ಮಡಿಕೇರಿ; 2ನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕು: ಭೂ ವಿಜ್ಞಾನಿಗಳ ಭೇಟಿ, ಪರಿಶೀಲನೆ

Update: 2022-07-22 13:22 GMT

ಮಡಿಕೇರಿ ಜು.21 : ಮಡಿಕೇರಿ ತಾಲ್ಲೂಕಿನ 2ನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಆತಂಕ ಮೂಡಿದೆ. ಬೆಟ್ಟ ಕುಸಿತವಾದರೆ ಕೆಳಭಾಗದಲ್ಲಿರುವ ಗ್ರಾಮಗಳು ನೆಲಸಮವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಜು.18ರ ಸೋಮವಾರ ರಾತ್ರಿ ಜಲಸ್ಫೋಟವಾದ ಮೂಲ ಸ್ಥಳದ ಮೇಲ್ಭಾಗದಲ್ಲಿರುವ ಬೆಟ್ಟದಲ್ಲಿ ಕಂಡು ಬಂದಿರುವ ಬಿರುಕುಗಳು ಕುಸಿತದ ಆತಂಕವನ್ನು ಸೃಷ್ಟಿಸಿದೆ. 

2018ರಲ್ಲಿ ಸುರಿದ ಮಹಾಮಳೆಯಿಂದಾಗಿ ಇದೇ ನಿಶಾನಿ ಬೆಟ್ಟದಲ್ಲಿ ದೊಡ್ಡ ಪ್ರಮಾಣದ ಜಲಸ್ಫೋಟವಾಗಿ ಭೂಕುಸಿತ ಸಂಭವಿಸಿ ಮಾನವ ಪ್ರಾಣ ಹಾನಿಯ ಘಟನೆಯೂ ನಡೆದಿತ್ತು. ಆ ವೇಳೆ ರಾಮಕೊಲ್ಲಿಯಲ್ಲಿದ್ದ ಹಳೆಯ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿತ್ತಲ್ಲದೇ, ಮಂಗಳೂರು–ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹರಿಯುತ್ತಿರುವ ಪಯಸ್ವಿನಿ ನದಿಯಲ್ಲಿ ಬೃಹತ್ ಮರದ ದಿಮ್ಮಿಗಳು, ಬಂಡೆಗಳು ಭಾರೀ ಮಣ್ಣು ಶೇಖರಣೆಯಾಗಿ ನದಿ ತನ್ನ ಪಥವನ್ನೇ ಬದಲಿಸಿ ಹರಿದಿತ್ತು. ಈ ದುರಂತದ ಸಂದರ್ಭ ಇಡೀ ಗ್ರಾಮಕ್ಕೆ ಗ್ರಾಮವೇ ಅಲ್ಲಿಂದ ಸ್ಥಳಾಂತರಗೊಂಡಿತ್ತು. 

ಭೂವಿಜ್ಞಾನಿಗಳ ಭೇಟಿ: ಮಡಿಕೇರಿ ತಾಲ್ಲೂಕು 2 ನೇ ಮೊಣ್ಣಂಗೇರಿ ಗ್ರಾಮದ ಗುಡ್ಡ ಪ್ರದೇಶ ಬಿರುಕು ಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಮಕೊಲ್ಲಿ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಹಾಗೂ ಎನ್‍ಡಿಆರ್ ಎಫ್ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.  

ಪರಿಶೀಲನೆ ಸಂದರ್ಭ ಮಳೆಯು ಹೆಚ್ಚಾದ ಕಾರಣ ಬಿರುಕು ಬಿಟ್ಟಿರುವ ಸ್ಥಳವನ್ನು ಮಳೆ ಕಡಿಮೆಯಾದ ನಂತರ ತೋರಿಸುವುದಾಗಿ ಸ್ಥಳೀಯರು ತಿಳಿಸಿದ ಹಿನ್ನೆಲೆÉ 2018 ನೇ ಸಾಲಿನಲ್ಲಿ ಬೆಟ್ಟ ಕುಸಿದಿದ್ದ ಪ್ರದೇಶ ಹಾಗೂ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ತಂಡ ಪರಿಶೀಲಿಸಿತು.  
ಒಂದು ಭಾಗದಲ್ಲಿ ಅಲ್ಪ ಪ್ರಮಾಣದ ಮಣ್ಣು ಜರಿದಿದ್ದು ಹಾಗೂ ಪಕ್ಕದ ಗುಡ್ಡದಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. 

ಗುಡ್ಡದ ಕೆಳಭಾಗದ ಪೂರ್ವ ದಿಕ್ಕಿನಲ್ಲಿ ಸುಮಾರು 900 ಮೀಟರ್ ದೂರದಲ್ಲಿ ಅಂದಾಜು 30 ಮನೆಗಳಿವೆ. ಮಳೆ ಹೆಚ್ಚಾಗಿರುವ ಕಾರಣ ಹಾಗೂ ಮಂಜು ಕವಿದಿರುವುದರಿಂದ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ, ಮಳೆ ಕಡಿಮೆಯಾದ ನಂತರ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ ತಿಳಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News