'ಜೈ ಭೀಮ್, ಜನ ಗಣ ಮನ' ಸಿನೆಮಾ ಮನ ಕಲಕಿವೆ: ಕುಮಾರಸ್ವಾಮಿ

Update: 2022-07-18 10:53 GMT

ಬೆಂಗಳೂರು: 'ಕೋವಿಡ್ ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು ಹಾಗೂ ಸಿನೆಮಾ ವೀಕ್ಷಣೆಯಲ್ಲಿಯೇ ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನೆಮಾಗಳನ್ನು ವೀಕ್ಷಿಸಿದೆ. ʼಜೈ ಭೀಮ್ʼ ಹಾಗೂ ಜನ ಗಣ ಮನ ಸೂಕ್ಷ್ಮ ಕಥಾಹಂದರದ ಈ ಸಿನೆಮಾಗಳೆರಡೂ ನನ್ನ ಮನ ಕಲಕಿವೆ, ಮತ್ತೂ ತೀವ್ರ ತಳಮಳಕ್ಕೆ ಕಾರಣವೂ ಆಗಿವೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಸಭಂಧ ಸರಣಿ ಟ್ವೀಟ್ ಮಾಡಿರುವ  ಅವರು, ಸುಪ್ರೀಂ ಕೋರ್ಟ್'ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು; ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ ಜೈಪುರದಲ್ಲಿ ನೀಡಿದ್ದ ಹೇಳಿಕೆ & ʼಜೈ ಭೀಮ್ʼ ಚಿತ್ರದಲ್ಲಿ ಅದೇ ಕೈದಿಗಳ ಸುತ್ತ ಬಿಚ್ಚಿಕೊಳ್ಳುವ ಕಠೋರ ಕಹಿಸತ್ಯಗಳ ಬಗ್ಗೆ ಇಡೀ ಭಾರತವೇ ಆಲೋಚಿಸಬೇಕು. ನಾನು ಆಲೋಚಿಸುತ್ತಿದ್ದೇನೆ. ಬದಲಾವಣೆಗೆ ಖಂಡಿತಾ ಪ್ರಯತ್ನಿಸುವೆ ಎಂದು ತಿಳಿಸಿದ್ದಾರೆ.

'ಭಾರತೀಯ ನ್ಯಾಯ ವ್ಯವಸ್ಥೆ ಬಡವರು ದಲಿತರು, ಅಶಕ್ತರಿಗೆ ಗಗನ ಕುಸುಮವಾ? ಓರ್ವ ಸಿರಿವಂತ ಅಪರಾಧಿಗೆ ಕೆಲ ಗಂಟೆಗಳಲ್ಲೇ ಜಾಮೀನು ಸಿಕ್ಕಿದರೆ, ಅದೇ ಬಡ ಅಪರಾಧಿಗಳ (ಅನೇಕ ಪ್ರಕರಣಗಳಲ್ಲಿ ಮುಗ್ಧರು) ಅರ್ಜಿಗಳಿಗೆ ಮೋಕ್ಷವೇ ಕಾಣುವುದಿಲ್ಲ. ಸರಳುಗಳ ಹಿಂದಿನ ನರಕವನ್ನು ʼಜೈ ಭೀಮ್ʼ ನೈಜವಾಗಿ ತೋರಿಸಿದೆ' ಎಂದು ಎಚ್.ಡಿಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದು ಇದನ್ನೇ. ವಿಚಾರಣೆಯೇ ಇಲ್ಲದೆ ಕೈದಿಗಳ ದೀರ್ಘಾವಧಿ ಸೆರೆ ಪ್ರಶ್ನಾರ್ಹ.ನಮ್ಮ ದೇಶದಲ್ಲಿ ಸೆರೆವಾಸದಲ್ಲಿರುವ 6.10 ಲಕ್ಷ ಕೈದಿಗಳಲ್ಲಿ ಶೇ.80ರಷ್ಟು ಜನ ವಿಚಾರಣಾಧೀನ ಕೈದಿಗಳೇ!! ಇವರೆಲ್ಲರೂ ವಿಚಾರಣೆ ಪೂರ್ಣಗೊಳ್ಳದೇ ಕಂಬಿಗಳ ಹಿಂದೆ ಜೀವಶ್ಚವಗಳಂತೆ ಬದುಕುತ್ತಿದ್ದಾರೆ' ಎಂದು ಹೇಳಿದ್ದಾರೆ.

'2017ರಲ್ಲಿ ಛತ್ತೀಸಗಢದಲ್ಲಿ CRPF ಜವಾನರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ 121 ಬುಡಕಟ್ಟು ಜನರನ್ನು ಬಂಧಿಸಲಾಗಿತ್ತು. 5 ವರ್ಷ ಅವರು ಜೈಲುಗಳಲ್ಲಿ ನರಕ ಅನುಭವಿಸಿದ ರು. ಕೊನೆಗೆ ಅವರ ಪಾತ್ರದ ಬಗ್ಗೆ ಸಾಕ್ಷ್ಯ ಇಲ್ಲ ಎಂದು ಎನ್ಐಎ ಕೋರ್ಟ್ ತೀರ್ಪು ನೀಡಿ, ಆ ಮುಗ್ಧರನ್ನು ಖುಲಾಸೆಗೊಳಿಸಿದೆ. ಇದು ಸಮಾಧಾನದ ಸಂಗತಿ' ಎಂದಿದ್ದಾರೆ.

ʼಜನ ಗಣ ಮನʼ ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತೆಯನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನೆಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು' ಎಂದು ಕುಮಾರಸ್ವಾಮಿ ಪ್ರಶಂಸಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News