ಹೈಕೋರ್ಟ್ ಆದೇಶದಂತೆ ಆರ್ ಟಿಒ ಇನ್‍ಸ್ಪೆಕ್ಟರ್ ಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

Update: 2022-07-23 12:36 GMT

ಬೆಂಗಳೂರು, ಜು.23: ಹೈಕೋರ್ಟ್ ನೀಡಿದ ಆದೇಶದಂತೆ ಪ್ರಾದೇಶಿಕ ಸಾರಿಗೆ ಕಚೇರಿಯ(ಆರ್‍ಟಿಒ) 141 ಮೋಟಾರು ವಾಹನ ನಿರೀಕ್ಷಕರ ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಬಿಡುಗಡೆ ಮಾಡಿದೆ.

ಕಳೆದ 6 ವರ್ಷಗಳಿಂದ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಸರಕಾರಿ ನೌಕರಿ ಸಿಗುವ ಕಾಲ ಕೂಡಿ ಬಂದಿದ್ದು, ಶೈಕ್ಷಣಿಕ ದಾಖಲಾತಿ ಪರಿಶೀಲನೆ ಬಳಿಕ ಕೆಲವೇ ದಿನಗಳಲ್ಲಿ ನೇಮಕಾತಿ ಆದೇಶ ಪ್ರತಿ ಕೈಸೇರಲಿದೆ.

2016ರಲ್ಲಿ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, 6 ವರ್ಷ ಕಳೆದಿದೆ. ಉದ್ಯೋಗಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಇನ್ನೂ ಕೋರ್ಟ್ ಕಾರಿಡಾರ್‍ಗಳಲ್ಲೇ ಓಡಾಡುತ್ತಾ ಅವರ ಅತ್ಯಮೂಲ್ಯವಾದ ಸಮಯ ಕಳೆದುಹೋಗಿದೆ ಎಂದು ಇತ್ತೀಚೆಗೆ ಹೈಕೋರ್ಟ್ ಅಸಮಾಧಾನದಿಂದ ಆದೇಶಿಸಿದ ಬಳಿಕ ಕೆಪಿಎಸ್ಸಿ ಪಟ್ಟಿ ಬಿಡುಗಡೆಗೊಳಿಸಿದೆ. ಅಂತಿಮ ಆಯ್ಕೆ ಪಟ್ಟಿಯ 141 ಅಭ್ಯರ್ಥಿಗಳ ಪೈಕಿ 23 ಅಭ್ಯರ್ಥಿಗಳು ಹೈದರಾಬಾದ್ ಕರ್ನಾಟಕ ಭಾಗದ ಮೀಸಲಾತಿ ಅನ್ವಯ ಆಯ್ಕೆಯಾಗಿದ್ದಾರೆ.

2022 ಎ.30ರಂದು ಪ್ರಕಟಿಸಿರುವ 141 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನೇ ಆಧರಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಕ್ರಮ ಸಂಖ್ಯೆ 2ರ ಭೀಮನಗೌಡ ಪಾಟೀಲ, ಕ್ರಮ ಸಂಖ್ಯೆ 10ರ ಪ್ರಶಾಂತ್ ಮುನೋಳಿ ಮತ್ತು ಕ್ರಮ ಸಂಖ್ಯೆ 27ರಲ್ಲಿನ ದೀಪಕ್ ಎಲ್. ಅವರು ಸದರಿ ಆಯ್ಕೆ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಡಬೇಕು ಎಂದು ಖುದ್ದು ಹಾಜರಾಗಿ ಮನವಿ ಮಾಡಿದ್ದರಿಂದ ಆ ಮೂವರನ್ನು ಕೈಬಿಡಲಾಗಿದೆ.

ಅಭ್ಯರ್ಥಿಗಳ ಸುದೀರ್ಘ ಹೋರಾಟ: 2016ರ ಫೆಬ್ರವರಿಯಲ್ಲಿ 150 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. 2019ರ ಜುಲೈನಲ್ಲಿ 129 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಸೇವಾನುಭವ ಪತ್ರ ಸಲ್ಲಿಕೆ ವಿಚಾರವಾಗಿ ಆಯ್ಕೆ ವಂಚಿತ ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿ ಕಾನೂನು ಹೋರಾಟ ಆರಂಭಿಸಿದ್ದರು. ನಂತರ ಮೆರಿಟ್ ಹಾಗೂ ಸೇವಾನುಭವ ಪತ್ರ ನಿಯಮದ ಆಧಾರದಲ್ಲಿ ಹೊಸ ಪಟ್ಟಿ ಸಿದ್ಧಪಡಿಸಲು 2021ರ ಆ.25ರಂದು ಹೈಕೋರ್ಟ್ ಆದೇಶಿಸಿತ್ತು. 2022 ಎ.30ರಂದು 141 ಅಭ್ಯರ್ಥಿಗಳ ಹೊಸದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News