್ದಾರೆ. ಕೇಂದ್ರಕ್ಕೆ ಯಾವುದೇ ಒತ್ತಡವನ್ನು ಹೇರಿಲ್ಲ. 2009 ರಿಂದ 2015 ರವರೆಗೆ ಕೇಂದ್ರ ಅರಣ್ಯ ಸಚಿವರ ಸಮ್ಮುಖದಲ್ಲಿಯೇ ಸಭೆಗಳು ನಡೆದರೂ ಆಗಿನ ಸಂಸದರಾಗಿದ್ದ ಯಡಿಯೂರಪ್ಪನವರು ಗೈರುಹಾಜರಾಗಿದ್ದರು. ಬಿ.ವೈ. ರಾಘವೇಂದ್ರ ಕೂಡ ಈ ಬಗ್ಗೆ ಗಮನಸೆಳೆದಿಲ್ಲ. ಶೋಭಾ ಕರಂದ್ಲಾಜೆ ಸೇರಿದಂತೆ ಯಾವೊಬ್ಬ ಸಂಸದರು ಕೂಡ ಪಶ್ಚಿಮಘಟ್ಟ ಪ್ರದೇಶದ ಜನರಿಗೆ, ರೈತರಿಗೆ, ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸಿಲ್ಲ.

-ಬಿ.ಎ ರಮೇಶ್ ಹೆಗಡೆ,ಅಧ್ಯಕ್ಷರು,ಜಿಲ್ಲಾ ಅಡಿಕೆ ಬೆಳೆಗಾರರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News