ಕೋಲಾರ: ಒಂದೇ ಸ್ಥಳದಲ್ಲಿ ಕಾಂಗ್ರೆಸ್ ನ 2 ಬಣಗಳ ಪ್ರತ್ಯೇಕ ಪ್ರತಿಭಟನೆ

Update: 2022-07-22 16:54 GMT

ಕೋಲಾರ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವುದನ್ನು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಒಂದೇ ಸ್ಥಳದಲ್ಲಿ  ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಣ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದಾರೆ. 

ಇಲ್ಲಿನ ಗಾಂಧಿ ವನದ ಬಳಿ ಶುಕ್ರವಾರ ಕೆ. ಹೆಚ್. ಮುನಿಯಪ್ಪ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಎಂಎಲ್ಸಿ ನಾರಾಯಣ ಸ್ವಾಮಿ, ಬಾಗೇಪಲ್ಲಿ ಮಾಜಿ ಶಾಸಕ ಸಂಪಂಗಿ ಜೊತೆಗಿದ್ದರು. ಕೇಂದ್ರ ಸರ್ಕಾರ ದ್ವೇಷ ರಾಜಕಾರಣದಲ್ಲಿ ತೊಡಗಿದೆ.  ಸೋನಿಯಾ ಗಾಂಧಿ ಅವರಿಗಾಗಿ  ಪ್ರಾಣ ನೀಡಲು ಸಿದ್ಧ' ಎಂದು ಕೆಹೆಚ್. ಮುನಿಯಪ್ಪ ಹೇಳಿದರು.

ಮತ್ತೊಂದು ಬದಿಯಲ್ಲಿ ರಮೇಶ್ ಕುಮಾರ್ ನೇತೃತ್ವದಲ್ಲಿ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ, ವಿಧಾ‌ನ ಪರಿಷತ್ ಸದಸ್ಯ ಅನಿಲ್ ಕುಮಾರ್ , ಶಾಸಕ ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎ. ನಾಗರಾಜ್, ಕೊತ್ತೂರು ಮಂಜುನಾಥ್  ಮತ್ತವರ ಬೆಂಬಲಿಗರ ಪ್ರತಿಭಟನೆ ನಡೆಯಿತು. 

ಉಭಯ ಬಣದವರು ಕೇಂದ್ರ ಸರ್ಕಾರದ ವಿರುದ್ಧ ಪೈಪೋಟಿಯಿಂದ  ಘೋಷಣೆ ಕೂಗಿದರು. ಈ ಹಂತದಲ್ಲಿ ಉಭಯ ಬಣಗಳ ಕಾರ್ಯಕರ್ತರ ನಡುವೆ ವಾಕ್ಸಮರವೂ ನಡೆಯಿತು.

ರಮೇಶ್ ಕುಮಾರ್ ಮಾತನಾಡಿ, 'ಮೋದಿ ಪೂರ್ವಿಕರು ಒಂದು ದಿನ ಸ್ವಾತಂತ್ರ್ಯಕ್ಕಾಗಿ ಯಾವತ್ತಾದರೂ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದಾರಾ? ಬದಲಾಗಿ ಬ್ರಿಟಿಷರ ಬೂಟ್ ಪಾಲಿಷ್ ಮಾಡುತ್ತಾ ಇದ್ದರು' ಎಂದು ಲೇವಡಿ ಮಾಡಿದರು. 

'ಈ ದೇಶಕ್ಕಾಗಿ ನಿಮ್ಮವರು ಯಾರು ರಕ್ತ ಚೆಲ್ಲಿದ್ದಾರೆ ? ಹೇಳಿ. ಗಾಂಧಿಯನ್ನು ಕೊಂದಿದ್ದು ಯಾರು ?  ಎಂದು ಪ್ರಶ್ನಿಸಿದ ಅವರು, ಪಾಪ‌ ಮುದಕನನ್ನು ಕೊಂದು ಹಾಕಿದರು. ಇಂದಿರಾ, ರಾಜೀವ್ ಅವರನ್ನು ಕೊಂದು ಹಾಕಿದರು' ಎಂದು ಆರೋಪಿಸಿದ್ದಾರೆ. 

'ಲೆಕ್ಕ ಬಾರದ ಮೂರ್ಖ ಮೋದಿ. ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ಅವರೇ ಆಸ್ತಿ. ಅವರು ನಮ್ಮ ಪಕ್ಕದಲ್ಲಿದ್ದರೆ‌ ಅದೇ  ಕೋಟಿ. ಇವರಿಗೆ ಪ್ರಜಾಪ್ರಭುತ್ವ,‌ ಸಮಾನತೆಯಲ್ಲಿ ನಂಬಿಕೆ ಇಲ್ಲ. ಈ ದೇಶಕ್ಕೆ ಮುಸ್ಲಿಮರು ತ್ಯಾಗ ಮಾಡಿದ್ದಾರೆ .ಸಂಸಾರ ಇಲ್ಲದ ಮೋದಿ ಅವರಿಗೆ ಅಡುಗೆ ಅನಿಲ ಬೆಲೆ ಎಷ್ಟಾದರೇನಂತೆ' ಎಂದು ವ್ಯಂಗ್ಯವಾಡಿದರು. 

'ಬ್ರಿಟಿಷರಿಗೆ ಬಗ್ಗಲಿಲ್ಲ.ಇನ್ನು ನಿಮ್ಮ ಆರ್. ಎಸ್. ಎಸ್. ಗೆ ಭಯ ಪಡುತ್ತೇವೆಯೇ ಎಂದು ತಿರುಗೇಟು ನೀಡಿದರು.ಮಾಧ್ಯಮದವರು ಬೆಲೆ ಏರಿಕೆ ಆದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಒಂದು ತಪ್ಪು ಮಾಡಿದ್ದನ್ನು ಅದನೇ ದೊಡ್ಡದು ಅಂತ ಮಾಡುತ್ತಾರೆ' ಎಂದು ಗುಡುಗಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಎಮ್ಮೆಲ್ಸಿ ಕೆ. ನಾರಾಯಣಸ್ವಾಮಿ,  ಬಾಗೇಪಲ್ಲಿ ಶಾಸಕ ಸಂಪಂಗಿ,  ಅನಿಲ್ ಕುಮಾರ್, ಸೀಸಂದ್ರ ಗೋಪಾಲ್, ಊರುಬಾಗಿಲು ಶ್ರೀನಿವಾಸ್, ಕೆ. ಜಯದೇವ್,  ನಗರಸಭೆ ಸದಸ್ಯ ಅಂಬರೀಶ್,  ಎಲ್. ಎ. ಮಂಜುನಾಥ,  ಉದಯಶಂಕರ್,  ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ವೆಂಕಟಪತೆಪ್ಪ, ಇಕ್ಬಾಲ್ ಅಹಮದ್,  ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News