ಕಸ್ತೂರಿ ರಂಗನ್ ವರದಿ ಜಾರಿ ಸಮಸ್ಯೆಗಳ ಮನವರಿಕೆಗೆ ಸಿಎಂ, ಕೇಂದ್ರ ಅರಣ್ಯ ಸಚಿವರ ಭೇಟಿಗೆ ನಿರ್ಣಯ

Update: 2022-07-18 12:30 GMT
ಫೈಲ್ ಚಿತ್ರ

ಚಿಕ್ಕಮಗಳೂರು, ಜು.18: ಕಸ್ತೂರಿ ರಂಗನ್ ವರದಿ ಜಾರಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸದ ಪರಿಣಾಮ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿ ಜಾರಿ ಮುಂದಾಗಿದ್ದು, ಆಕ್ಷೇಪಣೆಗಳ ಸಲ್ಲಿಕೆಗೆ 2 ತಿಂಗಳುಗಳ ಕಾಲಾವಕಾಶ ನೀಡಿರುವುದರಿಂದ ರಾಜ್ಯದ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವರದಿ ಜಾರಿಯಿಂದಾಗಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಜನರ ಬದುಕಿನ ಮೇಲೆ ಉಂಟಾಗಲಿರುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ವಿವಿಧ ಕಾಫಿ ಬೆಳೆಗಾರರ ಸಂಘಗಳು ಹಾಗೂ ವಿವಿಧ ದಲಿತ, ಪ್ರಗತಿಪರ, ರೈತ ಸಂಘಟನೆಗಳ ಮುಖಂಡರು ನಿರ್ಣಯಕೈಗೊಂಡರು.

ರಾಷ್ಟ್ರೀಯ ಹಸಿರು ಪೀಠದ ಆದೇಶ ಮೇರೆಗೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೇಂದ್ರದ ಪರಿಸರ ಇಲಾಖೆ ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಸಂಘ ಸೇರಿದಂತೆ ದಲಿತ, ಕಾರ್ಮಿಕ, ರೈತ, ಕನ್ನಡ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚಿಕ್ಕಮಗಳೂರು, ಕೊಡಗು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಜನಾಂದೋಲನ ನಡೆಸಲಾಗಿದೆ. ವರದಿ ಜಾರಿ ವ್ಯಾಪ್ತಿಯ ಗ್ರಾಮಪಂಚಾಯತ್‍ಗಳು ನಿರ್ಣಯ ಕೈಗೊಂಡು ಜಿಲ್ಲಾಡಳಿತ ಸೇರಿದಂತೆ ಸರಕಾರಕ್ಕೆ ವರದಿ ಸಲ್ಲಿಸಿವೆ. ಆದರೆ ರಾಜ್ಯ ಸರಕಾರ ಈ ಸಂಬಂಧ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸಲು ವಿಫಲವಾಗಿರುವ ಪರಿಣಾಮ ಮತ್ತೆ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ವರದಿ ಜಾರಿಯಾಗುವ ಭೀತಿ ಎದುರಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳೂ ಈ ಸಂಬಂಧ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಈ ವರದಿ ಜಾರಿಯಾದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರು ರೈತರು, ಕಾಫಿ, ಅಡಿಕೆ ಬೆಳೆಗಾರರು ಸೇರಿದಂತೆ ಕಾರ್ಮಿಕರು, ವರ್ತಕರ ಬದುಕು ನಾಶವಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಆಕ್ಷೇಪಣೆಗಳ ಸಲ್ಲಿಕೆಗೆ ಕೇಂದ್ರದ ಪರಿಸರ ಇಲಾಖೆ 60 ದಿನಗಳ ಕಾಲಾವಕಾಶ ನೀಡಿದ್ದು, ಈಗಾಗಲೇ 15 ದಿನಗಳು ಕಳೆದಿವೆ. ಇನ್ನುಳಿದ 45 ದಿನಗಳಲ್ಲಿ ಈ ಸಂಬಂಧ ಅಗತ್ಯ ಜನಜಾಗೃತಿಯೊಂದಿಗೆ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಬೇಕಿದೆ. ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಜಿಲ್ಲೆಗಳ ಶಾಸಕರು, ಲೋಕಸಭೆ ಸದಸ್ಯರ ನೇತೃತ್ವದಲ್ಲೇ ಹೋರಾಟ ಕೈಗೊಳ್ಳಬೇಕು. ಮೊದಲು ಈ ಜನಪ್ರತಿನಿಧಿಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 4 ಜಿಲ್ಲೆಗಳ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿ ಅವರ ಮೂಲಕ ಸಿಎಂ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಬೇಕು. ಈ ಸಂಬಂಧ ಜನಪ್ರತಿನಿಧಿಗಳಿಗೆ ಪತ್ರ ಬರೆಯಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕಾಫಿ ಬೆಳೆಗಾರ ಸತ್ಯಪಾಲ್ ಮಾತನಾಡಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಪ್ರದೇಶಗಳ ವ್ಯಾಪ್ತಿಯಲ್ಲಿ ಫಾರಂ ನಂ.50, 57ರಲ್ಲಿ ಜಮೀನು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿಲ್ಲ. ದರಖಾಸ್ತು ಅರ್ಜಿಗಳಿಗೆ ಹಂಗಾಮಿ ಹಕ್ಕುಪತ್ರ ನೀಡಲಾಗಿದೆಯೇ ಹೊರತು ಶಾಶ್ವತ ಹಕ್ಕುಪತ್ರ ನೀಡಿಲ್ಲ. ಈ ಅರ್ಜಿಗಳ ವಿಲೇವಾರಿ ಮಾಡದೇ ಕಸ್ತೂರಿ ರಂಗನ್ ವರದಿ ಜಾರಿ ಮಾಡಿದಲ್ಲಿ ಮಲೆನಾಡಿನಲ್ಲಿ ಜನರೇ ಇಲ್ಲದಂತಾಗುತ್ತದೆ. ಕೃಷಿಕರು, ರೈತರು, ಕಾಫಿ ಬೆಳೆಗಾರರು ಬದುಕು ಬೀದಿ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಳೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಸಂಬಂದ ರಾಜ್ಯ ಸರಕಾರ ಸುಪ್ರೀಂಕೋರ್ಟ್‍ನ ಹಸಿರು ಪೀಠಕ್ಕೆ ಸರಿಯಾದ ಅಫಿಡವಿಟ್ ಸಲ್ಲಿಸದ ಪರಿಣಾಮ ಸಮಸ್ಯೆ ಮತ್ತೆ ಭುಗಿಲೆದ್ದಿದೆ. ವರದಿ ಜಾರಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ರಾಜ್ಯ ಸರಕಾರಕ್ಕೆ ಸಮರ್ಪಕವಾಗಿ ಮನವರಿಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡು ಸಮಿತಿ ನಿಯೋಗ ಶೀಘ್ರ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿ ಹಸಿರು ಪೀಠಕ್ಕೆ ಸೂಕ್ತ ಅಫಿಡವಿಟ್ ಸಲ್ಲಿಸಲು ಆಗ್ರಹಿಸಬೇಕಿದೆ. ವರದಿ ಜಾರಿಯಿಂದಾಗಿ ಬೆಳೆಗಾರರಿಗೆ ಮಾತ್ರ ತೊಂದರೆ ಅನುಭವಿಸುವುದಿಲ್ಲ. ಕಾಫಿ ಉದ್ಯಮವನ್ನು ಅವಲಂಭಿಸಿರುವ ಕಾರ್ಮಿಕರು, ವರ್ತಕರೂ ಬೀದಿ ಪಾಲಾಗಲಿದ್ದಾರೆ. ಶೀಘ್ರ ಜನಪ್ರತಿನಿಧಿಗಳ ಸಭೆ ಕರೆದು ಅವರ ನೇತೃತ್ವದಲ್ಲೇ ಸಿಎಂ ಭೇಟಿಗೆ ದಿನಾಂಕ ನಿಗದಿ ಮಾಡಬೇಕೆಂದು ಸಲಹೆ ನೀಡಿದರು.

ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಹಿಂದೆ ವಿದೇಶಿ ಕಂಪೆನಿಗಳಿಂದ ದೇಣಿಗೆ ಪಡೆಯುವ ಕೆಲ ಪರಿಸರವಾದಿಗಳ ಹುನ್ನಾರ ಅಡಗಿದೆ. ಪಶ್ಚಿಮಘಟ್ಟ ನಾಶವಾದಲ್ಲಿ ಇಡೀ ಪ್ರಪಂಚವೇ ನಾಶವಾಗಲಿದೆ ಎಂಬ ಸುಳ್ಳನ್ನು ಎಲ್ಲೆಡೆ ಹಬ್ಬಿಸಲಾಗುತ್ತಿದೆ. ಪಶ್ಚಿಮಘಟ್ಟಕ್ಕೆ ಯಾರಿಂದಲೂ ತೊಂದರೆಯಾಗಿಲ್ಲ. ಅಲ್ಲಿನ ಪರಿಸರವೂ ಹಾಳಾಗಿಲ್ಲ. ಕಸ್ತೂರಿ ರಂಗನ್ ವರದಿ ಜಾರಿ ಮಾಡಿದಲ್ಲಿ ಇಲ್ಲಿನ ಜನರ ಬದುಕು ನಾಶವಾಗಲಿದೆ. ಅದರ ಬದಲು ಇರುವ ಅರಣ್ಯ ಕಾಯ್ದೆಗಳನ್ನೇ ಸರಿಯಾಗಿ ಜಾರಿ ಮಾಡಿದಲ್ಲಿ ಇಲ್ಲಿನ ಪರಿಸರದ ಸಂರಕ್ಷಣೆ ಸಾಧ್ಯವಿದೆ. ಸಿಎಂ ಬಳಿ ಈ ಸಂಬಂಧ ಚರ್ಚೆ ನಡೆಸಬೇಕೆಂದರು.

ಸಿಪಿಐ ಮುಖಂಡ ಎಸ್.ವಿಜಯ್‍ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಸಿಎಂ ಭೇಟಿ ಬಳಿಕ ಕೇಂದ್ರದ ಅರಣ್ಯ ಸಚಿವರನ್ನೂ ಭೇಟಿ ಮಾಡಿ ಸಮಸ್ಯೆಯನ್ನು ಮನವರಿಗೆ ಮಾಡುವ ಅಗತ್ಯವಿದೆ. ಸ್ಯಾಟ್‍ಲೈಟ್ ಸರ್ವೆಯ ವರದಿ ಕೈಬಿಟ್ಟು ಭೌತಿಕ ಸರ್ವೆಗೆ ಒತ್ತಾಯ ಹೇರಬೇಕಿದೆ. ಕಾಫಿ ಬೆಳೆಗಾರರ ಸಂಘದ ಮುಖಂಡರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಂಪರ್ಕ ಇದ್ದು, ಸಿಎಂ ಭೇಟಿ ಹಾಗೂ ಕೇಂದ್ರ ಸಚಿವರ ಭೇಟಿಗೆ ಮುಖಂಡರು ಮುಂದಾಗಬೇಕೆಂದರು.

ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಟಿ.ಮೋಹನ್‍ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಯೋಜನೆ ವ್ಯಾಪ್ತಿಯ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಿ ಸ್ಥಳೀಯರಿಂದ ಗ್ರಾಮಪಂಚಾಯತ್‍ಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಗ್ರಾಮಪಂಚಾಯತ್ ಸದಸ್ಯರು ವರದಿ ಜಾರಿಯ ವಿರುದ್ಧ ನಿರ್ಣಯ ಕೈಗೊಂಡು ಗ್ರಾಪಂ ಪಿಡಿಒ ಮೂಲಕ ಸರಕಾರಕ್ಕೆ ನಿರ್ಣಯ ಕಳುಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. 4 ಜಿಲ್ಲೆಗಳ ವ್ಯಾಪ್ತಿಯ ಶಾಸಕರು ಹಾಗೂ ಎಂಪಿಗಳಿಗೆ ಪತ್ರ ಬರೆದು ತುರ್ತು ಸಭೆಗೆ ಕ್ರಮವಹಿಸಲಾಗುವುದು. ಸಿಎಂ ಭೇಟಿ, ಕೇಂದ್ರ ಸಚಿವರ ಭೇಟಿ ಸಂಬಂಧ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಕಾಫಿ ಬೆಳೆಗಾರgರೀ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳು, ದಲಿತ, ರೈತ, ಕಾರ್ಮಿಕ, ಪ್ರಗತಿಪರ ಸೇರಿದಂತೆ ಎಲ್ಲ ಸಂಘಟನೆಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಕಾಫಿ ಬೆಳೆಗಾರರ ಸಂಘದ ಮುಖಂಡರು ಸೇರಿದಂತೆ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಸಲಹೆ, ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ... ಕಸ್ತೂರಿ ರಂಗನ್ ವರದಿ; ಮಲೆನಾಡಿಗರ ನಿದ್ದೆಗೆಡಿಸಿದ ಕೇಂದ್ರ ಸರಕಾರದ ಅಧಿಸೂಚನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News