ಅನಧಿಕೃತ ಶಾಲೆಗಳ ಮಾಹಿತಿ ಪ್ರಕಟಿಸುವಂತೆ ಶಿಕ್ಷಣ ಇಲಾಖೆ ಸೂಚನೆ

Update: 2022-07-22 17:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.22: 2022-23ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 15ರಿಂದ ಪ್ರಾರಂಭವಾಗಿದ್ದು, ಮಕ್ಕಳ ದಾಖಲಾತಿಯು ಪ್ರಾಂಭವಾಗಿದೆ. ಹೊಸದಾಗಿ ಶಾಲೆಗೆ ದಾಖಲಾಗಲು ಜು.31 ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅಧಿಕೃತ ಶಾಲೆಗೆ ದಾಖಲುಪಡಿಸುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ರಾಜ್ಯದ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಮಾಹಿತಿಯನ್ನು ಪ್ರಕಟಿಸುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. 

ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೋಂದಣಿ ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳ ವಿವರಗಳನ್ನು ಪೋಷಕರಿಗೆ ಅನುಕೂಲವಾಗುವಂತೆ ಕಚೇರಿಯ ಆವರಣದಲ್ಲಿ ಮಾಹಿತಿಯನ್ನು ಪ್ರಕಟಿಸಬೇಕು. ಸಾರ್ವಜನಿಕರಿಗೆ ಗೋಚರವಾಗುವಂತೆ ಶಾಲೆಯ ಹೆಸರು, ಮಾಧ್ಯಮ ಮತ್ತು ಪಠ್ಯಕ್ರಮ. ವಿಳಾಸದ ವಿವರಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದೆ. 

ಒಂದು ವೇಳೆ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದ್ದಲ್ಲಿ ಅಂತಹ ಶಾಲೆಗಳ ಪಟ್ಟಿಯನ್ನು ಹಾಗೂ ಕೇಂದ್ರ ಪರೀಕ್ಷಾ ಮಂಡಳಿ ಸಂಯೋಜನೆ ಹೊಂದದೇ ಇರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಬೇಕು. ಹಾಗೆಯೇ ಇಂತಹ ಶಾಲೆಗಳ ಪಟ್ಟಿಯನ್ನು ಸ್ಥಳೀಯ ದಿನಪತ್ರಿಕೆಗಳಲ್ಲಿ ಸಾರ್ವಜನಿಕರಿಗೆ ಮಾಹಿತಿಗಾಗಿ ಪ್ರಕಟಿಸಬೇಕು ಎಂದು ತಿಳಿಸಿದೆ. 

ಅನಧಿಕೃತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಅಧಿಕೃತ ಶಾಲೆಗೆ ದಾಖಲು ಮಾಡಲು ಕ್ರಮವಹಿಸುವುದು. ಅನಧಿಕೃತ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಲ್ಲಿ ಅವರ ಶೈಕ್ಷಣಿಕ ದಾಖಲೆಗಳನ್ನು ಅಧಿಕೃತಗೊಳಿಸಲಾಗುವುದು ಎಂದು ಪೋಷಕರಿಗೆ ತಿಳಿಸಬೇಕು. ಹಾಗೆಯೇ ಅನಧಿಕೃತ ಶಾಲೆಗಳನ್ನು ತಕ್ಷಣವೇ ಮುಚ್ಚುವಂತೆ ಆಡಳಿತ ಮಂಡಳಿಗೆ ಸೂಚಿಸತಕ್ಕದ್ದು ಹಾಗೂ ಒಂದು ವಾರದ ನಂತರ ಸಂಬಂಧಪಟ್ಟ ಸಿಆರ್‍ಪಿ, ಬಿಆರ್‍ಪಿ ಮತ್ತು ಶಿಕ್ಷಣ ಸಂಯೋಜಕರು ಸ್ಥಳ ಪರಿಶೀಲನೆ ನಡೆಸಿ ಶಾಲೆಯು ಮುಚ್ಚಿರುವುದನ್ನು ಖಾತರಿಪಡಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿಯನ್ನು ನೀಡುವಂತೆ ಸೂಚಿಸಿದೆ.

ಈಗಾಗಲೇ ಅನುಮತಿ ಪಡೆದು ಶಾಲೆಯನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳು ಶಾಲೆಯನ್ನು ಮುಚ್ಚಲು ನಿರ್ಧರಿಸಿ ಠರಾವು ಮಾಡಿದ್ದಲ್ಲ, ಒಂದು ಶೈಕ್ಷಣಿಕ ವರ್ಷದ ಮೊದಲೇ ಶಾಲೆಯಲ್ಲಿ ವ್ಯಾಸಂಗ ವ್ಯಾಪ್ತಿಯ ಸಹನಿರ್ದೇಶಕರಿಗೆ ಸಲ್ಲಿಸಿ ಒಂದು ಪ್ರತಿಯನ್ನು ಆಯಾ ವ್ಯಾಪ್ತಿಯ ನಿರ್ದೇಶಕರಿಗೆ ಕಡ್ಡಾಯವಾಗಿ ಪ್ರತಿ ತಿಂಗಳ 15ರಂದು ಸಲ್ಲಿಸುವಂತೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News